ನಟಿ ಸಾಯಿ ಪಲ್ಲವಿಯಂತೆಯೇ ಕಾಣುವ ಅವರ ತಂಗಿಯ ಮೊದಲ ಸಿನಿಮಾ ಶೀಘ್ರದಲ್ಲೇ ಬಿಡುಗಡೆ!

Sai Pallavi
Published on

ಚೆನ್ನೈ: ಸೌತ್ ಸಿನಿಮಾಗಳಲ್ಲಿ ನಟಿ ಸಾಯಿ ಪಲ್ಲವಿ ಅವರ ಹೆಸರು ತೆಗೆದರೆ ಸಾಕು, ಕೇವಲ ಅವರ ಸೂಪರ್ ಹಿಟ್ ಸಿನಿಮಾಗಳಿಗೆ ಅಲ್ಲದೇ ಹಲವಾರು ಕುತೂಹಲಕಾರಿ ವಿಷಯಗಳ ಬಗ್ಗೆ ಜನ ಚರ್ಚಿಸುತ್ತಾರೆ. ಹೌದು, ಡಿ-ಗ್ಲಾಮರಸ್ ರೋಲ್, ಸರಳತೆ, ನೋ-ಮೇಕಪ್ ಲುಕ್, ಒಳ್ಳೆಯ ಚಿತ್ರಗಳ ಆಯ್ಕೆಗೆ ನಟಿ ಸಾಯಿ ಪಲ್ಲವಿ ಹೆಸರುವಾಸಿ. ಜೊತೆಗೆ, ಹಲವು ದೊಡ್ಡ ಸ್ಟಾರ್ ನಟರ ಸಿನಿಮಾಗಳಲ್ಲಿ ನಟಿಸಲು ನಿರಾಕರಿಸಿ ವಿವಾದಗಳಿಗೂ ತುತ್ತಾಗಿದ್ದಾರೆ. ಅಂತಹ ನಟಿ ಸಾಯಿ ಪಲ್ಲವಿ ಅವರ ಸಹೋದರಿ ಇದೀಗ ಸಿನಿರಂಗಕ್ಕೆ ಲಗ್ಗೆ ಇಟ್ಟಿದ್ದಾರೆ.

ಅಕ್ಕ ಸಾಯಿ ಪಲ್ಲವಿಯಂತೆ ಮೊದಲು ಕಿರು ಚಿತ್ರಗಳಲ್ಲಿ ನಟಿಸಿ, ಫೀಚರ್ ಫಿಲಂಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡ ಪೂಜಾ ಕಣ್ಣನ್ ಈಗ ಪೂರ್ಣ ಪ್ರಮಾಣದ ಕಮರ್ಷಿಯಲ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಅಂದಹಾಗೆ, ಪೂಜಾ ಕಣ್ಣನ್ ನಟಿಸಿರುವ ಮೊದಲ ಸಿನಿಮಾ ರಿಲೀಸ್​ಗೆ ರೆಡಿಯಾಗಿದೆ. ತಮಿಳಿನ 'ಚಿತ್ತಿರೈ ಸೆವ್ವನಮ್' ಪೂಜಾ ಕಣ್ಣನ್ ಮೊದಲ ಸಿನಿಮಾ. ಇ ಮೊದಲ ಸಿನಿಮಾದಲ್ಲಿಯೆ ಪೂಜಾ ಕಣ್ಣನ್​ಗೆ ಖ್ಯಾತ ನಟರೊಟ್ಟಿಗೆ ತೆರೆಹಂಚಿಕೊಳ್ಳುವ ಅವಕಾಶ ದೊರಕಿದೆ. 'ಚಿತ್ತಿರೈ ಸೆವ್ವನಮ್' ಚಿತ್ರದ ಪೋಸ್ಟರ್ ಬಿಡುಗಡೆಯಾಗಿದ್ದು ಇದಕ್ಕೆ ಉತ್ತಮ ಪ್ರತಿಕ್ರಿಯೆ ಲಭಿಸುತ್ತಿದೆ. ಇನ್ನು ಅಕ್ಕನಂತೆ, ಮೊದಲ ಸಿನಿಮಾದಲ್ಲೇ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡ ಈ ಸಿನಿಮಾದಲ್ಲಿ ಪೂಜಾ ಕಣ್ಣನ್ ಅವರದ್ದು ಡಿ-ಗ್ಲಾಮರಸ್ ರೋಲ್ ಎಂದೇ ಹೇಳಬೇಕು. ಚಿತ್ರದ ಪೋಸ್ಟರ್‌ನಲ್ಲಿ ಹಳ್ಳಿ ಹುಡುಗಿಯ ಗೆಟಪ್‌ನಲ್ಲಿ ಕಾಣಸಿಕೊಂಡಿದ್ದಾರೆ ಪೂಜಾ.

