

ಮುಂಬೈ: ಬಾಲಿವುಡ್ನಲ್ಲಿ ಧೂಮ್ ಸರಣಿಯ ಸಿನಿಮಾಗಳು ಸಾಕಷ್ಟು ಸದ್ದು ಮಾಡಿವೆ. ಬಾಕ್ಸ್ಆಫೀಸ್ನಲ್ಲಿ ನೂರಾರು ಕೋಟಿ ಗಳಿಕೆ ಮಾಡಿ ಹೊಸ ಹೊಸ ದಾಖಲೆಗಳನ್ನು ಸೃಷ್ಟಿಸಿವೆ. ಇದೀಗ 8 ವರ್ಷ ಆಗುತ್ತ ಬಂದರೂ ಧೂಮ್ 4 ಸಿನಿಮಾ ಆಗಲಿದೆ ಎಂದು ಚಿತ್ರತಂಡ ಹೇಳುತ್ತಲೇ ಇದೆ. ಆದರೆ, ಅಧಿಕೃತ ಮಾತ್ರ ಇನ್ನೂ ಆಗಿಲ್ಲ. ಆಮೀರ್ ಬಳಿಕ ನಾಲ್ಕನೇ ಸರಣಿಯಲ್ಲಿ ಶಾರುಖ್ ವಿಲನ್ ಆಗಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತಾದರೂ, ಇದೀಗ ಅವರ ಜತೆಗೆ ದೀಪಿಕಾ ಪಡುಕೋಣೆ ಹೆಸರೂ ತಳುಕು ಹಾಕಿಕೊಂಡಿದೆ.
ಅಂದರೆ, ಧೂಮ್ 4ರಲ್ಲಿ ಶಾರುಖ್ ಖಾನ್ ಖಳನಾಗಿ ಕಾಣಿಸಿಕೊಂಡರೆ, ಅವರಿಗೆ ಜತೆಯಾಗಿ ದೀಪಿಕಾ ಸಹ ವಿಲನ್ ಪೋಷಾಕು ಧರಿಸಲಿದ್ದಾರಂತೆ. ಧೂಮ್ ಎರಡನೇ ಸರಣಿಯಲ್ಲಿ ಐಶ್ವರ್ಯಾ ರೈ ಹೃತಿಕ್ ಜತೆಗೆ ವಿಲನ್ ಆಗಿ ಕಾಣಿಸಿಕೊಂಡಿದ್ದರು. ಅದಾದ ಬಳಿಕ ಮೂರರಲ್ಲಿ ಆಮೀರ್ಗೆ ಕತ್ರಿನಾ ಕೈಫ್ ಜತೆಯಾಗಿದ್ದರು. ಇದೀಗ ನಾಲ್ಕನೇ ಸರಣಿಯಲ್ಲಿ ಶಾರುಖ್- ದೀಪಿಕಾ ಜೋಡಿ ಮೋಡಿ ಮಾಡಲಿದೆಯಂತೆ.
ಯಶ್ ರಾಜ್ ಫಿಲಂಸ್ ಬ್ಯಾನರ್ನಲ್ಲಿ ಈ ಸಿನಿಮಾ ನಿರ್ಮಾಣವಾಗಲಿದ್ದು, ದೀಪಿಕಾ ಬರ್ತ್ಡೇ ನಿಮಿತ್ತ ಹೀಗೊಂದು ಸುದ್ದಿ ಹರಿದಾಡುತ್ತಿದೆಯಾದರೂ, ಅಧಿಕೃತವಾಗಿಲ್ಲ. ಇತ್ತ ಶಾರುಖ್ ಖಾನ್ ಪಠಾಣ್ ಸಿನಿಮಾ ಶೂಟಿಂಗ್ನಲ್ಲಿ ಬಿಜಿಯಾಗಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ದೀಪಿಕಾ ತೊಡಗಿಸಿಕೊಂಡಿದ್ದಾರೆ. ಒಂದು ವೇಳೆ ಈ ಇಬ್ಬರು ಸ್ಟಾರ್ಗಳ ಡೇಟ್ಸ್ ಹೊಂದಾಣಿಕೆ ಆದರೆ, ಈ ಸಿನಿಮಾ ಸೆಟ್ಟೇರಲಿದೆ. (ಏಜೆನ್ಸೀಸ್)