

ವಿಜಯವಾಣಿ ಸುದ್ದಿಜಾಲ ಬೆಂಗಳೂರು
ನಟ ‘ನೆನಪಿರಲಿ’ ಪ್ರೇಮ್ ಪುತ್ರಿ ಅಮೃತಾ ‘ಟಗರು ಪಲ್ಯ’ ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ನಾಯಕಿಯಾಗಿ ಡೆಬ್ಯೂ ಮಾಡುತ್ತಿರುವುದು ಗೊತ್ತಿದೆ. ಈಗಾಗಲೇ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಸದ್ಯ ಚಿತ್ರತಂಡ ರಿಲೀಸ್ಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಅದರ ನಡುವೆಯೇ ಅಮೃತಾ ಪ್ರೇಮ್ ಒಂದೊಳ್ಳೆ ಕೆಲಸದ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಹೌದು, ‘ಲವ್ಲಿ ಸ್ಟಾರ್’ ಪ್ರೇಮ್ ಮಗಳು ಕ್ಯಾನ್ಸರ್ ರೋಗಿಗಳಿಗೆ ಕೇಶದಾನದ ಲವ್ಲಿ ಕೆಲಸ ಮಾಡಿದ್ದಾರೆ. ‘ನನಗೆ ನನ್ನ ಉದ್ದ ಕೂದಲು ತುಂಬ ಇಷ್ಟ. ಕಾಲೇಜು ದಿನಗಳಲ್ಲೇ ಕ್ಯಾನ್ಸರ್ ರೋಗಿಗಳಿಗೆ ಹೇರ್ ಡೊನೇಟ್ ಮಾಡುವುದು ಗೊತ್ತಿತ್ತು. ನಾನೂ ನೀಡಬೇಕು ಅಂತಂದುಕೊಂಡಿದ್ದೆ. ಆದರೆ, ಅದೇ ಸಮಯದಲ್ಲಿ ‘ಟಗರು ಪಲ್ಯ’ ಚಿತ್ರದಲ್ಲಿ ಅವಕಾಶ ದೊರೆತ ಕಾರಣ, ಸಾಧ್ಯವಾಗಿರಲಿಲ್ಲ. ಹೀಗಾಗಿ ಈಗ ಡೊನೇಟ್ ಮಾಡಿದೆ’ ಎಂದು ಹೇಳಿಕೊಳ್ಳುತ್ತಾರೆ ಅಮೃತಾ ಪ್ರೇಮ್. ಸುಮಾರು 13 ಇಂಚು ಉದ್ದದಷ್ಟು ಕೂದಲನ್ನು ಅಮೃತಾ ಡೊನೇಟ್ ಮಾಡಿದ್ದಾರೆ.
ಕೂದಲಿನ ಬಳಕೆ ಹೇಗಾಗುತ್ತದೆ?
ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ಸಮಯದಲ್ಲಿ ಕೂದಲು ಉದುರುವುದು ಸಾಮಾನ್ಯ. ಹೀಗೆ ಕೂದಲು ಉದುರುವಿಕೆಯಿಂದ ಮಾನಸಿಕವಾಗಿ ಕುಗ್ಗುವ ಮಹಿಳೆಯರು ಕೆಲವೊಮ್ಮೆ ಚಿಕಿತ್ಸೆಗೆ ಸರಿಯಾಗಿ ಸ್ಪಂದಿಸದಿರುವುದೂ ಉಂಟು. ಈ ನಿಟ್ಟಿನಲ್ಲಿ ಹಲವು ಸಂಘ-ಸಂಸ್ಥೆಗಳು ಕೂದಲಿನಿಂದ ವಿಗ್ ಮಾಡಿ, ಕ್ಯಾನ್ಸರ್ ರೋಗಿಗಳಿಗೆ ಉಚಿತವಾಗಿ ಪೂರೈಸುತ್ತಿವೆ. 12ರಿಂದ 15 ಇಂಚು ಉದ್ದದಷ್ಟು ಕೂದಲನ್ನು ಪಡೆದು ವಿಗ್ ತಯಾರಿಸಲಾಗುತ್ತದೆ.
ಜಾಗೃತಿ ಹೆಚ್ಚಬೇಕಿದೆ…
ಮೊದಲ ಬಾರಿಗೆ ಹೇರ್ ಡೊನೇಟ್ ಮಾಡಿದ ಖುಷಿಯಲ್ಲಿರುವ ಅಮೃತಾ ಪ್ರೇಮ್, ಆ ಬಗ್ಗೆ ಇನ್ನಷ್ಟು ಜಾಗೃತಿ ಹೆಚ್ಚಬೇಕು ಎನ್ನುತ್ತಾರೆ. ‘ಇದರ ಬಗ್ಗೆ ಮತ್ತಷ್ಟು ಅರಿವು ಮೂಡಬೇಕು. ಸಲೂನ್ನಲ್ಲಿ ಸುಮ್ಮನೇ ಉದ್ದ ಕೂದಲನ್ನು ಕಟ್ ಮಾಡಿಸಿ ವೇಸ್ಟ್ ಮಾಡುವ ಬದಲು ಮಿನಿಮಮ್ ಉದ್ದದ ಕೂದಲನ್ನು ಡೊನೇಟ್ ಮಾಡಬೇಕು. ಅಪ್ಪ-ಅಮ್ಮನಿಗೆ ನಾನು ಡೊನೇಟ್ ಮಾಡುವ ವಿಷಯ ತಿಳಿಸಿದಾಗ ಖುಷಿಯಾಗಿ ಪ್ರೋತ್ಸಾಹಿಸಿದರು’ ಎನ್ನುತ್ತಾರೆ.
‘ಟಗರು ಪಲ್ಯ’ ಬಳಿಕ ಹೊಸ ಚಿತ್ರ
ಉಮೇಶ್ ಕೆ. ಕೃಪಾ ನಿರ್ದೇಶನದ, ಡಾಲಿ ಧನಂಜಯ ನಿರ್ಮಾಣದ, ನಾಗಭೂಷಣ್ ನಾಯಕನಾಗಿರುವ ‘ಟಗರು ಪಲ್ಯ’ ಚಿತ್ರದ ರಿಲೀಸ್ಗೆ ಅಮೃತಾ ಎದುರು ನೋಡುತ್ತಿದ್ದಾರೆ. ‘ಸದ್ಯ ಪ್ರಚಾರದ ಕೆಲಸಗಳು ನಡೆಯುತ್ತಿವೆ. ಸಿನಿಮಾದ ಶೋ ರೀಲ್ ನೋಡಿದವರು ಖುಷಿಪಟ್ಟಿದ್ದಾರೆ. ಆರ್ಗಳೇನೋ ಬರುತ್ತಿವೆ. ಆದರೆ, ‘ಟಗರು ಪಲ್ಯ’ ರಿಲೀಸ್ ಆಗಲಿ ಎಂದು ಕಾಯುತ್ತಿದ್ದೇನೆ’ ಎಂದು ಹೇಳಿಕೊಳ್ಳುತ್ತಾರೆ.