ಅಮೆರಿಕ: ಉಕ್ರೇನ್ ದೇಶದ ಮೇಲೆ ಯುದ್ಧ ಸಾರಿರುವ ರಷ್ಯಾ ಯಾವ ಒತ್ತಡಗಳಿಗೂ ಮಣಿಯದೆ ಯುದ್ಧ ಮುಂದುವರಿಸಿದೆ. ಅಮೆರಿಕ, ನ್ಯಾಟೊ, ಭಾರತ ಸೇರಿದಂತೆ ಹಲವು ದೇಶಗಳು ರಷ್ಯಾದ ಈ ಯುದ್ಧವನ್ನು ಖಂಡಿಸಿವೆ. ಅಮೆರಿಕ ದೇಶ ಅಂತೂ ರಷ್ಯಾ ವಿರುದ್ಧ ಕಿಡಿಕಾರಿದೆ. ಇನ್ನು, ಹಲವು ನಿರ್ಬಂಧಗಳನ್ನು ರಷ್ಯಾ ದೇಶದ ಮೇಲೆ ಹೇರಿದೆ. ಈ ನಡುವೆ ಹಾಲಿವುಡ್ ನಟ ಹಾಗೂ ಅಮೆರಿಕ ನಾಗರಿಕರಾಗಿರುವ ಅರ್ನಾಲ್ಡ್ ಶ್ವಾಜ್‌ನೆಗರ್ ರಷ್ಯಾದ ಸೈನಿಕರಿಗೆ ಒಂದು ಪ್ರೀತಿಯ ಸಂದೇಶವನ್ನು ಕಳಿಸಿದ್ದಾರೆ. ಆದರೆ, ಆ ಸಂದೇಶದಲ್ಲಿ ನಟ ಅರ್ನಾಲ್ಡ್ ರಷ್ಯಾ ಸೈನಿಕರ ಕೆಲಸವನ್ನು ಹೊಗಳುತ್ತಿಲ್ಲ. ಬದಲಿಗೆ, ಪ್ರೀತಿಯಿಂದ ರಷ್ಯಾ ಸೈನಿಕರಿಗೆ ಬುದ್ಧಿವಾದ ಹೇಳಿದ್ದಾರೆ. ಹೌದು, ಯುದ್ಧವನ್ನು ನಿಲ್ಲಿಸಲು ನಟ ಅರ್ನಾಲ್ಡ್ ಶ್ವಾಜ್‌ನೆಗರ್ ಮನವಿ ಮಾಡಿದ್ದಾರೆ. ಅಂದಹಾಗೆ, ನಟ ಅರ್ನಾಲ್ಡ್ ಶ್ವಾಜ್‌ನೆಗರ್ ಅವರು ಒಂಬತ್ತು ನಿಮಿಷಗಳ ಒಂದು ವಿಡಿಯೋದಲ್ಲಿ ರಷ್ಯಾ ದೇಶದ ಬಗ್ಗೆ ಅಲ್ಲಿನ ಜನರ ಬಗ್ಗೆ, ಸರ್ಕಾರದ ಬಗ್ಗೆ ಸೈನಿಕರ ಬಗ್ಗೆ ಹಾಗೂ ಉಕ್ರೇನ್ ಮೇಲಿನ ಯುದ್ಧ, ಯುದ್ಧದ ಕಾರಣಗಳು ಎಂದು ಹಲವು ವಿಷಯಗಳನ್ನು ವಿವರಿಸುತ್ತಾ ತುಂಬಾ ಚೆನ್ನಾಗಿ ಮಾತಾನಾಡಿದ್ದಾರೆ.