

ಬೆಂಗಳೂರು: ಎಸ್. ನಾರಾಯಣ್ ನಿರ್ದೇಶನದ ಸೂಪರ್ ಹಿಟ್ ಚಿತ್ರಗಳ ಪೈಕಿ 'ಚಂದ್ರ ಚಕೋರಿ' ಸಹ ಒಂದು. ಶ್ರೀಮುರಳಿ ಅಭಿನಯದ ಈ ಚಿತ್ರವು ಬೆಳಗಾವಿಯಲ್ಲಿ ಒಂದು ವರ್ಷ ಪ್ರದರ್ಶನ ಕಂಡಿತ್ತು. ಈ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಶ್ರೀಮುರಳಿಗೆ ದೊಡ್ಡ ಬ್ರೇಕ್ ನೀಡಿತ್ತು.
ಆದರೆ, ಈ ಚಿತ್ರದಲ್ಲಿ ಶ್ರೀಮುರಳಿ ಬದಲು ಆದಿತ್ಯ ನಟಿಸಬೇಕಿತ್ತು ಎಂದು ಸ್ವತಃ ಆ ಚಿತ್ರದ ನಿರ್ದೇಶಕ ಎಸ್. ನಾರಾಯಣ್ ಹೇಳಿಕೊಂಡಿದ್ದಾರೆ. ಇದೀಗ ಆದಿತ್ಯ ಅಭಿನಯದಲ್ಲಿ ಅವರು '5ಡಿ' ಎಂಬ ಚಿತ್ರವನ್ನು ಪ್ರಾರಂಭಿಸಿದ್ದಾರೆ. ಇತ್ತೀಚೆಗೆ ಆ ಚಿತ್ರದ ಶೀರ್ಷಿಕೆ ಬಿಡುಗಡೆ ಅನಾವರಣ ಸಮಾರಂಭವಿದ್ದು, 'ಚಾಲೆಂಜಿಂಗ್ ಸ್ಟಾರ್' ದರ್ಶನ್, ಶೀರ್ಷಿಕೆ ಬಿಡುಗಡೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಎಸ್. ನಾರಾಯಣ್, ತಾವು ಆದಿತ್ಯ ಜತೆಗೆ 'ಚಂದ್ರ ಚಕೋರಿ' ಚಿತ್ರ ಮಾಡಬೇಕಿತ್ತು ಎಂದು ಹೇಳಿಕೊಂಡಿದ್ದಾರೆ.
ಈ ಕುರಿತು ಮಾತನಾಡಿದ ಅವರು, 'ನಾನು ಮತ್ತು ಆದಿತ್ಯ ಈ ಹಿಂದೆಯೇ ಒಟ್ಟಿಗೆ ಚಿತ್ರ ಮಾಡಬೇಕಿತ್ತು. ಆದರೆ, ಕಾರಣಾಂತರಗಳಿಂದ ಅದು ಕೈಗೂಡಿರಲಿಲ್ಲ. ನಾನು 'ಚಂದ್ರ ಚಕೋರಿ' ಚಿತ್ರ ಮಾಡುವಾಗ, ಅವರ ಅಭಿನಯದಲ್ಲಿ ಮಾಡಬೇಕು ಎಂದುಕೊಂಡಿದ್ದೆ. 'ಕುರಿಗಳು ಸಾರ್ ಕುರಿಗಳು' ಚಿತ್ರದಲ್ಲಿ ನಟಿಸುವಾಗ, ಚಿತ್ರೀಕರಣಕ್ಕೆ ಆದಿತ್ಯ ಸಹ ಬರುತ್ತಿದ್ದರು. ನನ್ನ ಚಿತ್ರಕ್ಕೆ ಹೊಸ ಮುಖದ ಅವಶ್ಯಕತೆ ಇದ್ದು, ಆದಿತ್ಯ ಅವರನ್ನೇ ಹಾಕಿಕೊಂಡು ಯಾಕೆ ಚಿತ್ರ ಮಾಡಬಾರದು ಎಂದನಿಸಿತ್ತು. ಈ ವಿಷಯವನ್ನು ಅವರ ತಂದೆ ಎಸ್.ವಿ. ರಾಜೇಂದ್ರ ಸಿಂಗ್ ಬಾಬು ಅವರ ಮುಂದಿಟ್ಟಾಗ, ತಾವೇ ತಮ್ಮ ಮಗನನ್ನು 'ಲವ್' ಎನ್ನುವ ಚಿತ್ರದ ಮೂಲಕ ಪರಿಚಯಿಸುತ್ತಿರುವುದಾಗಿ ಹೇಳಿದ್ದರು. ಕೊನೆಗೆ ನಾನು ಆದಿತ್ಯ ಅವರನ್ನು ಬಿಟ್ಟು ಶ್ರೀಮುರಳಿ ಅವರ ಜತೆಗೆ ಚಿತ್ರ ಮಾಡಿದೆ' ಎಂದು ನೆನಪಿಸಿಕೊಂಡರು.
ಆದಿತ್ಯ ಅವರನ್ನು ನಿರ್ದೇಶಿಸುವ ಅವಕಾಶ ಸಿಗದಿದ್ದರೂ, ಅವರ ನಿರ್ಮಾಣದಲ್ಲಿ ನಟಿಸಿದ್ದಾಗಿ ನಾರಾಯಣ್ ಹೇಳಿಕೊಂಡರು. ''ಕುರಿಗಳು ಸಾರ್ ಕುರಿಗಳು', 'ಕೋತಿಗಳು ಸಾರ್ ಕೋತಿಗಳು', 'ಕತ್ತೆಗಳು ಸಾರ್ ಕತ್ತೆಗಳು' ಮತ್ತು 'ತಿಪ್ಪಾರಳ್ಳಿ ತರ್ಲೆಗಳು' ಚಿತ್ರಕ್ಕೆ ಆದಿತ್ಯ ಸಹ ನಿರ್ಮಾಪಕರಾಗಿದ್ದವರು. ಹಾಗಾಗಿ ಅವರನ್ನು ನಿರ್ದೇಶಿಸುವ ಅವಕಾಶ ಸಿಗದಿದ್ದರೂ, ಅವರ ನಿರ್ಮಾಣದಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿತ್ತು. ಇದೀಗ, '5ಡಿ' ಚಿತ್ರದ ಮೂಲಕ ಅವರನ್ನು ನಿರ್ದೇಶಿಸುವ ಅವಕಾಶ ಸಿಕ್ಕಿದೆ' ಎಂದು ನಾರಾಯಣ್ ಹೇಳಿದ್ದಾರೆ.