ಒಂದು ಅಪ್ಪ-ಮಗಳ ಬಾಂಧವ್ಯದ ಕಥೆಯನ್ನು ಹೊಂದಿರುವ ಸಿನಿಮಾ ಇದಾಗಿದ್ದು ಎಲ್ಲಾ ವಯೋಮಾನದ ಪ್ರೇಕ್ಷಕರನ್ನು ರಂಜಿಸಲಿದೆ ಎನ್ನಲಾಗಿದೆ. ಪೂಜಾ ಅವರಿಗೆ ಜೋಡಿಯಾಗಿ ತಂದೆಯ ಪಾತ್ರದಲ್ಲಿ ನಟ ಸಮುದ್ರಕಣಿ ತೆರೆಯ ಮೇಲೆ ಮಿಂಚಲಿದ್ದಾರೆ. ಪೂಜಾ ನಟಿಸಿದ 'ಚಿತ್ತಿರೈ ಸೆವ್ವನಮ್' ಸಿನಿಮಾ ಡಿಸೆಂಬರ್ 3 ರಂದು ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಈಗಾಗಲೇ ಘೋಷಿಸಿದೆ. ಆದರೆ ಸಿನಿಮಾ ಚಿತ್ರಮಂದಿರಗಳಲ್ಲಿ ಅಲ್ಲದೇ ಬದಲಿಗೆ ಜೀ5 ಒಟಿಟಿ ವೇದಿಕೆಯಲ್ಲಿ ತೆರೆಕಾಣಲಿದೆ.

'ಚಿತ್ತಿರೈ ಸೆವ್ವನಮ್' ಸಿನಿಮಾವನ್ನು ಸ್ಟಂಟ್ ಸಿಲ್ವಾ ನಿರ್ದೇಶಿಸಿದ್ದು, ವಿಜಯ್ ಚಿತ್ರದ ಕಥೆ ಬರೆದಿದ್ದಾರೆ. ಸಿನಿಮಾಗೆ ಸ್ಯಾಮ್ ಸಿಎಸ್ ಸಂಗೀತ ನಿರ್ದೇಶನ ಮಾಡಿದ್ದು, ಮನೋಜ್ ಪರಮಹಂಸ ಮತ್ತು ಕೆಜಿ ವೆಂಕಟೇಶ್ ಕ್ಯಾಮೆರಾ ಕೆಲಸ ನಿರ್ವಹಿಸಿದ್ದಾರೆ. ಸಣ್ಣ ಪಾತ್ರಗಳಿಂದ ಹಿಡಿದು ಡ್ಯಾನ್ಸ್ ಶೋಗಳಲ್ಲಿ ಹೆಜ್ಜೆ ಹಾಕಿ ಬಹಳಷ್ಟು ಕಷ್ಟ ಪಟ್ಟು ನಾಯಕ ನಟಿಯಾದ ಸಾಯಿ ಪಲ್ಲವಿಯವರನ್ನು ಇಡೀ ಸೌತ್ ಸಿನಿ ಪ್ರೇಕ್ಷಕರು ಆಧರಿಸಿ, ಅಭಿನಂದಿಸಿದ್ದಾರೆ. ಈಗ, ನೋಟದಲ್ಲಿ ಥೇಟ್ ಅಕ್ಕ ಸಾಯಿ ಪಲ್ಲವಿಯನ್ನು ಹೋಲುವ ಪೂಜಾ ಕಣ್ಣನ್ನ ವೀಕ್ಷಕರು ಹೇಗೆ ಸ್ವಾಗತಿಸುತ್ತಾರೆ ಎಂಬುದು ಕಾದುನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net