

ನವದೆಹಲಿ: ದೇಶದಲ್ಲಿ ಕೋವಿಡ್ ಪ್ರಕರಣಗಳು ಸಂಪೂರ್ಣವಾಗಿ ಇಳಿಕೆಯಾಗಿದೆ. ಹೀಗಾಗಿ ನವೆಂಬರ್ ಮತ್ತು ಡಿಸೆಂಬರ್ನಲ್ಲಿ ನಡೆಯಲಿರುವ ಮದುವೆಗಳಲ್ಲಿ ಭಾಗಿಯಾಗಲಿರುವ ಶೇ. 76 ರಷ್ಟು ಮಂದಿ ಕರೊನಾ ಸೋಂಕಿನಿಂದ ಯಾವುದೇ ತೊಂದರೆ ಇಲ್ಲ ಎಂದು ನಂಬಿರುವುದಾಗಿ ಸಮೀಕ್ಷೆಯೊಂದು ಬಹಿರಂಗಪಡಿಸಿದೆ.
ಮೊದಲೇ ಹೇಳಿದಂತೆ ಸೆಪ್ಟೆಂಬರ್ ಮತ್ತು ಅಕ್ಟೋಬರ್ ಹಬ್ಬದ ಸಮಯದಲ್ಲಿ ಕರೊನಾ ಮೂರನೇ ಅಲೆ ಅಪ್ಪಳಿಸಿಲ್ಲ. ಇನ್ನು ಕರೊನಾ ಸೋಂಕು ಸಂಪೂರ್ಣವಾಗಿ ಮರೆಯಾಗದೇ ಇದ್ದರೂ ಅದನ್ನು ಸಂಪೂರ್ಣವಾಗಿ ಮರೆತಿರುವ ಜನ ಈಗಾಗಲೇ ಸುರಕ್ಷತಾ ಕ್ರಮಗಳನ್ನು ಕಡಿಮೆ ಮಾಡಿದ್ದಾರೆ. ಅಲ್ಲದೆ, ಮುಂಬರುವ ಮದುವೆ ಸೀಸನ್ನಲ್ಲಿ ಮುಕ್ತವಾಗಿ ಭಾಗವಹಿಸುವ ತಯಾರಿಯಲ್ಲಿದ್ದಾರೆ.
ಲೋಕಲ್ಸರ್ಕಲ್ ಸಂಸ್ಥೆ ಭಾರತದ 319 ಜಿಲ್ಲೆಗಳಲ್ಲಿ ಸರ್ವೆ ಮಾಡಲಾಗಿದ್ದು, 17 ಸಾವಿರಕ್ಕೂ ಹೆಚ್ಚು ನಾಗರಿಕರು ಸರ್ವೆಗೆ ಪ್ರತಿಕ್ರಿಯಿಸಿದ್ದಾರೆ. ಅದರಲ್ಲಿ ಶೇ. 62 ರಷ್ಟು ಪುರುಷರು ಮತ್ತು ಶೇ. 38ರಷ್ಟು ಮಹಿಳೆಯರು ಪ್ರತಿಕ್ರಿಯೆ ನೀಡಿದ್ದಾರೆ. ಲೋಕಲ್ಸರ್ಕಲ್ ವರದಿಯ ಪ್ರಕಾರ ಅನೇಕ ರಾಜ್ಯಗಳು ಮದುವೆಯಲ್ಲಿ ಸೀಮಿತ ಜನರು ಪಾಲ್ಗೊಳ್ಳಬೇಕೆಂಬ ಕಟ್ಟುನಿಟ್ಟಿನ ಕ್ರಮಗಳನ್ನು ಈಗಾಗಲೇ ತೆರವುಗೊಳಿಸಿದ್ದು, ಶೇ. 100 ರಷ್ಟು ಜನರು ಕಾರ್ಯಕ್ರಮಗಳಲ್ಲಿ ಭಾಗವಹಿಸಬಹುದಾಗಿದೆ.
