ವಿಜಯ್​ ಸೇತುಪತಿ '800' ಚಿತ್ರದಿಂದ ಹೊರನಡೆಯಲು ಇದೇ ಕಾರಣವೆಂದ ಮುತ್ತಯ್ಯ ಮುರಳೀಧರನ್​!

12345 (1)
Published on

ಎಂ.ಎಸ್. ಶ್ರೀಪತಿ ನಿರ್ದೇಶಿರುವ ಶ್ರೀಲಂಕಾ ಕ್ರಿಕೆಟ್ ದಿಗ್ಗಜ ಮುತ್ತಯ್ಯ ಮುರಳೀಧರನ್ ಜೀವನಾಧಾರಿತ ಚಿತ್ರ ‘800’. ಈ ಚಿತ್ರದ ಪ್ರಾರಂಭದಲ್ಲಿ ಮುರಳೀಧರನ್ ಪಾತ್ರದಲ್ಲಿ ತಮಿಳು ನಟ ವಿಜಯ್ ಸೇತುಪತಿ ನಟಿಸಲಿದ್ದಾರೆ ಎನ್ನಲಾಗಿತ್ತು. ಆದರೆ, ಕಾರಣಾಂತರಗಳಿಂದ ವಿಜಯ್ ಚಿತ್ರದಿಂದ ಹೊರನಡೆದಿದ್ದರು. ಇದೀಗ ಖುದ್ದು ಮುತ್ತಯ್ಯ ಮುರಳೀಧರನ್ ಅದಕ್ಕೆ ಕಾರಣ ತಿಳಿಸಿದ್ದಾರೆ.

‘ನಾನು ಐಪಿಎಲ್ ಆಡುತ್ತಿದ್ದಾಗ ನಿರ್ದೇಶಕ ಶ್ರೀಪತಿ, ನಾನು ತಂಗಿದ್ದ ಹೋಟೆಲ್‌ನಲ್ಲಿಯೇ ವಿಜಯ್ ಸೇತುಪತಿ ಕೂಡ ಇದ್ದಾರೆ ಎಂದು ತಿಳಿಸಿದರು. ವಿಜಯ್ ಚಿತ್ರವೊಂದರ ಶೂಟಿಂಗ್‌ಗಾಗಿ ಅಲ್ಲಿಗೆ ಬಂದಿದ್ದರು. ಅವರನ್ನು ಸಂಪರ್ಕಿಸಿದಾದ ಐದು ದಿನಗಳ ನಂತರ ಎರಡು ತಾಸು ಸಮಯ ನೀಡಿದರು. ಕಥೆ ಕೇಳಿದ ಅವರು ಇಂತಹ ಅವಕಾಶ ಬಿಡಲು ಸಾಧ್ಯವಿಲ್ಲ ಎಂದಿದ್ದರು. ನಂತರ ನಿರ್ಮಾಣ ಸಂಸ್ಥೆಯೂ ಕೈಜೋಡಿಸಿತು. ವಿಷಯ ಗೊತ್ತಾಗಿದ್ದೇ ತಡ ರಾಜಕಾರಣಿಯೊಬ್ಬರು ವಿಜಯ್ ಈ ಸಿನಿಮಾದಲ್ಲಿ ನಟಿಸಬಾರದು ಎಂದರು. ಕೆಲವರು ಅವರ ಕುಟುಂಬಕ್ಕೆ ಬೆದರಿಕೆಯೊಡ್ಡಿದ್ದರು. ಹೀಗಾಗಿ ವಿಜಯ್ ತೀವ್ರ ಒತ್ತಡದಲ್ಲಿದ್ದರು’ ಎಂದು ಮುರಳೀಧರನ್ ಹೇಳಿಕೊಂಡಿದ್ದಾರೆ.

ಹೀಗಾಗಿ ವಿಜಯ್ ಜಾಗಕ್ಕೆ ‘ಸ್ಲಂಡಾಗ್ ಮಿಲಿಯನೇರ್’ ಚಿತ್ರದ ಮಧುರ್ ಮಿತ್ತಲ್ ಎಂಟ್ರಿ ಕೊಟ್ಟರು. ಇದೀಗ ಸಿನಿಮಾ ಪೂರ್ಣಗೊಂಡಿದ್ದು, ಇತ್ತೀಚೆಗಷ್ಟೆ ಟ್ರೇಲರ್ ಬಿಡುಗಡೆಯಾಗಿದೆ. ‘800’ ಇದೇ ಅ.6ರಂದು ತೆರೆಗೆ ಬರಲಿದೆ.
-ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net