

ದರ್ಶನ್ ಅಭಿನಯದ 'ರಾಬರ್ಟ್' ಚಿತ್ರತಂಡದಿಂದ ಏನೋ ಬಿಡುಗಡೆಯಾಗಿ ಬಹಳ ದಿನಗಳಾದವು ಎಂದು ಅಭಿಮಾನಿಗಳು ಯೋಚಿಸುವಷ್ಟರಲ್ಲೇ, ಚಿತ್ರತಂಡದಿಂದ ಹೊಸದೊಂದು ಪೋಸ್ಟರ್ ಬಿಡುಗಡೆಯಾಗಿದೆ. ಆದರೆ, ಈ ಬಾರಿ ಪೋಸ್ಟರ್ ಬಿಡುಗಡೆಯಾಗಿರುವುದು ದರ್ಶನ್ ಅವರದ್ದಲ್ಲ, ಚಿತ್ರದ ನಾಯಕಿ ಆಶಾ ಭಟ್ ಅವರದ್ದು.
ಇಂದು ಆಶಾ ಭಟ್ ಅವರ ಹುಟ್ಟುಹಬ್ಬ. ಈ ಹುಟ್ಟುಹಬ್ಬದ ಗಿಫ್ಟ್ ಆಗಿ ಚಿತ್ರತಂಡದವರು ನಾಯಕಿಯ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ಇಂದು ಬೆಳಿಗ್ಗೆ ಸೋಷಿಯಲ್ ಮೀಡಿಯಾ ಮೂಲಕ ಪೋಸ್ಟರ್ ಬಿಡುಗಡೆಯಾಗಿದ್ದು, ನಾಯಕಿಯ ಫಸ್ಟ್ ಲುಕ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಆಶಾ ಭಟ್ ಅವರ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿರುವ ಚಿತ್ರದ ನಿರ್ದೇಶಕ ತರುಣ್ ಸುಧೀರ್, 'ಮೊದಲ ಚಿತ್ರದಲ್ಲೇ ಆಶಾ ಅದ್ಭುತ ಕೆಲಸ ಮಾಡಿದ್ದಾರೆ' ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ, ಆಕೆಯ ಡ್ಯಾನ್ಸ್ ಬಹಳ ಗಮನಸೆಳೆಯುತ್ತದೆ ಎಂದು ಹೇಳಿ, ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.
ಆಶಾ ಭಟ್ ಅವರಿಗೆ ಇದು ಮೊದಲ ಚಿತ್ರವಾಗಿದ್ದು, ಇದಕ್ಕೂ ಮುನ್ನ ಅವರು ಮಾಡಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದರು. ಭದ್ರಾವತಿ ಮೂಲಕ ಆಶಾ, 'ರಾಬರ್ಟ್' ಚಿತ್ರದಲ್ಲಿ ನಟಿಸುವ ಮುನ್ನ ವಿದ್ಯುತ್ ಜಾಮ್ವಾಲ್ ಅಭಿನಯದ ಬಾಲಿವುಡ್ ಚಿತ್ರ 'ಜಂಗ್ಲಿ'ಯಲ್ಲೂ ನಾಯಕಿಯಾಗಿ ಅಭಿನಯಿಸಿದ್ದರು.
ಇದನ್ನೂ ಓದಿ: ಹಳೇ ಗಲ್ಲಿ ಹೊಸ ಕಿಚನ್
'ರಾಬರ್ಟ್' ಚಿತ್ರದ ಕೆಲಸಗಳೆಲ್ಲಾ ಮುಗಿದಿದ್ದು, ಬಿಡುಗಡೆಗೆ ಕಾದಿದೆ. ಚಿತ್ರದಲ್ಲಿ ದರ್ಶನ್, ಆಶಾ ಅಲ್ಲದೆ ವಿನೋದ್ ಪ್ರಭಾಕರ್, ಜಗಪತಿ ಬಾಬು ಸೇರಿದಂತೆ ಹಲವರು ಅಭಿನಯಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದು, ಈಗಾಗಲೇ 'ಶ್ರೀರಾಮ್' ಎಂಬ ಹಾಡು ಹಿಟ್ ಆಗಿದೆ.