

ಬೆಂಗಳೂರು: ಸಾಮಾನ್ಯವಾಗಿ ನಟ, ನಟಿಯರು ರಂಗಭೂಮಿ, ಕಿರುಚಿತ್ರ, ಮ್ಯೂಸಿಕ್ ವಿಡಿಯೋ ಆಲ್ಬಂ, ಧಾರಾವಾಹಿಗಳಲ್ಲಿ ಮೊದಲು ಕಾಣಿಸಿಕೊಂಡು, ಅನುಭವ ಪಡೆದು, ನಂತರ ಬೆಳ್ಳಿಪರದೆಯ ಮೇಲೆ ಮಿಂಚಲು ಅಣಿಯಾಗುತ್ತಾರೆ. ಇಂತಹ ಅನೇಕ ಉದಾಹರಣೆಗಳಿವೆ. ಆದರೆ, ಬೃಂದಾ ಆಚಾರ್ಯ ಸಿನಿಮಾ ಮೂಲಕವೇ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟವರು. ‘ಪ್ರೇಮಂ ಪೂಜ್ಯಂ’ ಚಿತ್ರದ ಮೂಲಕ ನಾಯಕಿಯಾಗಿ ಸ್ಯಾಂಡಲ್‌ವುಡ್ ಡೆಬ್ಯೂ ಮಾಡಿದ ಬೃಂದಾ, ಇದೀಗ ‘ಕೌಸಲ್ಯಾ ಸುಪ್ರಜಾ ರಾಮ’ ಚಿತ್ರದ ಯಶಸ್ಸಿನಲೆಯಲ್ಲಿ ತೇಲುತ್ತಿದ್ದಾರೆ. ಸದ್ಯ ಎಸ್.ನಾರಾಯಣ್ ನಿರ್ದೇಶನದ ‘ಒಂದ್ಸಲ ಮೀಟ್ ಮಾಡೋಣ’ ಸಿನಿಮಾದಲ್ಲಿ ಬಿಜಿಯಿರುವ ಬೃಂದಾ ಈಗೊಂದು ‘ಸಾವಿರ ಗುಂಗಲ್ಲಿ’ ಎನ್ನುವ ಹೊಸ ಮ್ಯೂಸಿಕ್ ವಿಡಿಯೋ ಆಲ್ಬಂನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಬಗ್ಗೆ ಬೃಂದಾ, ‘ನನಗೆ ಮೊದಲೇ ಮ್ಯೂಸಿಕ್ ಅಲ್ಬಂನಲ್ಲಿ ಅಭಿನಯಿಸಬೇಕು ಎನ್ನುವ ಆಸೆಯಿತ್ತು. ನನಗೆ ಮೊದಲು ಬಂದ ಆರ್ ಕೂಡ ಅದೇ ಆಗಿತ್ತು. ಆದರೆ, ‘ಪ್ರೇಮಂ ಪೂಜ್ಯಂ’ ಸಿನಿಮಾಗೆ ಆಯ್ಕೆಯಾದೆ. ಈಗ ಮತ್ತೆ ಮ್ಯೂಸಿಕ್ ಆಲ್ಬಂನಲ್ಲಿ ಅವಕಾಶ ಸಿಕ್ಕಿರುವುದು ಖುಷಿಯಿದೆ’ ಎನ್ನುತ್ತಾರೆ.
ಪ್ರೀತಿಸುವ ಹೃದಯಗಳಿಗಾಗಿ:
‘ಸಾವಿರ ಗುಂಗಲ್ಲಿ’ ಒಂದು ಸುಮಧುರವಾದ ಪ್ರೇಮಗೀತೆ ಆಗಿದ್ದು, ಇದಕ್ಕೆ ಪ್ರಮೋದ್ ಮರವಂತೆ ಸಾಹಿತ್ಯ, ಜಾಯ್ ಕೊಸ್ಟಾ ಸಂಗೀತ ನೀಡಿದ್ದಾರೆ. ಕೃಷ್ಣ ನಂಜುಂಡಯ್ಯ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಹಾಡು ಇದಾಗಿದ್ದು, ಬೃಂದಾಗೆ ಜೋಡಿಯಾಗಿ ಭರತ್ ಬೋಪಣ್ಣ ಕಾಣಿಸಿಕೊಂಡಿದ್ದಾರೆ. ಈ ಹಾಡಿನ ಬಗ್ಗೆ, ‘ಇದೊಂದು ಹೆಣ್ಣಿನ ದೃಷ್ಟಿಕೋನದಲ್ಲಿ ಅವಳ ಪ್ರೇಮ ಪಯಣವನ್ನು ನಿರೂಪಿಸುವ ಕಥೆ. ಈಗಾಗಲೇ ಎರಡು ದಿನ ಮೈಸೂರಿನಲ್ಲಿ ಚಿತ್ರೀಕರಣ ಮಾಡಲಾಗಿದೆ. ಇಂದಿನಿಂದ ಚಿಕ್ಕಮಗಳೂರು ಹಾಗೂ ಬೆಂಗಳೂರಿನಲ್ಲಿ ಶೂಟ್ ಮಾಡಲಿದ್ದೇವೆ. ಪ್ರೀತಿಸುವ ಹೃದಯಗಳಿಗೆ ಆಪ್ತವೆನಿಸುವ ಹಾಡು ಇದು’ ಎಂದು ಹೇಳಿಕೊಳ್ಳುತ್ತಾರೆ ಬೃಂದಾ.
ನಿರೀಕ್ಷೆಗೂ ಮೀರಿದೆ:
ಒಂದು ಸಿನಿಮಾ ಕಥೆ ಹೇಳಲು ಎರಡು ತಾಸು ಬೇಕು. ಆದರೆ, ಹಾಡಿನಲ್ಲಿ ಮೂರ್ನಾಲ್ಕು ನಿಮಿಷಗಳಲ್ಲಿ ಕಥೆ ಹೇಳಬೇಕು ಎನ್ನುವ ಬೃಂದಾ, ‘ಆಲ್ಬಂ ಸಾಂಗ್‌ನಲ್ಲಿ ಕಥೆ ಹೇಳುವುದು ಸ್ವಲ್ಪ ಕಷ್ಟದ ಕೆಲಸ. ಆದರೆ, ಕೃಷ್ಣ ಅದನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ವಿಶೇಷ ಎಂದರೆ ಕಥೆಯಲ್ಲಿ ಒಂದು ಟ್ವಿಸ್ಟ್ ಕೂಡ ನೀಡಿದ್ದಾರೆ. ಈ ಜರ್ನಿ ನನಗೆ ತುಂಬಾ ಇಷ್ಟವಾಗಿದೆ. ನನ್ನ ಹೃದಯ ತುಂಬಿದೆ. ನನ್ನ ನಿರೀಕ್ಷೆಗೂ ಮೀರಿ ಹಾಡು ಚೆನ್ನಾಗಿ ಬಂದಿದೆ. ಈ ನವರಾತ್ರಿ ಹಬ್ಬದ ಸಂದರ್ಭದಲ್ಲಿ ಹಾಡು ರಿಲೀಸ್ ಆಗಲಿದೆ’ ಎಂದು ಹೇಳಿಕೊಳ್ಳುತ್ತಾರೆ.