

ಮುಂಬೈ: ನಟಿ ಹಾಗೂ ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಅವರ ಮಗಳು ಆರಾಧ್ಯ ಓದುತ್ತಿರುವ ಶಾಲೆಯ ಶುಲ್ಕಕ್ಕೆ ಸಂಬಂಧಿಸಿದ ಮಾಹಿತಿ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಐಶ್ವರ್ಯಾ ರೈ ಒಂದು ಕಾಲದಲ್ಲಿ ಬಾಲಿವುಡ್ನ ಬಹು ಬೇಡಿಕೆಯ ನಟಿಯಾಗಿದ್ದರು. ಇಂದಿಗೂ ಅದೇ ಬೇಡಿಕೆ ಇದೆ. ಆದರೆ, ತಮ್ಮ ಪಾತ್ರಗಳ ಪ್ರಾಮುಖ್ಯತೆ ಆಧಾರದ ಮೇಲೆ ಮಾತ್ರ ಐಶ್ವರ್ಯಾ ರೈ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಬೆರಳೆಣಿಕೆ ಸಿನಿಮಾಗಳಲ್ಲಿ ಮಾತ್ರ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಮಣಿರತ್ನಂ ನಿರ್ದೇಶನದ ಪೊನ್ನಿಯನ್ ಸೆಲ್ವನ್ ಸಿನಿಮಾದಲ್ಲಿ ಐಶ್ವರ್ಯಾ ರೈ ಮುಖ್ಯ ಪಾತ್ರದಲ್ಲಿ ನಟಿಸಿದ್ದರು.
ಸಿನಿಮಾ ಕ್ಷೇತ್ರದಲ್ಲಿ ಉತ್ತುಂಗದಲ್ಲಿ ಇರುವಾಗಲೇ ಬಾಲಿವುಡ್ ದಿಗ್ಗಜ ಅಮಿತಾಭ್ ಬಚ್ಚನ್ ಅವರ ಪುತ್ರ ಹಾಗೂ ನಟ ಅಭಿಷೇಕ್ ಬಚ್ಚನ್ ಅವರನ್ನು 2007ರಲ್ಲಿ ಐಶ್ವರ್ಯಾ ರೈ ವರಿಸಿದರು. ಇಬ್ಬರ ದಾಂಪತ್ಯ ಜೀವನಕ್ಕೆ ಸಾಕ್ಷಿಯಾಗಿ ಆರಾಧ್ಯ ಹೆಸರಿನ ಮುದ್ದಾದ ಹೆಣ್ಣು ಮಗಳಿದ್ದಾಳೆ. ದೇಶದ ಅತ್ಯಂತ ದುಬಾರಿ ಶಾಲೆಗಳಲ್ಲಿ ಸ್ಟಾರ್ ಮಗಳು ಓದುತ್ತಾಳೆ ಎಂಬುದು ಹಲವರಿಗೆ ತಿಳಿದಿಲ್ಲ. ಸದ್ಯ ಆರಾಧ್ಯ ಮುಂಬೈನಲ್ಲಿರುವ ಧೀರೂಭಾಯಿ ಅಂಬಾನಿ ಇಂಟರ್ನ್ಯಾಷನಲ್ ಸ್ಕೂಲ್ನಲ್ಲಿ 8ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದಾಳೆ. ಈ ಪ್ರತಿಷ್ಠಿತ ಸಂಸ್ಥೆಯಲ್ಲಿ ಶುಲ್ಕವು ಸುಮಾರು 1 ಲಕ್ಷದಿಂದ 10 ಲಕ್ಷದವರೆಗೆ ಇರುತ್ತದೆ. ಇದೇ ಸ್ಕೂಲ್ನಲ್ಲಿ ಎಲ್ಕೆಜಿಯಿಂದ 7ನೇ ತರಗತಿಯವರೆಗೆ ಆರಾಧ್ಯ ಓದಿದ್ದಾಳೆ.
ಧೀರೂಭಾಯಿ ಅಂಬಾನಿ ಇಂಟರ್ನ್ಯಾಷನಲ್ ಸ್ಕೂಲ್ನಲ್ಲಿ ಎಲ್ಕೆಜಿಯಿಂದ 7ನೇ ತರಗತಿವರೆಗಿನ ಶುಲ್ಕ 1.70 ಲಕ್ಷ ರೂ.ಗಳಾಗಿದ್ದರೆ, 8-10ನೇ ತರಗತಿಗೆ 4.48 ಲಕ್ಷ ರೂ. ಮತ್ತು 11 ಮತ್ತು 12ನೇ ತರಗತಿಯ ಶುಲ್ಕವು 9.65 ಲಕ್ಷ ರೂ.ಗಳಾಗಿದೆ. ಶಾರುಖ್ ಖಾನ್ ಅವರ ಮಗ ಅಬ್ರಾಮ್ ಮತ್ತು ಸೈಫ್ ಅಲಿ ಖಾನ್, ಕರಿಷ್ಮಾ ಕಪೂರ್, ಚುಂಕಿ ಪಾಂಡೆ ಮುಂತಾದ ನಟರ ಮಕ್ಕಳು ಸೇರಿದಂತೆ ಅನೇಕ ಇತರ ಸ್ಟಾರ್ ಮಕ್ಕಳು ಗಣ್ಯ ಶಾಲೆಯಲ್ಲಿ ಓದುತ್ತಿದ್ದಾರೆ.
ಇದೇ ಸಂದರ್ಭದಲ್ಲಿ ಇತ್ತೀಚಿನ ಸಂದರ್ಶನವೊಂದರಲ್ಲಿ ಅಭಿಷೇಕ್ ಬಚ್ಚನ್ ಅವರು ಆರಾಧ್ಯಳಿಗೆ ತಮ್ಮ ಕುಟುಂಬದ ಹೆಸರಿನ ಮಹತ್ವವನ್ನು ಹೇಗೆ ಕಲಿಸುತ್ತಾರೆ ಎಂಬುದನ್ನು ಬಹಿರಂಗಪಡಿಸಿದರು. ನನ್ನ ಮಗಳಿಗೆ ನನ್ನ ಹೆಂಡತಿ ಕಲಿಸುವುದನ್ನು ನಾನು ನೋಡುತ್ತೇನೆ. ನಾವು ಅವಳ ಮೇಲೆ ಒತ್ತಡ ಹೇರಲು ಬಯಸುವುದಿಲ್ಲ ಆದರೆ, ಆಕೆಯ ತಂದೆ, ಅವಳ ದಾದಾ ಜಿ, ಅವಳ ಪರ್ದಾದಾ ಜಿ ಏನು ಮಾಡಿದ್ದಾರೆ ಮತ್ತು ಏನನ್ನು ಸಾಧಿಸಿದ್ದಾರೆ ಎಂಬುದರ ಬಗ್ಗೆ ಅವಳು ಗೌರವವನ್ನು ಹೊಂದಿರಬೇಕು ಮತ್ತು ಅದನ್ನು ಗೌರವಿಸಬೇಕು ಮತ್ತು ಅದನ್ನು ಕಡಿಮೆ ಮಾಡಲು ಏನನ್ನೂ ಮಾಡಬಾರದು ಎಂದು ಹೇಳಿದ್ದರು. (ಏಜೆನ್ಸೀಸ್)