ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿಗೆ ಶಾಕ್; ಕಾಂಗ್ರೆಸ್​ಗೆ ಮೇಲುಗೈ: ಲೋಕ ಪೋಲ್ ಸಮೀಕ್ಷೆ ಹೇಳಿದ್ದೇನು?

cong-bjp-1
Published on

ನವದೆಹಲಿ: ಲೋಕಸಭೆ ಚುನಾವಣೆ ಕಾವು ಜೋರಾಗುತ್ತಿದೆ. ಭಾರತೀಯ ಜನತಾ ಪಕ್ಷ (ಬಿಜೆಪಿ) ಈ ಬಾರಿ ಹ್ಯಾಟ್ರಿಕ್ ಗೆಲುವಿನ ಮೇಲೆ ಕಣ್ಣಿಟ್ಟಿದೆ. ಇದೇ ವೇಳೆ ಬಿಜೆಪಿಯ ವಿಜಯರಥಕ್ಕೆ ಬ್ರೇಕ್ ಹಾಕಲು ವಿರೋಧ ಪಕ್ಷಗಳು ಯತ್ನಿಸುತ್ತಿವೆ. ಇದಕ್ಕಾಗಿ ಪ್ರತಿಪಕ್ಷಗಳು ಇಂಡಿಯಾ ಮೈತ್ರಿಕೂಟ ರಚಿಸಿವೆ. ಇನ್ನೊಂದೆಡೆ ಬಿಜೆಪಿಯು ಈ ಬಾರಿ ಎನ್‌ಡಿಎ ಮೈತ್ರಿಕೂಟಕ್ಕೆ 400 ಸ್ಥಾನ ಗೆಲ್ಲುವ ಗುರಿ ಹಾಕಿಕೊಂಡಿದೆ.

ಬಿಜೆಪಿ ಗುರಿ ಸಾಧಿಸಲು ಶತಾಯಗತಾಯ ಪ್ರಯತ್ನಿಸುತ್ತಿದೆ. ಹಿಂದಿ ಭಾಷಿಕ ರಾಜ್ಯಗಳಲ್ಲಿ ತನ್ನ ಹಿಡಿತವನ್ನು ಬಲಪಡಿಸಿದ ನಂತರ, ಬಿಜೆಪಿ ಈಗ ದಕ್ಷಿಣದ ಮೇಲೆ ಕಣ್ಣಿಟ್ಟಿದೆ. ಬಿಜೆಪಿ 400 ಸ್ಥಾನಗಳ ಗುರಿಯನ್ನು ತಲುಪಬೇಕಾದರೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡಬೇಕಾಗುತ್ತದೆ ಎಂದು ಹೇಳಲಾಗಿದೆ. ಈ ಕಾರಣಕ್ಕಾಗಿಯೇ ಪ್ರಧಾನಿ ಮೋದಿಯಿಂದ ಅಮಿತ್ ಶಾವರೆಗಿನ ಬಿಜೆಪಿಯ ಹಿರಿಯ ನಾಯಕರು ದಕ್ಷಿಣ ಭಾರತದ ರಾಜ್ಯಗಳಲ್ಲಿ ರ್ಯಾಲಿಗಳನ್ನು ನಡೆಸಿ ತಮ್ಮ ಪ್ರಭಾವವನ್ನು ಸ್ಥಾಪಿಸಲು ಪ್ರಯತ್ನಿಸುತ್ತಿದ್ದಾರೆ.

ದಕ್ಷಿಣ ಭಾರತದ ಐದು ರಾಜ್ಯಗಳ ಪೈಕಿ ಕೇರಳ, ಆಂಧ್ರಪ್ರದೇಶ ಮತ್ತು ತಮಿಳುನಾಡು ಬಿಜೆಪಿಗೆ ಯಾವುದೇ ಬೆಂಬಲವಿಲ್ಲದ ರಾಜ್ಯಗಳಾಗಿವೆ. ಕಳೆದ ಬಾರಿ ಈ ಮೂರು ರಾಜ್ಯಗಳಲ್ಲಿ ಬಿಜೆಪಿ ಖಾತೆ ತೆರೆಯಲು ಸಾಧ್ಯವಾಗಿರಲಿಲ್ಲ. ದಕ್ಷಿಣ ಭಾರತದಲ್ಲಿ ಬಿಜೆಪಿ ಪ್ರಮುಖ ರಾಜಕೀಯ ಶಕ್ತಿಯಾಗಿ ಹೊರಹೊಮ್ಮಿದ ಏಕೈಕ ರಾಜ್ಯ ಕರ್ನಾಟಕ. ಆದರೆ, ಈ ಬಾರಿ ಇಲ್ಲಿಯೂ ಪರಿಸ್ಥಿತಿ ಬದಲಾಗಿದೆ.

ಈ ನಡುವೆ ಕರ್ನಾಟಕದಲ್ಲಿ ಲೋಕ ಪೋಲ್ ಸಮೀಕ್ಷೆ ನಡೆಸಿದೆ. ಈ ಸಮೀಕ್ಷೆಯು ಬಿಜೆಪಿಗೆ ಶಾಕ್ ಆಗುವಂತಿದೆ. ಸಮೀಕ್ಷೆ ಪ್ರಕಾರ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 10 ರಿಂದ 12 ಸ್ಥಾನಗಳನ್ನು ಪಡೆಯಬಹುದು. ಇದೇ ಸಮಯದಲ್ಲಿ, ಕಾಂಗ್ರೆಸ್ ಈ ಬಾರಿ 12 ರಿಂದ 14 ಸ್ಥಾನಗಳನ್ನು ಗೆಲ್ಲಬಹುದು. ಜೆಡಿಎಸ್ 1-2 ಸ್ಥಾನ ಪಡೆಯುವ ಸಾಧ್ಯತೆ ಇದೆ ಎಂದು ಸಮೀಕ್ಷೆಯಲ್ಲಿ ಅಂದಾಜಿಸಲಾಗಿದೆ.

ಕಳೆದ ಚುನಾವಣೆಯಲ್ಲಿ ಬಿಜೆಪಿ ಕರ್ನಾಟಕದಲ್ಲಿ ಉತ್ತಮ ಪ್ರದರ್ಶನ ನೀಡಿತ್ತು. 28 ಲೋಕಸಭಾ ಸ್ಥಾನಗಳನ್ನು ಹೊಂದಿರುವ ಕರ್ನಾಟಕದಲ್ಲಿ 2019 ರಲ್ಲಿ ಬಿಜೆಪಿ 25 ಸ್ಥಾನಗಳನ್ನು ಗೆದ್ದಿತ್ತು. ಇಲ್ಲಿ ಬಿಜೆಪಿ ಏಕಾಂಗಿಯಾಗಿ 25 ಸ್ಥಾನ ಗಳಿಸಿತ್ತು. ಇದೇ ವೇಳೆ ಕಾಂಗ್ರೆಸ್ ಮತ್ತು ಜೆಡಿಎಸ್ ತಲಾ 1 ಸ್ಥಾನಕ್ಕೆ ಸೀಮಿತವಾಗಿದ್ದವು. ಆದರೆ, ಈ ಬಾರಿ ಬಿಜೆಪಿ ಭಾರೀ ಹಿನ್ನಡೆಯಾಗುವ ಸಾಧ್ಯತೆಗಳು ಕಂಡುಬರುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net