‘ಭಾಗ್ಯವಂತರು’ ಚಿತ್ರಕ್ಕೆ ಆಧುನಿಕ ಟಚ್; ಮರು ಬಿಡುಗಡೆಯಾಗಲಿದೆ ಡಾ. ರಾಜ್ ಸಿನಿಮಾ

Bhagyavantaru
Published on

ಬೆಂಗಳೂರು: ಇತ್ತೀಚಿನ ವರ್ಷಗಳಲ್ಲಿ ಚಂದನವನದ ಹಳೆಯ ಹಿಟ್ ಸಿನಿಮಾಗಳಿಗೆ ಆಧುನಿಕತೆಯ ಟಚ್​ ಕೊಟ್ಟು ಮತ್ತೆ ತೆರೆಗೆ ತರುವ ಕೆಲಸ ನಡೆಯುತ್ತಿದೆ. ಈಗಾಗಲೇ ಅಂತಹ ಹಲವು ಪ್ರಯೋಗಗಳು ಕನ್ನಡದಲ್ಲಿ ಆಗಿವೆ. ಇದೀಗ ಅದಕ್ಕೆ ಮತ್ತೊಂದು ಸೇರ್ಪಡೆ ಡಾ. ರಾಜಕುಮಾರ್ ಮತ್ತು ಸರೋಜಾದೇವಿ ನಟನೆಯ ‘ಭಾಗ್ಯವಂತರು‘ ಸಿನಿಮಾ.

ಈಗಾಗಲೇ ಡಾ. ರಾಜಕುಮಾರ್ ಅವರ ಕಸ್ತೂರಿ ನಿವಾಸ ಸಿನಿಮಾ ಆಧುನಿಕ ಸ್ಪರ್ಶ ಪಡೆದು ಮರು ಬಿಡುಗಡೆಯಾಗಿತ್ತು. ಅಷ್ಟೇ ಅಲ್ಲ ಒಳ್ಳೆಯ ಕಲೆಕ್ಷನ್​ ಸಹ ಮಾಡಿತ್ತು. 2018ರಲ್ಲಿ ಡಾ. ವಿಷ್ಣುವರ್ಧನ್ ಅವರ ನಾಗರಹಾವು ಸಿನಿಮಾ ಮರು ಬಿಡುಗಡೆ ಆಗಿ ಸದ್ದು ಮಾಡಿತ್ತು. ಇದೀಗ ಭಾಗ್ಯವಂತರು ಸರದಿ.

ಸಿನಿಮಾ ಸ್ಕೋಪ್ 7.1 ಡಿ ತಂತ್ರಜ್ಞಾನ‌ ಬಳಸಿಕೊಂಡು ಕಲರಿಂಗ್ ಕೆಲಸ ಪ್ರಗತಿಯಲ್ಲಿದ್ದು, ಫೆಬ್ರವರಿ ಮೊದಲ ವಾರದಲ್ಲಿ ರಾಜ್ಯದ 100ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಸಿನಿಮಾ ಮರು ಬಿಡುಗಡೆ ಆಗಲಿದೆ. ಈ ಹಿಂದೆ ಆಪರೇಷನ್ ಡೈಮಂಡ್ ರಾಕೆಟ್, ನಾನೊಬ್ಬ ಕಳ್ಳ, ರಾಜ‌ ನನ್ನ ರಾಜ, ದಾರಿ ತಪ್ಪಿದ ಮಗ ಮುಂತಾದ ಚಿತ್ರಗಳ ವಿತರಣೆ ‌ಮಾಡಿದ್ದ ಮುನಿರಾಜು ತಮ್ಮ ಮುನೇಶ್ವರ ಫಿಲಂಸ್ ಲಾಂಛನದಲ್ಲಿ ಈ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದಾರೆ.

ಅಂದಹಾಗೆ ಈ ಚಿತ್ರವನ್ನು 1976ರಲ್ಲಿ ದ್ವಾರಕೀಶ್ ಅವರು‌ ನಿರ್ಮಾಣ ಮಾಡಿದ್ದರು. ಭಾರ್ಗವ ಅವರು ನಿರ್ದೇಶಿಸಿದ್ದ ಈ ಸಿನಿಮಾ ದೊಡ್ಡ ಮಟ್ಟದ ಯಶಸ್ಸು ಕಂಡಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net