ಬಿಗ್​ಬಾಸ್​ ಸೀಸನ್​ 10ರ ಟ್ರೋಫಿಗೆ ಮುತ್ತಿಟ್ಟ ಕಾರ್ತಿಕ್​: ಡ್ರೋನ್​ ಪ್ರತಾಪ್​ ಫಸ್ಟ್​ ರನ್ನರ್​ ಅಪ್​

Karthik Mahesh BBK 10 Winner
Published on

ಬೆಂಗಳೂರು: ಈ ಬಾರಿ "ಹ್ಯಾಪಿ ಬಿಗ್​ಬಾಸ್"​ ಎಂಬ ಪರಿಕಲ್ಪನೆಯೊಂದಿಗೆ ಅಕ್ಟೋಬರ್​ 8ರಂದು ಆರಂಭವಾದ ಕನ್ನಡದ ಪ್ರಖ್ಯಾತ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್ 10ಕ್ಕೆ ವಿದ್ಯುಕ್ತ ತೆರೆಬಿದ್ದಿದೆ. ಈ ಬಾರಿಯ ಟ್ರೋಫಿ ಮತ್ತು 50 ಲಕ್ಷ ರೂ. ಬಹುಮಾನ ಹಣ ಕಾರ್ತಿಕ್​ ಮಹೇಶ್​ ಪಾಲಾಗಿದೆ. ಡ್ರೋನ್​ ಪ್ರತಾಪ್​ ಪ್ರಥಮ ರನ್ನರ್​ ಅಪ್​ ಆಗಿ ಹೊರ ಹೊಮ್ಮಿದ್ದಾರೆ.

ಗ್ರ್ಯಾಂಡ್​ ಫಿನಾಲೆ ವಾರಕ್ಕೆ ತುಕಾಲಿ ಸಂತೋಷ್​, ವರ್ತೂರ್​ ಸಂತೋಷ್​, ಡ್ರೋನ್​ ಪ್ರತಾಪ್​, ಸಂಗೀತಾ ಶೃಂಗೇರಿ, ವಿನಯ್​ ಗೌಡ ಹಾಗೂ ಕಾರ್ತಿಕ್​ ಮಹೇಶ್​ ಎಂಟ್ರಿ ಕೊಟ್ಟಿದ್ದರು. ಶನಿವಾರದ ಫಿನಾಲೆ ಎಪಿಸೋಡ್​ನಲ್ಲಿ ತುಕಾಲಿ ಸಂತೋಷ್​ ಮನೆಯಿಂದ ಹೊರ ಬರುವ ಮೂಲಕ 5ನೇ ರನ್ನರ್​ ಅಪ್​ ಎನಿಸಿಕೊಂಡರು. ಭಾನುವಾರದ ಅಂತಿಮ ಫಿನಾಲೆ ಎಪಿಸೋಡ್​ನಲ್ಲಿ ಐವರು ಸ್ಪರ್ಧಿಗಳು ಉಳಿದುಕೊಂಡಿದ್ದರು.

ಭಾನುವಾರದ ಗ್ರ್ಯಾಂಡ್​ ಫಿನಾಲೆ ಎಪಿಸೋಡ್​ನಲ್ಲಿ ಹಳ್ಳಿಕಾರ್​ ಒಡೆಯ ವರ್ತೂರ್​ ಸಂತೋಷ್​ ಮನೆಯಿಂದ ಹೊರಬಂದ ಮೊದಲ ಸ್ಪರ್ಧಿ ಎನಿಸಿಕೊಂಡರು. ಈ ಮೂಲಕ 4ನೇ ರನ್ನರ್​ ಅಪ್​ ಆದರು. ಇದಾದ ಬಳಿಕ ವಿನಯ್​ ಗೌಡ ದೊಡ್ಮನೆಯಿಂದ ಹೊರಗಡೆ ಬರುವ ಮೂಲಕ 3ನೇ ರನ್ನರ್​ ಅಪ್​ ಆದರೆ, ಸಂಗೀತಾ ಶೃಂಗೇರಿ ಕೂಡ ಮನೆಯಿಂದ ಎಲಿಮಿನೇಟ್​ ಆಗಿ 2ನೇ ರನ್ನರ್​ ಅಪ್​ ಎನಿಸಿಕೊಂಡರು.

ಅಂತಿಮವಾಗಿ ಮನೆಯಲ್ಲಿ ಕಾರ್ತಿಕ್​ ಮತ್ತು ಪ್ರತಾಪ್​ ಮಾತ್ರ ಉಳಿದುಕೊಂಡರು. ಎಂದಿನಂತೆ ಮನೆಯ ಒಳಗಡೆ ಹೋಗಿ ಇಬ್ಬರನ್ನು ಹೊರ ಕರೆತಂದ ಕಿಚ್ಚ, ಮಾಮೂಲಿಯಂತೆ ಅಧಿಕೃತ ಘೋಷಣೆಗೂ ಮುನ್ನ ಕೆಲ ಕಾಲ ಪ್ರೇಕ್ಷಕರ ಎದೆಬಡಿತವನ್ನು ಹೆಚ್ಚಿಸಿದರು. ಅಂತಿಮವಾಗಿ ಕಾರ್ತಿಕ್​ ಮಹೇಶ್​ ಕೈಯನ್ನು ಮೇಲೆತ್ತುವ ಮೂಲಕ ಅಧಿಕೃತ ಘೋಷಣೆ ಮಾಡಿದರು. ವಿನ್ನರ್​ ಕಾರ್ತಿಕ್​ಗೆ 50 ಲಕ್ಷ ನಗದು ಮತ್ತು ಒಂದು ಕಾರು ಬಹುಮಾನವಾಗಿ ಸಿಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net