ಹಾಸನದ ಎಸ್.ಬಿ.ಜಿ ಚಿತ್ರಮಂದಿರದಲ್ಲಿ 'ರೈಡರ್' ಚಿತ್ರ ಪ್ರದರ್ಶನ ಕಾಣುತ್ತಿದ್ದ ಕಾರಣ ಅಲ್ಲಿಗೆ ನಿಖಿಲ್ ಕುಮಾರಸ್ವಾಮಿ ಭೇಟಿ ನೀಡಿದ್ದರು. ನಂತರ ಮೂರು ಬೇರೆ ಥಿಯೇಟರ್ಗಳಿಗೂ ನಿಖಿಲ್ ಭೇಟಿ ಕೊಟ್ಟಿದ್ದು, ಅವರನ್ನು ನೋಡಲು ಹೆಚ್ಚು ಜನ ಸೇರಿದ ಕಾರಣ ನೂಕಾಟ-ತಳ್ಳಾಟ ಸಹಜವಾಗಿತ್ತು. ಮತ್ತೊಂದೆಡೆ, ಹಾಸನದ ಸಹ್ಯಾದ್ರಿ ಚಿತ್ರಮಂದಿರದಲ್ಲಿ 'ಬಡವ ರಾಸ್ಕಲ್' ಸಿನಿಮಾ ಪ್ರದರ್ಶನ ಕಾಣುತ್ತಿದ್ದು, ಅಲ್ಲಿಗೆ ನಟ ರಾಕ್ಷಸ ಡಾಲಿ ಧನಂಜಯ್ ಅವರು ಭೇಟಿ ಕೊಟ್ಟರು. ಡಾಲಿ ಅವರ ಹುಟ್ಟೂರು ಹಾಸವಾಗಿದ್ದು, ಚಿತ್ರಮಂದಿರಕ್ಕೆ ಆಗಮಿಸಿದ ನಟನನ್ನು ಅಭಿಮಾನಿಗಳು ಇನ್ನೂ ಅದ್ದೂರಿಯಾಗಿ ಸ್ವಾಗತಿಸಿದರು. ಅಭಿಮಾನಿಗಳ ಒತ್ತಾಸೆಯ ಮೆರೆಗೆ ಕಾರಿನ ತೆರೆದ ಮೇಲ್ಭಾಗದಲ್ಲಿ ನಿಂತು ಕೊಂಡು ಮೆರವಣಿಗೆಯಂತೆ ಬೇರೆ ಬೇರೆ ಚಿತ್ರಮಂದಿರಗಳಿಗೂ ಡಾಲಿ ತೆರಳಿದರು.