

| ಹರ್ಷವರ್ಧನ್ ಬ್ಯಾಡನೂರು
ಚಿತ್ರ: ಟಗರು ಪಲ್ಯ
ನಿರ್ದೇಶನ : ಉಮೇಶ್ ಕೆ. ಕೃಪಾ
ನಿರ್ಮಾಣ : ಡಾಲಿ ಧನಂಜಯ
ತಾರಾಗಣ : ನಾಗಭೂಷಣ್, ಅಮೃತಾ ಪ್ರೇಮ್, ರಂಗಾಯಣ ರಘು, ತಾರಾ ಅನುರಾಧ, ಶರತ್ ಲೋಹಿತಾಶ್ವ, ವಾಸುಕಿ ವೈಭವ್, ಬಿರಾದಾರ್, ಚಿತ್ರ ಶೆಣೈ, ಕಾರ್ತಿಕ್, ಮಹಾಂತೇಶ್ ಮುಂತಾದವರು
ಮಗಳು (ಅಮೃತಾ ಪ್ರೇಮ್) ಸಿಟಿ ಹುಡುಗನನ್ನು (ವಾಸುಕಿ ವೈಭವ್) ಮದುವೆಯಾಗಿ ಚೆನ್ನಾಗಿಬೇಕು ಎಂಬ ಆಸೆಯೊಂದಿಗೆ ಅಪ್ಪ (ರಂಗಾಯಣ ರಘು) ದೇವಿಯ ಬಳಿ ಹರಕೆ ಹೊತ್ತಿರುತ್ತಾನೆ. ಊರಿನ ಜನರ ಜತೆಗೆ ಹುಡುಗನ ಕುಟುಂಬವೂ ಹರಕೆ ತೀರಿಸುವ ಜಾಗಕ್ಕೆ ಬಂದಿರುತ್ತದೆ. ದೇವಿಗೆ ಟಗರು ಬಲಿ ಕೊಟ್ಟು, ಹರಕೆ ತೀರಿಸಿ ಬರಲು ಹೋಗುವ ಮಂದಿಗೆ ಹಲವು ವಿಘ್ನಗಳು ಎದುರಾಗುತ್ತವೆ. ಪ್ರತಿ ಬಾರಿ ಸಮಸ್ಯೆ ಎದುರಾದಾಗಲೂ ಮಾನವ ಪ್ರಕೃತಿ ಸಂಬಂಧ, ಪ್ರಾಣಿ ಮನುಷ್ಯರ ನಡುವಿನ ಸಂಬಂಧ, ಮನುಷ್ಯ ಮನುಷ್ಯರ ನಡುವಿನ ಸಂಬಂಧ… ಹೀಗೆ ಸಂಬಂಧಗಳ ಅನಾವರಣವಾಗುತ್ತಾ ಸಾಗುತ್ತದೆ.
ಇದನ್ನೂ ಓದಿ : ಜೈಲಿನಿಂದ ನಟ ವಿನಾಯಕನ್ ಜಾಮೀನಿನ ಮೇಲೆ ಬಿಡುಗಡೆ..!
