ಜೋಶ್​ ನಟಿಯ ವಿರುದ್ಧ ನಡೆದಿತ್ತು ಭಾರಿ ಸಂಚು: ಪೊಲೀಸ್​ ತನಿಖೆಯಲ್ಲಿ ಸ್ಪೋಟಕ ಮಾಹಿತಿ ಬಹಿರಂಗ

Shamna
Published on

ಕೊಚ್ಚಿ: ಮದುವೆ ಹೆಸರಲ್ಲಿ ವಂಚಿಸಿದ್ದಲ್ಲದೆ ನಟಿ ಶಾಮ್ನಾ ಕಾಸಿಂಗೆ ಬೆದರಿಕೆಯೊಡ್ಡಿ ಹಣ ಕೀಳಲು ಯತ್ನಿಸಿದ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳು ಪೊಲೀಸ್​ ವಿಚಾರಣೆಯಲ್ಲಿ ಸ್ಪೋಟಕ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.

ಆರೋಪಿಗಳ ಗ್ಯಾಂಗ್​ನಲ್ಲಿ 12 ಸದಸ್ಯರಿದ್ದು, ಈಗಾಗಲೇ 8 ಮಂದಿಯನ್ನು ಬಂಧಿಸಲಾಗಿದೆ. ಉಳಿದ 4 ಮಂದಿ ತಲೆಮರೆಸಿಕೊಂಡಿದ್ದು, ಶೋಧ ಕಾರ್ಯ ನಡೆಯುತ್ತಿದೆ ಎಂದು ಕೊಚ್ಚಿ ನಗರ ಪೊಲೀಸ್​ ಆಯುಕ್ತರಾದ ವಿಜಯ್​ ಸಖರೆ ಮಾಹಿತಿ ನೀಡಿದ್ದಾರೆ.

ಗ್ಯಾಂಗ್​ನ ಓರ್ವ ಆರೋಪಿ ನಟಿ ಶಾಮ್ನಾ ಕಾಸಿಂ ಮೊಬೈಲ್​ ನಂಬರ್​ ಪಡೆದು, ತಾನೋಬ್ಬ ಜ್ಯುವೆಲ್ಲರಿ ಶಾಪ್​ ಮಾಲೀಕ ದುಬೈನಲ್ಲಿ ಸ್ವಂತ ಶಾಪ್​ ಇದೆ ಎಂದು ನಂಬಿಸಿ, ಬಳಿಕ ಮದುವೆ ಮಾಡಿಕೊಳ್ಳುವುದಾಗಿ ಪ್ರಸ್ತಾವನೆ ಮಾಡಿ ಕೊನೆಗೆ ಹಣ ಕೀಳಲು ಯತ್ನಿಸಿ ಇಡೀ ಗ್ಯಾಂಗ್​ ಸಿಕ್ಕಿಬಿದ್ದಿದೆ.

ಇದೀಗ ವಿಚಾರಣೆ ವೇಳೆ ಆಘಾತಕಾರಿ ಮಾಹಿತಿಯೊಂದನ್ನು ಆರೋಪಿಗಳು ಬಹಿರಂಗಪಡಿಸಿದ್ದು, ಶಾಮ್ನಾ ಕಾಸಿಂರನ್ನು ಅಪಹರಿಸಿ, ಹೊಟೇಲ್​ ಕೊಠಡಿಯೊಂದರಲ್ಲಿ ಒತ್ತೆಯಾಳಾಗಿರಿಸಿ ಭಾರಿ ಮೊತ್ತದ ಹಣಕ್ಕೆ ಬೇಡಿಕೆ ಇಡಲು ಸಂಚು ರೂಪಿಸಿದ್ದರು ಎಂದು ತಿಳಿದುಬಂದಿದೆ. ಆದರೆ, ಇದು ಕಾರ್ಯರೂಪಕ್ಕೆ ಬರಲೇ ಇಲ್ಲ.

ಗ್ಯಾಂಗ್​ ಶಾಮ್ನಾ ಬಳಿ ಪ್ರಾರಂಭದಲ್ಲಿ 1 ಲಕ್ಷ ರೂ. ಮತ್ತು ನಂತರದಲ್ಲಿ 50 ಸಾವಿರ ರೂ. ಕೇಳಿದೆ. ಆದರೆ, ಕೊಡಲು ಒಪ್ಪದಿದ್ದಾಗ ಆಕೆಯನ್ನು ಕಿಡ್ನ್ಯಾಪ್​ ಮಾಡಲು ಸಂಚು ರೂಪಿಸಿದ್ದಾರೆ. ಆರೋಪಿಗಳು ಈ ಹಿಂದೆ ಎಂಟು ಮಾಡೆಲ್​ಗಳನ್ನು ಒತ್ತೆಯಾಳಾಗಿರಿಸಿಕೊಂಡು ಹಣ ದೋಚಿರುವ ಆರೋಪವು ಕೇಳಿಬಂದಿದೆ. ನಟಿ ಹಾಗೂ ಮಾಡೆಲ್​ಗಳನ್ನು ಬೆದರಿಸಿ ಹಣ ಸುಲಿಗೆ ಮಾಡುವುದೇ ಇವರ ಕೆಲಸವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net