ಜಯಶ್ರೀ-ಸಂಯುಕ್ತಾ ಅಜ್ಜಿ-ಮೊಮ್ಮಗಳಾಗಿ

jayashree samyukta
Published on

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಆಂಥಾಲಜಿ (ಕಿರುಚಿತ್ರಗಳ ಗುಚ್ಛ) ಸಿನಿಮಾಗಳ ಸಂಖ್ಯೆ ಹೆಚ್ಚಾಗುತ್ತಿದೆ. ಹೊಸ ನಿರ್ದೇಶಕರು, ಕಡಿಮೆ ಬಜೆಟ್​ನಲ್ಲಿ ಗಟ್ಟಿ ಕಂಟೆಂಟ್ ಹಿಡಿದು ಬಂದು ಸಿನಿಮಾ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಜಾಹೀರಾತು ಮತ್ತು ಬೇರೆ ಕಾರ್ಯಕ್ರಮಗಳ ನಿರ್ದೇಶನ ಮಾಡುತ್ತಿದ್ದ ಪೂಜಾ ಸಂಪತ್ ಇದೀಗ ನಾಲ್ಕು ಕಿರುಚಿತ್ರಗಳ ಸೇರಿಸಿ ಒಂದು ಆಂಥಾಲಜಿ ಸಿನಿಮಾ ಮಾಡುತ್ತಿದ್ದಾರೆ. ಈ ಪೈಕಿ, ಒಂದು ಕಿರುಚಿತ್ರದಲ್ಲಿ ಬಿ. ಜಯಶ್ರೀ ಮತ್ತು ಸಂಯುಕ್ತಾ ಹೊರನಾಡು ಕಾಣಿಸಿಕೊಂಡಿರುವುದು ವಿಶೇಷ.

ಆ ಕಥೆಗೆ ‘ಅಮ್ಮಮ್ಮ’ ಎಂದು ಶೀರ್ಷಿಕೆ ಇಡಲಾಗಿದ್ದು, ಅಜ್ಜಿ-ಮೊಮ್ಮಗಳ ನಡುವಿನ ಸಾಂಗತ್ಯ ಮತ್ತು ಬಾಂಧವ್ಯವನ್ನು ಇಲ್ಲಿ ತೋರಿಸಲಾಗಿದೆಯಂತೆ. ಈ ಬಗ್ಗೆ ಮಾಹಿತಿ ನೀಡುವ ಸಂಯುಕ್ತಾ, ‘ಏಳು ವರ್ಷಗಳ ಹಿಂದೆ ನಾನು ಜಯಶ್ರೀ ಅಮ್ಮನ ಜತೆಗೆ ರಂಗಭೂಮಿಯಲ್ಲಿ ನಾಟಕ ಮಾಡುತ್ತಿದ್ದೆ. ಅವರೇ ನನ್ನ ಗುರು. ಇದೀಗ ಅವರ ಜತೆಯೇ ಆಂಥಾಲಜಿ ಸಿನಿಮಾ ಮಾಡಿದ್ದೇನೆ. ಅಮ್ಮ ಮತ್ತು ಮೊಮ್ಮಗಳ ನಡುವಿನ ಕಥೆಯಿದು. ಈಗಾಗಲೇ ನಮ್ಮ ಭಾಗದ ಚಿತ್ರೀಕರಣ ಮುಗಿದಿದೆ’ ಎಂದು ಮಾಹಿತಿ ನೀಡುತ್ತಾರೆ.

ಸಾಮಾನ್ಯವಾಗಿ ಇಂಥ ಚಿತ್ರಗಳಲ್ಲಿ ಒಬ್ಬೊಬ್ಬರು ಒಂದೊಂದು ಕಥೆ ಮಾಡುವ ಪರಿಪಾಠ ಇದೆ. ಆದರೆ, ಇಲ್ಲಿ ನಾಲ್ಕೂ ಕಿರುಚಿತ್ರಗಳನ್ನೂ ಪೂಜಾ ಸಂಪತ್ ಅವರೇ ನಿರ್ದೇಶನ ಮಾಡಲಿದ್ದಾರೆ. ಈ ಕುರಿತು ‘ವಿಜಯವಾಣಿ’ಯೊಂದಿಗೆ ಮಾತನಾಡಿದ ಅವರು, ‘ಸದ್ಯ ‘ನೋಟರಿ’ ಮತ್ತು ‘ಅಮ್ಮಮ್ಮ’ ಶೂಟಿಂಗ್ ಮುಗಿಸಿ ಸಂಕಲನ ಕೆಲಸ ನಡೆಯುತ್ತಿದೆ. ಇನ್ನೆರಡು ಎಪಿಸೋಡ್​ಗಳ ಶೂಟಿಂಗ್ ಶೀಘ್ರದಲ್ಲಿ ಶುರುವಾಗಲಿದ್ದು, ಪ್ರತಿ ಸಂಚಿಕೆ 30 ನಿಮಿಷ ಇರಲಿದೆ. ಓಟಿಟಿ ಸಲುವಾಗಿಯೇ ಈ ಕಾನ್ಸೆಪ್ಟ್ ಆಯ್ದುಕೊಂಡಿದ್ದೇನೆ. ನಿರ್ವಣದ ಜವಾಬ್ದಾರಿಯೂ ನಂದೇ. ನನ್ನ ಜತೆಗೆ ವಿವೇಕ್ ರಾಮ್ ಕ್ರಿಯೇಟಿವ್ ನಿರ್ವಪಕರಾಗಿದ್ದಾರೆ’ ಎಂಬುದು ಪೂಜಾ ಮಾತು. ಮಾರ್ಚ್ ತಿಂಗಳಲ್ಲಿ ಚಿತ್ರದ ಕೆಲಸಗಳು ಮುಗಿಯಲ್ಲಿದ್ದು, ಮೇನಲ್ಲಿ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net