‘ಟಗರು ಪಲ್ಯ’ ಒಂದೇ ದಿನದಲ್ಲಿ ನಡೆಯುವ ಕಥೆ. ಮೊದಲ ಪ್ರಯತ್ನದಲ್ಲಿಯೇ ನಿರ್ದೇಶಕ ಉಮೇಶ್ ಕೆ. ಕೃಪಾ ಒಂದೊಳ್ಳೆ ಮನರಂಜನಾತ್ಮಕ ಸಿನಿಮಾ ಕಟ್ಟಿ ಕೊಟ್ಟಿದ್ದಾರೆ. ಜತೆಗೆ ಎಲ್ಲ ಸಂಬಂಧಗಳ ಪ್ರಾಮುಖ್ಯದ ಬಗ್ಗೆ ಹೇಳುವ ಪ್ರಯತ್ನ ಮಾಡಿದ್ದಾರೆ. ಮಂಡ್ಯ, ಮದ್ದೂರು, ಕೊಳ್ಳೆಗಾಲ ಭಾಗಗಳ ಸಂಭಾಷಣೆ ಚಿತ್ರದ ಪ್ರಮುಖ ಆಕರ್ಷಣೆ. ಮೊದಲರ್ಧ ಹಾಸ್ಯದ ಹೊನಲು ಹರಿಸುವ ಉಮೇಶ್, ದ್ವಿತೀಯಾರ್ಧದಲ್ಲಿ ಕಣ್ಣುಗಳನ್ನು ಒದ್ದೆಯಾಗಿಸುತ್ತಾ, ಕ್ಲೈಮ್ಯಾಕ್ಸ್‌ನಲ್ಲಿ ಒಂದೊಳ್ಳೆ ಸಂದೇಶದೊಂದಿಗೆ ಪ್ರೇಕ್ಷಕರ ಮನಸ್ಸಿನೊಳಗೆ ಚಿತ್ರವನ್ನು ಇಳಿಸುತ್ತಾರೆ. ಈ ಚಿತ್ರದಲ್ಲಿ ನಾಯಕ, ನಾಯಕಿಯಿಲ್ಲ. ಪ್ರತಿಯೊಂದು ಪಾತ್ರವೂ ಹೀರೋ, ಹೀರೋಯಿನ್. ಅಷ್ಟರ ಮಟ್ಟಿಗೆ ಎಲ್ಲ ಪಾತ್ರಗಳಿಗೂ ಒತ್ತು ನೀಡಿದ್ದಾರೆ. ಎಲ್ಲ ಪಾತ್ರಗಳೂ ನಗಿಸುತ್ತವೆ.
ನಾಗಭೂಷಣ್ ಎಂದಿನಂತೆ ನೈಜ ಅಭಿನಯದ ಮೂಲಕ ಗಮನ ಸೆಳೆಯುತ್ತಾರೆ. ಅಮೃತಾ ಪ್ರೇಮ್ ಮೊದಲ ಚಿತ್ರವಾದರೂ ತಮ್ಮ ಬೆಸ್ಟ್ ನೀಡಲು ಪ್ರಯತ್ನಿಸಿದ್ದು, ಭರವಸೆ ಮೂಡಿಸುತ್ತಾರೆ. ಟಗರು ತಲೆ ಆಡಿಸುತ್ತಿಲ್ಲ ಅಂತ ಅಪ್ಪ ರಂಗಾಯಣ ರಘು, ಮಗಳು ಮದುವೆಗೆ ತಲೆ ಆಡಿಸುತ್ತಿಲ್ಲ ಅಂತ ಅಮ್ಮ ತಾರಾ ಅನುರಾಧ ಇಬ್ಬರು ಸ್ಪರ್ಧೆಗೆ ಬಿದ್ದಂತೆ ನಟಿಸಿದ್ದಾರೆ. ಅವರು ತಮ್ಮ ಪಾತ್ರಗಳಿಗೆ ಮಾತ್ರವಲ್ಲದೇ ಇಡೀ ಚಿತ್ರಕ್ಕೆ ಜೀವ ತುಂಬಿದ್ದಾರೆ. ಶರತ್ ಲೋಹಿತಾಶ್ವ, ಬಿರಾದಾರ್, ಚಿತ್ರ ಶೆಣೈ, ಮಹಾಂತೇಶ್, ಕಾರ್ತಿಕ್ ಅಚ್ಚುಕಟ್ಟಾಗಿ ಪಾತ್ರಗಳನ್ನು ನಿಭಾಯಿಸಿದ್ದಾರೆ. ವಾಸುಕಿ ವೈಭವ್ ಸಂಗೀತದಲ್ಲಿ ಹಾಡುಗಳು ಅಂದವಾಗಿವೆ. ಮನರಂಜನೆಯ ಭರ್ಜರಿ ಬಾಡೂಟ ಬಯಸುವವರು ‘ಟಗರು ಪಲ್ಯ’ ಸವಿಯಬಹುದು.