

ಬೆಂಗಳೂರು: ಕೆಜಿಎಫ್ ಚಾಪ್ಟರ್ 2 ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲೊಂದು. ಈಗಾಗಲೇ ಮೊದಲ ಭಾಗಕ್ಕೆ ಸಿಕ್ಕ ಪ್ರತಿಕ್ರಿಯೆಯಿಂದ ಎರಡನೇ ಭಾಗದ ಮೇಲೆ ಇಡೀ ದೇಶದ ಚಿತ್ರಪ್ರೇಮಿಗಳ ಕಣ್ಣಿದೆ. ಇನ್ನೇನು ಜ. 8ರ ಯಶ್ ಜನ್ಮದಿನಕ್ಕೆ ಟೀಸರ್ ಬಿಡುಗಡೆ ಆಗಲಿದೆ. ಈ ನಡುವೆ ಹೊಂಬಾಳೆ ಸಂಸ್ಥೆ ಒಂದಷ್ಟು ವಿಶೇಷತೆಗಳನ್ನು ಅಳವಡಿಸಿಕೊಂಡು ಟೀಸರ್ ಬಿಡುಗಡೆ ಮಾಡುತ್ತಿದ್ದಾರೆ.
ಜ. 8ಕ್ಕೆ ಬಿಡುಗಡೆ ಆಗಲಿರುವ ಟೀಸರ್ ಅನ್ನು ಬೇರಾವ ಸೋಷಿಯಲ್ ಮೀಡಿಯಾದಲ್ಲಿ ಹಾಕದಂತೆ ಚಿತ್ರತಂಡ ಮನವಿ ಮಾಡಿದೆ. ಹೊಂಬಾಳೆ ಯೂಟ್ಯೂಬ್ ಚಾನಲ್ನಲ್ಲಷ್ಟೇ ಈ ವಿಡಿಯೋ ಪ್ರಸಾರವಾಗಲಿರುವುದರಿಂದ ಅತಿ ಹೆಚ್ಚು ವೀಕ್ಷಣೆ ಪಡೆದ ಟೀಸರ್ ಪಟ್ಟಿಗೆ ಸೇರುವಂತೆ ಮಾಡಿ ಎಂದು ಹೊಂಬಾಳೆ ಸಂಸ್ಥೆ ತಿಳಿಸಿದೆ.
ಯೂಟ್ಯೂಬ್ನಿಂದ ಟೀಸರ್ ಡೌನ್ಲೋಡ್ ಮಾಡಿಕೊಂಡು, ಸೋಷಿಯಲ್ ಮೀಡಿಯಾ, ವಾಟ್ಸಾಪ್ ಸ್ಟೇಟಸ್ಗಳಲ್ಲಿಯೂ ಹಾಕುವ ಬದಲು, ವಾಟ್ಸಾಪ್, ಫೇಸ್ಬುಕ್, ಇನ್ಸ್ಟಾಗ್ರಾಂ, ಟ್ವಿಟರ್ನಲ್ಲಿ ಲಿಂಕ್ ಶೇರ್ ಮಾಡುವಂತೆ ಸಂಸ್ಥೆ ತಿಳಿಸಿದೆ. ಸದ್ಯ ಟೀಸರ್ ಬಿಡುಗಡೆಗೆ ಕೌಂಟ್ಡೌನ್ ಶುರುವಾಗಿದ್ದು, ಅಭಿಮಾನಿ ವಲಯದಲ್ಲಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ದೊಡ್ಡಬಳ್ಳಾಪುರದ ಸೌಂದರ್ಯ ಮಹಲ್ ಚಿತ್ರಮಂದಿರದಲ್ಲಿ ಯಶ್ ಅಭಿಮಾನಿಗಳೆಲ್ಲ ಸೇರಿ ಟೀಸರ್ ಬಿಡುಗಡೆ ಕಾರ್ಯಕ್ರಮವನ್ನೇ ಹಮ್ಮಿಕೊಂಡಿದ್ದಾರೆ. ಟೀಸರ್ ವೀಕ್ಷಣೆಗೆ ಉಚಿತವಾಗಿ ಪ್ರವೇಶವನ್ನೂ ಆಯೋಜಿಸಿದ್ದಾರೆ.