'ಪುಷ್ಪ 2' ಸೆಟ್​ನಲ್ಲಿ ಪ್ರತ್ಯಕ್ಷರಾದ ಅಲ್ಲು ಅರ್ಜುನ್​; ಚಿತ್ರೀಕರಣ ಪ್ರಾರಂಭ, ಅಭಿಮಾನಿಗಳು ಖುಷಿ

Pushpa 2
Published on

ಹೈದರಾಬಾದ್: ಅಲ್ಲು ಅರ್ಜುನ್​ ಅಭಿನಯದ 'ಪುಷ್ಪ 2' ಚಿತ್ರವು ಎರಡು ತಿಂಗಳ ಹಿಂದೆಯೇ ಮುಹೂರ್ತವಾಗಿ, ಚಿತ್ರೀಕರಣ ಸಹ ಪ್ರಾರಂಭವಾಗಿತ್ತು. ಆದರೆ, ಕಾರಣಾಂತರಗಳಿಂದ ಅಲ್ಲು ಅರ್ಜುನ್​ ಚಿತ್ರೀಕರಣದಲ್ಲಿ ಭಾಗವಹಿಸಿರಲಿಲ್ಲ. ಈಗ ಅವರು ಕೊನೆಗೂ ಚಿತ್ರೀಕರಣಕ್ಕೆ ಹಾಜರಾಗಿದ್ದು, ಛಾಯಾಗ್ರಾಹಕ ಮಿರೋಸ್ಲಾ ಕುಬಾ ಬ್ರೋಸೆಕ್​ ಅವರೊಂದಿಗೆ ಸಮಾಲೋಚಿಸುತ್ತಿರುವ ಫೋಟೋವೊಂದು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

'ಪುಷ್ಪ 2' ಚಿತ್ರದ ಮುಹೂರ್ತ ಎರಡು ತಿಂಗಳ ಹಿಂದೆ ಹೈದರಾಬಾದ್​ನಲ್ಲಿ ಸರಳವಾಗಿ ನಡೆದಿತ್ತು. ನ್ಯೂಯಾರ್ಕ್​ನಲ್ಲಿ ಭಾರತದ 75ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಇಂಡಿಯಾ ಡೇ ಪೆರೇಡ್​ನಲ್ಲಿ ಅಲ್ಲು ಅರ್ಜುನ್​ ಅತಿಥಿಯಾಗಿದ್ದ ಕಾರಣ ಭಾಗವಹಿಸುವುದಕ್ಕೆ ಸಾಧ್ಯವಾಗಿರಲಿಲ್ಲ. ಆ ನಂತರ ಭಾರತಕ್ಕೆ ವಾಪಸ್ಸಾದರೂ ಅವರು ಚಿತ್ರೀಕರಣಕ್ಕೆ ಹಾಜರಾಗಿರಲಿಲ್ಲ. ಈಗ ಕೊನೆಗೂ ಅವರು ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ. ಇದರಿಂದ ಅಲ್ಲು ಅರ್ಜುನ್​ ಅಭಿಮಾನಿಗಳು ಫುಲ್​ ಖುಷಿಯಾಗಿದ್ದಾರೆ. ಸೋಷಿಯಲ್​ ಮೀಡಿಯಾದಲ್ಲಿ ಈ ವಿಷಯವನ್ನು ವೈರಲ್​ ಮಾಡುತ್ತಿದ್ದಾರೆ.

'ಪುಷ್ಪ 1 - ದಿ ರೈಸ್​' ಚಿತ್ರವು ತೆಲುಗಿನಲ್ಲಿ ನಿರ್ಮಾಣವಾಗಿ, ಪ್ಯಾನ್​ ಇಂಡಿಯಾ ಚಿತ್ರವಾಗಿ ಐದು ಭಾಷೆಗಳಲ್ಲಿ ಬಿಡುಗಡೆಯಾಗಿತ್ತು. ಅದರಲ್ಲಿ ಹಿಂದಿ ಭಾಷೆಯೊಂದರಲ್ಲೇ ನೂರು ಕೋಟಿಗೂ ಹೆಚ್ಚು ಗಳಿಕೆ ಆಗುವ ಮೂಲಕ ಚಿತ್ರ ಸೂಪರ್​ ಹಿಟ್​ ಆಗಿತ್ತು. ಆ ಯಶಸ್ಸಿನ ಬಳಿಕ ಚಿತ್ರದ ಸೀಕ್ವಲ್​ ಬಗ್ಗೆ ಸಾಕಷ್ಟು ಕುತೂಹಲವಿತ್ತು. ಆದರೆ, ಕಾರಣಾಂತರಗಳಿಂದ ಚಿತ್ರ ಸೆಟ್ಟೇರುವುದು ತಡವಾಗಿ, ಈಗ ಕೊನೆಗೂ ಪುಷ್ಪರಾಜ್​ ತನ್ನ ಆರ್ಭಟ ಪ್ರಾರಂಭಿಸಿದ್ದಾರೆ.

'ಪುಷ್ಪ 2' ಚಿತ್ರವನ್ನು ಮೈತ್ರಿ ಮೂವಿ ಮೇಕರ್ಸ್​ ನಿರ್ಮಿಸುತ್ತಿದ್ದು, ಸುಕುಮಾರ್​ ನಿರ್ದೇಶನ ಮಾಡುತ್ತಿದ್ದಾರೆ. ಈ ಸೀಕ್ವಲ್​ನಲ್ಲ್ಲಿ ಅಲ್ಲು ಅರ್ಜುನ್​, ರಶ್ಮಿಕಾ ಮಂದಣ್ಣ, ಫಹಾದ್​ ಫಾಸಿಲ್​ ಜತೆಗೆ ದಕ್ಷಿಣ ಭಾರತದ ಹಾಗೂ ಬಾಲಿವುಡ್​ನ ಜನಪ್ರಿಯ ನಟರು ನಟಿಸುವ ನಿರೀಕ್ಷೆ ಇದೆ. ಈ ಚಿತ್ರವು 2023ರ ಡಿಸೆಂಬರ್​ನಲ್ಲಿ ಬಿಡುಗಡೆಯಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net