

ಬೆಂಗಳೂರು: ಹೊಸ ಹೊಸ ಧಾರಾವಾಹಿಗಳ ಮೂಲಕ ನಾಡಿನ ಹೆಂಗಳೆಯರ ಹೃದಯ ಗೆದ್ದ ಸ್ಟಾರ್ ಸುವರ್ಣ ವಾಹಿನಿ ಇದೀಗ ಮತ್ತೊಂದು ಧಾರಾವಾಹಿ ಮೂಲಕ ಎಲ್ಲರ ಮುಂದೆ ಬರುತ್ತಿದೆ. ಹೊಸ ವರ್ಷಕ್ಕೆ ಹೊಸ ಆಲೋಚನೆಯ ‘ರುಕ್ಕು’ ಧಾರಾವಾಹಿ ಪ್ರಸಾರವಾಗುತ್ತಿದೆ. ಜ. 4ರ ಸೋಮವಾರದಿಂದ ಶನಿವಾರದ ವರಗೆ ರಾತ್ರಿ 8.30ಕ್ಕೆ ರೈತ ಮಹಿಳೆ ರುಕ್ಕುವಿನ ಕಥೆಯನ್ನು ಕನ್ನಡ ಕಿರುತೆರೆ ವೀಕ್ಷಕರು ಕಣ್ತುಂಬಿಕೊಳ್ಳಬಹುದು.
ಹಳ್ಳಿ ಹೆಣ್ಣು ಮಕ್ಕಳೆಂದರೆ ಮೂಗು ಮುರಿಯುವ ಜನರೆದುರು, ಆತ್ಮವಿಶ್ವಾಸ ಮತ್ತು ಛಲದಿಂದ ಮನೆಯ ಜವಾಬ್ದಾರಿ ಹೊತ್ತಿರುವ ಮುಗ್ಧ ಮನಸ್ಸಿನ ಗಟ್ಟಿಗಿತ್ತಿ ರುಕ್ಕು. ತಂದೆಯಿಲ್ಲದ ಕುಟುಂಬಕ್ಕೆ ಆಧಾರ ಸ್ತಂಭವಾಗಿರುವ ರುಕ್ಕು, ಅಕ್ಕನ ಮದುವೆ ಮಾಡಿ, ತಂಗಿಯ ವಿದ್ಯಾಭ್ಯಾಸಕ್ಕಾಗಿ ನಿಸ್ವಾರ್ಥವಾಗಿ ದುಡಿಯುತ್ತಿರುತ್ತಾಳೆ. ಓದು ಬರಹವಿಲ್ಲದಿದ್ದರೂ, ಆಲೋಚನೆಯಲ್ಲಿ ಶ್ರೀಮಂತಿಕೆ, ಜೀವನದಲ್ಲಿ ಸರಳತೆಯಿರಬೇಕು ಎಂದು ನಂಬಿರುವ ರುಕ್ಕುವಿನದ್ದು ಎಲ್ಲರೂ ಮೆಚ್ಚುವ ವ್ಯಕ್ತಿತ್ವ. ತನ್ನ ತಂಗಿ ರಾಧಿಕಾ ಪಾಲಿಗೆ ರುಕ್ಕು ತಾಯಿಯಿದ್ದಂತೆ. ರಾಧಿಕಾಗೂ ಅಕ್ಕ ಅಂದ್ರೆ ಅಪಾರ ಹೆಮ್ಮೆ ಮತ್ತು ಗೌರವ.
ಇತ್ತ ರುಕ್ಕುವಿನ ಜೀವನದಲ್ಲಿ ದೊಡ್ಡ ಪ್ರಭಾವ ಬೀರುವ ಮತ್ತೊಂದು ಪಾತ್ರ ಬಂಗಾರಮ್ಮ. ಊರಿನ ಮುಖ್ಯಸ್ಥೆಯಾಗಿರುವ ಬಂಗಾರಮ್ಮ ಪ್ರತಿಷ್ಠೆ ಮತ್ತು ಮರ್ಯಾದೆಗೆ ಮತ್ತೊಂದು ಹೆಸರು. ನಾಯಕ ಮುರುಳಿಯ ತಾಯಿಯೂ ಹೌದು. ಹೊಲ ಗದ್ದೆ ಬೇಸಾಯವೆಂದು ತನ್ನಷ್ಟಕ್ಕೆ ತನ್ನ ಪ್ರಪಂಚದಲ್ಲೇ ತೃಪ್ತಿ ಕಾಣುವ ರುಕ್ಕು ಬದುಕು ಬಂಗಾರಮ್ಮನ ಪ್ರವೇಶದಿಂದ ಏನೆಲ್ಲ ಆಗುತ್ತದೆ ಎಂಬುದೇ ಇದರ ಕಥೆ. ರಾಮ್ ಜಿ ಈ ಧಾರಾವಾಹಿಯ ನಿರ್ದೇಶನದ ಜತೆಗೆ ನಿರ್ವಣದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ಜ.4ರಿಂದ ರಾತ್ರಿ 8.30ಕ್ಕೆ ನೇಗಿಲಯೋಗಿಯ ಕತೆ ‘ರುಕ್ಕು’ ಪ್ರಸಾರವಾಗಲಿದೆ.