

ಬಾಲಿವುಡ್ ನಟಿ ಅಮೃತಾ ರಾವ್ 2016ರಲ್ಲಿ ಪ್ರಿಯಕರ ಆರ್ಜೆ ಅನ್ಮೋಲ್ ಅವರನ್ನು ವರಿಸಿದ್ದರು. ಇದೀಗ ಈ ಜೋಡಿ ಮೊದಲ ಮಗುವಿನ ನಿರೀಕ್ಷೆಯಲ್ಲಿದೆ. ಜತೆಗೆ ಆರೋಗ್ಯದ ದೃಷ್ಟಿಯಿಂದಲೂ ಅಷ್ಟೇ ಮುನ್ನೆಚ್ಚರಿಕೆ ಕ್ರಮಗಳನ್ನೂ ಅಮೃತಾ ರಾವ್ ತೆಗೆದುಕೊಂಡಿದ್ದಾರೆ.
ಆಹಾರ ಪದ್ಧತಿಯಿಂದ ಹಿಡಿದು, ನಿತ್ಯ ಯೋಗ, ಧ್ಯಾನದ ಮೊರೆ ಹೋಗಿರುವ ಅಮೃತಾ, ಮಾನಸಿಕ ಮತ್ತು ದೈಹಿಕವಾಗಿ ಗಟ್ಟಿಯಾಗುತ್ತಿದ್ದಾರೆ. ಅವರ ಈ ಎಲ್ಲ ಕೆಲಸಗಳಿಗೆ ಪತಿ ಅನ್ಮೋಲ್ ಸಾಥ್ ನೀಡಿದ್ದು, ಪತ್ನಿಯ ಆರೋಗ್ಯದ ಕಡೆಗೂ ಗಮನಹರಿಸಿದ್ದಾರೆ.
ಇದೆಲ್ಲದಕ್ಕಿಂತ ವಿಶೇಷ ಏನೆಂದರೆ, ಗರ್ಭಿಣಿ ಆಗಿರುವ ಅಮೃತಾ ರಾವ್ ನಿತ್ಯ ಭಗವದ್ಗೀತೆಯ ಪಾಠ ಕೇಳದೆಯೇ ನಿದ್ದೆಯೇ ಬರುವುದಿಲ್ಲವಂತೆ. ಈ ವಿಚಾರವನ್ನು ಸಂದರ್ಶನವೊಂದರಲ್ಲಿ ಹೇಳಿಕೊಂಡಿರುವ ಅವರು, ಪ್ರತಿ ನಿತ್ಯ ಮಲುಗುವ ಮುನ್ನ ಪತಿ ಅನ್ಮೋಲ್ ಭಗವದ್ಗೀತೆಯ ಒಂದೊಂದು ಪಾಠವನ್ನು ಹೇಳುತ್ತಿದ್ದಾರೆ. ಅದನ್ನು ಕೇಳಿಯೇ ಅವರು ನಿದ್ದೆಗೆ ಜಾರುತ್ತಾರಂತೆ.
2002ರಲ್ಲಿ ಬಾಲಿವುಡ್ಗೆ ಎಂಟ್ರಿಕೊಟ್ಟಿದ್ದ ಅಮೃತಾ, ಇಲ್ಲಿಯವರೆಗೂ 30ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ತೆಲುಗು ಸಿನಿಮಾದಲ್ಲಿಯೂ ಕಾಣಿಸಿಕೊಂಡಿದ್ದಾರೆ. 2013ರಲ್ಲಿ ಸತ್ಯಾಗ್ರಹ ಚಿತ್ರದ ಬಳಿಕ ಸುದೀರ್ಘ 5 ವರ್ಷ ಗ್ಯಾಪ್ ತೆಗೆದುಕೊಂಡು, ಠಾಕ್ರೆ ಚಿತ್ರದ ಮೂಲಕ ರೀ ಎಂಟ್ರಿ ಪಡೆದಿದ್ದರು. (ಏಜೆನ್ಸೀಸ್)