ಮದುವೆಯಾಗುವುದಾಗಿ ವಂಚನೆ ಪ್ರಕರಣ: ಕೊನೆಗೂ ಮೌನ ಮುರಿದ ಜೋಶ್​ ಖ್ಯಾತಿಯ ಶಾಮ್ನಾ ಕಾಸಿಂ

Shamna-Khasim
Published on

ಕೊಚ್ಚಿ: ಮದುವೆ ಹೆಸರಿನಲ್ಲಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಲಿವುಡ್​ ನಟಿ ಶಾಮ್ನಾ ಕಾಸಿಂ ಕೊನೆಗೂ ಮೌನ ಮುರಿದಿದ್ದಾರೆ.

ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿರುವ ಶಾಮ್ನಾ, ನಾನು ಶೂಟಿಂಗ್​ನಲ್ಲಿ ಬಿಜಿಯಾಗಿರುವ ಸಮಯದಲ್ಲಿ ನನ್ನ ಕುಟುಂಬ ನನಗೆ ಮದುವೆ ಮಾಡಲು ವರ ಹುಡುಕುತ್ತಿದ್ದರು. ಇದೇ ವೇಳೆ ವರನ ಕುಟುಂಬ ಎಂದು ಹೇಳಿಕೊಂಡು ವಂಚಕರ ಜಾಲವೊಂದು ನಮ್ಮ ಕುಟುಂಬವನ್ನು ಸಂಪರ್ಕಿಸಿತು. ಆರಂಭದಲ್ಲಿ ಎಲ್ಲವೂ ಸರಿಯಾಗಿತ್ತು. ನಂತರದ ದಿನಗಳಲ್ಲಿ ಅವರು ನೀಡಿರುವ ಫೋಟೋ, ಹೆಸರು ಹಾಗೂ ವಿಳಾಸ ನಕಲಿ ಎಂದು ತಿಳಿಯಿತು. ಇದರಲ್ಲಿ ಭಾಗಿಯಾಗಿರುವ ಎಲ್ಲ ಆರೋಪಿಗಳನ್ನು ಸದ್ಯ ಬಂಧಿಸಲಾಗಿದ್ದು, ಅವರೆಲ್ಲರಿಗೂ ಈಗಾಗಲೇ ಮದುವೆಯಾಗಿದ್ದು, ಮಕ್ಕಳು ಸಹ ಇದ್ದಾರೆ.

ಆರೋಪಿಗಳು ನನಗೆ ಮತ್ತು ನನ್ನ ಕುಟುಂಬಕ್ಕೆ ವಂಚನೆ ಮಾಡಿದರು. ಬಹುಶಃ ಈ ಕೆಟ್ಟ ಕ್ಷಣವನ್ನು ನಾನು ಮರೆಯಬಹುದು. ಆದರೆ, ಇದೇ ಅನುಭವ ಹೊಂದಿದ ಕೆಲ ಯುವತಿಯರು ಮಾನಸಿಕವಾಗಿ ಕುಗ್ಗಿ ಆತ್ಮಹತ್ಯೆ ಮಾಡಿಕೊಂಡವರ ಪರಿಸ್ಥಿತಿ ಏನೆಂಬುದು ನನಗೆ ಅರ್ಥವಾಗುತ್ತಿದೆ.

ನಮ್ಮ ಸಮಾಜದ ಪರಿಸ್ಥಿತಿ ಕೆಟ್ಟ ತಿರುವು ಪಡೆದುಕೊಳ್ಳುತ್ತಿದೆ ಎಂದು ಭಾವಿಸಿದ್ದೇನೆ. ಕರೊನಾ ಸಮಯದಲ್ಲಿ ಎಲ್ಲರು ಒತ್ತಡದಲ್ಲಿರುವಾಗ, ವಂಚಕರು ನಮ್ಮನ್ನು ಶೋಷಣೆ ಮಾಡುವುದೆಂದರೆ ಇದಕ್ಕಿಂತ ಕಹಿ ಅನುಭವ ಏನಿದೆ? ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಅಂದಹಾಗೆ ಶಾಮ್ನಾ ಕಾಸಿಂ ಸದ್ಯ ತೆಲುಗು ರಿಯಾಲಿಟಿ ಶೋವೊಂದರ ಚಿತ್ರೀಕರಣ ಹಿನ್ನೆಲೆಯಲ್ಲಿ ಕೆಲ ದಿನಗಳಿಂದ ಹೈದರಾಬಾದ್​ನಲ್ಲಿ ಉಳಿದಿದ್ದಾರೆ. ಇದರ ನಡುವೆ, ಶಾಮ್ನಾ ತಲೈವಿ ಹೆಸರಿನ ಬಹುಭಾಷಾ ಚಿತ್ರದಲ್ಲಿ ನಟಿಸುತ್ತಿದ್ದಾರೆ. ತಲೈವಿ, ತಮಿಳುನಾಡು ಮಾಜಿ ಸಿಎಂ ದಿವಂಗತ ಜಯಲಲಿತಾ ಅವರ ಜೀವನಾಧಾರಿತ ಚಿತ್ರವಾಗಿದೆ. ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾಗಲೇ ಕೆಲವರು ಶಾಮ್ನಾ ಮನೆಗೆ ಭೇಟಿ ನೀಡಿ ಮದುವೆ ಪ್ರಸ್ತಾವನೆ ಹೆಸರಿನಲ್ಲಿ ವಂಚಿಸಿದ್ದರು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net