More

    ಹಳೇ ಗಲ್ಲಿ ಹೊಸ ಕಿಚನ್

    ಬೆಂಗಳೂರು: ಒಂದೊಮ್ಮೆ ‘ಬಿಗ್ ಬಾಸ್’ನಲ್ಲಿ ಗೆದ್ದರೆ, ದೇವರು ಶಕ್ತಿ ಕೊಟ್ಟರೆ ಹೊಸ ಫುಡ್ ಟ್ರಕ್ ಹಾಕುವುದಾಗಿ ಶೈನ್ ಶೆಟ್ಟಿ ಅಂದುಕೊಂಡಿದ್ದರಂತೆ. ಅದರಂತೆ ಅವರು ತಮ್ಮ ಮೂರು ಚಕ್ರಗಳ ಗಲ್ಲಿ ಕಿಚನ್​ಗೆ ವಿದಾಯ ಹೇಳಿ, ನಾಲ್ಕು ಚಕ್ರಗಳ ಹೊಸ ಅಡುಗೆಮನೆ ಶುರು ಮಾಡಿದ್ದಾರೆ.

    ಬೆಂಗಳೂರಿನ ಬನಶಂಕರಿ ಬಿಡಿಎ ಕಾಂಪ್ಲೆಕ್ಸ್ ಬಳಿ ಕೆಲವು ವರ್ಷಗಳಿಂದ ಗಲ್ಲಿ ಕಿಚನ್ ಎಂಬ ಮೊಬೈಲ್ ಹೋಟೆಲ್ ನಡೆಸುತ್ತಿದ್ದರು ಶೈನ್ ಶೆಟ್ಟಿ. ಈಗ ಆ ಹೋಟೆಲ್ ಸ್ವಲ್ಪ ದೊಡ್ಡದಾಗಿದೆ. ಹಳೆಯ ಆಟೋ ಬಿಟ್ಟು, ಟೆಂಪೋ ಟ್ರಾವಲರ್​ನಲ್ಲಿ ಗಲ್ಲಿ ಕಿಚನ್ ಶುರುವಾಗಿದೆ. ಮೂರು ಚಕ್ರಗಳ ಮೇಲಿದ್ದ ಅಡುಗೆಮನೆ, ಈಗ ನಾಲ್ಕು ಚಕ್ರಗಳಿಗೆ ಶಿಫ್ಟ್ ಆಗಿದೆ. ಇತ್ತೀಚೆಗೆ ರಿಷಬ್ ಶೆಟ್ಟಿ, ಸಂದೀಪ್ ಕುಮಾರ್ ಮುಂತಾದವರು ಈ ಮೊಬೈಲ್ ಹೋಟೆಲ್​ಗೆ ಚಾಲನೆ ನೀಡಿದ್ದಾರೆ.

    ಗಲ್ಲಿ ಕಿಚನ್ ಕಡೆ ಹೊರಟರೆ ಅಭಿನಯದ ಕಥೆ ಏನು ಎಂಬ ಪ್ರಶ್ನೆ ಸಹಜ. ಅದನ್ನು ತಮ್ಮ ತಾಯಿ ಮತ್ತು ಸಹೋದರನ ಸುಪರ್ದಿಗೆ ಬಿಟ್ಟು, ಬಣ್ಣ ಹಚ್ಚುವುದಕ್ಕೆ ತಯಾರಾಗುತ್ತಿದ್ದಾರೆ ಶೈನ್. ಸದ್ಯ ಅವರ ಮೊದಲ ಪ್ರಾಶಸ್ಱವೇನಿದ್ದರೂ, ರಿಷಬ್ ಶೆಟ್ಟಿ ನಿರ್ದೇಶನದ ‘ರುದ್ರಪ್ರಯಾಗ’ ಚಿತ್ರಕ್ಕಂತೆ. ‘ಪ್ರಮುಖವಾಗಿ ‘ರುದ್ರಪಯಾಗ’ ಚಿತ್ರದಲ್ಲಿ ಒಂದೊಳ್ಳೆಯ ಪಾತ್ರ ಸಿಕ್ಕಿದೆ. ಇನ್ನು ಚಿತ್ರದಲ್ಲಿ ನನ್ನ ಮೈಕಟ್ಟು ಸಹ ಬೇರೆ ತರಹ ಇರಲಿದೆ. ಹಾಗಾಗಿ ಆ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದೇನೆ. ಮೊದಲು ಈ ಚಿತ್ರವಾಗಲಿ, ಆ ನಂತರ ಬೇರೆ ಪ್ರಯೋಗಗಳನ್ನು ಮಾಡುವ ಯೋಚನೆ ಇದೆ’ ಎನ್ನುತಾರೆ ಶೈನ್ ಶೆಟ್ಟಿ.

    ಸಿನಿಮಾ ಬಗ್ಗೆ ಅವರ ಎಲ್ಲಾ ಗಮನವಿರುವುದರಿಂದ, ಸದ್ಯ ಕಿರುತೆರೆ ಬೇಡ ಎಂದು ಅವರು ನಿರ್ಧರಿಸಿದ್ದಾರಂತೆ. ‘ಸದ್ಯ ಸೀರಿಯಲ್ ಮಾಡುವುದಿಲ್ಲ ಎಂದು ನಿರ್ಧಾರ ಮಾಡಿದ್ದೀನಿ. ಡಿಸೆಂಬರ್ ಹೊತ್ತಿಗೆ ‘ರುದ್ರಪ್ರಯಾಗ’ ಶುರುವಾಗುವ ಸಾಧ್ಯತೆ ಇದೆ. ಈ ಮಧ್ಯೆ ಒಂದಿಷ್ಟು ಕಥೆ ಕೇಳಿದ್ದೀನಿ. ಬಹಳ ಸಮಯದ ನಂತರ ಸಿನಿಮಾದಲ್ಲಿ ನಟಿಸುತ್ತಿರುವುದರಿಂದ, ಒಂದೊಳ್ಳೆಯ ಚಿತ್ರದ ಮೂಲಕ ಬರುವ ಆಸೆ ಇದೆ. ನನಗೆ 50, 100 ಸಿನಿಮಾ ಮಾಡುವ ಯೋಚನೆ ಇಲ್ಲ. ಒಂದೇ ಮಾಡಿದರೂ ಚೆನ್ನಾಗಿರಬೇಕು ಎಂಬುದು ನನ್ನ ಆಸೆ’ ಎನ್ನುತ್ತಾರೆ ಶೈನ್ ಶೆಟ್ಟಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts