ಪ್ರಿಯಾಂಕಾ ಮಗಳ ಪಾತ್ರದಲ್ಲಿ ಮಾನ್ವಿತಾ ; ಲೋಹಿತ್ ನಿರ್ದೇಶನದ ‘ಕ್ಯಾಪ್ಚರ್’ ಚಿತ್ರದಲ್ಲಿ ನಟನೆ

Manvitha Priyanka (6)
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಇತ್ತೀಚಿನ ವರ್ಷಗಳಲ್ಲಿ ನಟಿ ಮಾನ್ವಿತಾ ಕಾಮತ್ ಚಿತ್ರರಂಗದಲ್ಲಿ ಅಪರೂಪವಾಗಿದ್ದಾರೆ. 2020ರಲ್ಲಿ ರಿಲೀಸ್ ಆದ ‘ಇಂಡಿಯಾ ವರ್ಸಸ್ ಇಂಗ್ಲೆಂಡ್’ ಚಿತ್ರದ ನಂತರ, ಕಳೆದ ವರ್ಷ ತೆರೆಕಂಡ ‘ಶಿವ 143’ ಬಳಿಕ ಅವರು ಮತ್ತೆ ತೆರೆಯ ಮೇಲೆ ಕಾಣಿಸಿಕೊಂಡಿಲ್ಲ. ಆದರೆ, ಇದೀಗ ಮಾನ್ವಿತಾ ಮತ್ತೆ ಅಭಿಮಾನಿಗಳ ಮುಂದೆ ಬರಲು ರೆಡಿಯಾಗಿದ್ದಾರೆ. ಲೋಹಿತ್ ನಿರ್ದೇಶನದ ‘ಕ್ಯಾಪ್ಚರ್’ ಚಿತ್ರದಲ್ಲಿ ಪ್ರಿಯಾಂಕಾ ಉಪೇಂದ್ರ ನಾಯಕಿಯಾಗಿದ್ದು, ಅವರ ಮಗಳ ಪಾತ್ರದಲ್ಲಿ ಮಾನ್ವಿತಾ ನಟಿಸುತ್ತಿದ್ದಾರೆ.

‘ಕ್ಯಾಪ್ಚರ್’ ಒಂದು ಹಾರರ್ ಚಿತ್ರವಾಗಿದ್ದು, ವಿಶ್ವದಲ್ಲೇ ಮೊದಲ ಬಾರಿಗೆ ಸಂಪೂರ್ಣವಾಗಿ ಸಿಸಿಟಿವಿ ಪರಿಕಲ್ಪನೆಯಲ್ಲಿ ಚಿತ್ರೀಕರಣ ಮಾಡಲಾಗಿದೆ. ಕೆಲ ದಿನಗಳ ಹಿಂದಷ್ಟೇ ಚಿತ್ರತಂಡ ಪ್ರಿಯಾಂಕಾ ಉಪೇಂದ್ರ ಫಸ್ಟ್ ಲುಕ್ ಬಿಡುಗಡೆ ಮಾಡಿತ್ತು. ಮಾನ್ವಿತಾ ಇದೇ ಮೊದಲ ಬಾರಿಗೆ ಹಾರರ್ ಚಿತ್ರದಲ್ಲಿ ಅಭಿನಯಿಸಿದ್ದು, ಸ್ನೇಹಾ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಈ ಬಗ್ಗೆ ಮಾನ್ವಿತಾ, ‘ಮೊದಲ ಬಾರಿಗೆ ಹಾರರ್ ಚಿತ್ರದಲ್ಲಿ ನಟಿಸಿದ್ದೇನೆ. ಮೊದಲು ತುಂಬ ಭಯವಿತ್ತು. ಆದರೆ, ಪಾತ್ರ ಚೆನ್ನಾಗಿರುವ ಕಾರಣ, ಒಪ್ಪಿಕೊಂಡೆ. 15 ದಿನಗಳ ಕಾಲ ಗೋವಾದಲ್ಲಿ ಶೂಟಿಂಗ್ ಮಾಡಿದೆವು. ಪ್ರಿಯಾಂಕಾ ಉಪೇಂದ್ರ ಮೇಡಂ ಜತೆ ಕೆಲಸ ಮಾಡಿದ್ದು ಖುಷಿ ನೀಡಿತು. ಶೂಟಿಂಗ್ ಪೂರ್ಣಗೊಳಿಸಿ ಮನೆಗೆ ವಾಪಸ್ಸಾಗುತ್ತಲೇ ಜ್ವರ ಬಂದು ಮಲಗಿದ್ದೆ’ ಎಂದು ಹೇಳಿಕೊಳ್ಳುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net