ಸಾಂಕ್ರಮಿಕಗೂ ಮೊದಲು ಬುಕ್ ಆಗಿದ್ದಷ್ಟೇ ಕಲ್ಯಾಣ ಮಂಟಪಗಳು ಈಗಲೂ ಬುಕ್ ಆಗಿವೆ ಎಂದು ವರದಿಯಲ್ಲಿ ತಿಳಿಸಿದೆ. ನವೆಂಬರ್ 14 ರಿಂದ ಡಿಸೆಂಬರ್ 13ರವರೆಗೆ ದೆಹಲಿ ಒಂದರಲ್ಲೇ 1.5 ಲಕ್ಷ ಮದುವೆ ನಡೆಯಲಿದ್ದು, ದೇಶಾದ್ಯಂತ ಬರೋಬ್ಬರಿ 25 ಲಕ್ಷ ಕ್ಕೂ ಹೆಚ್ಚು ವಿವಾಹ ಸಮಾರಂಭಗಳು ನಡೆಯಲಿವೆ.
ನವೆಂಬರ್ -ಡಿಸೆಂಬರ್ನಲ್ಲಿ ತಲಾ ಹತ್ತು ಮಂದಿಯಲ್ಲಿ 6 ಮಂದಿ ನಿಶ್ಚಿತಾರ್ಥ ಮತ್ತು ಮದುವೆ ಸಮಾರಂಭಗಳಲ್ಲಿ ಭಾಗವಹಿಸುತ್ತಾರೆ ಎಂಬುದು ಸರ್ವೇಯಲ್ಲಿ ತಿಳಿದುಬಂದಿದೆ. ಅಲ್ಲದೆ, ಕರೊನಾ ಪ್ರಕರಣಗಳ ಸಂಖ್ಯೆ ತುಂಬಾ ಕಡಿಮೆ ಆಗಿರುವುದರಿಂದ ನವೆಂಬರ್-ಡಿಸೆಂಬರ್ನಲ್ಲಿ ಮದುವೆ ಹಾಗೂ ನಿಶ್ಚಿತಾರ್ಥಗಳಲ್ಲಿ ಪಾಲ್ಗೊಳ್ಳುವವರ ಸಂಖ್ಯೆ ಮೂರು ಪಟ್ಟು ಹೆಚ್ಚಾಗಿದೆ. ಈ ಮದುವೆಗಳಲ್ಲಿ ಭಾಗವಹಿಸುವುದರಿಂದ ಕರೊನಾ ಹರಡಬಹುದು ಎಂದು ಕಳೆದ ಬಾರಿ ಶೇ. 57ರಷ್ಟು ಮಂದಿ ನಂಬಿದ್ದರು. ಆದರೆ, ಈ ಬಾರಿ ಶೇ. 60 ರಷ್ಟು ಮಂದಿ ಏನು ಸಮಸ್ಯೆಯಿಲ್ಲ ಎಂದು ನಂಬಿದ್ದಾರೆ.
ದೇಶಾದ್ಯಂತ ಮಾಸ್ಕ್ ಮರೆಯಾಗಿದೆ. ಸಾಮಾಜಿಕ ಅಂತರ ಕಾಣೆಯಾಗಿದ್ದು, ಕರೊನಾ ಲಸಿಕೆಯಿಂದ ಪಡೆದ ಪ್ರತಿಕಾಯಗಳು ಕ್ಷಿಣಿಸುವ ಸಾಧ್ಯತೆ ಇದ್ದು, ನಿಶ್ಚಿತಾರ್ಥ ಮತ್ತು ಮದುವೆಗಳಲ್ಲಿ ಗುಂಪು ಗುಂಪಾಗಿ ಜನ ಭಾಗವಹಿಸುತ್ತಿರುವುದು ಕೋವಿಡ್ ಅಪಾಯ ಹೆಚ್ಚಿಸುವ ಮತ್ತು ಮೂರನೇ ಅಲೆಯ ಆತಂಕವನ್ನು ಸೃಷ್ಟಿಸಿದೆ ಎಂದು ಸರ್ವೇ ತಿಳಿಸಿದೆ. (ಏಜೆನ್ಸೀಸ್)