ಅಲ್ಲು ಅರ್ಜುನ್​ಗೆ ಉಡುಗೊರೆ ಕಳುಹಿಸಿದ ನಟಿ ರಶ್ಮಿಕಾ ಮಂದಣ್ಣ; ವೈರಲ್ ಆಯಿತು ಉಡುಗೊರೆಯ ಫೋಟೋ!

Rashmika
Published on

ಮುಂಬೈ: ಸ್ಯಾಂಡಲ್​​ವುಡ್, ಟಾಲಿವುಡ್, ಕಾಲಿವುಡ್, ಬಾಲಿವುಡ್ ನಲ್ಲಿ ಒಂದು ಹವಾ ಸೃಷ್ಟಿಸಿದ ಕನ್ನಡದ ನಟಿ ಅಂದರೆ ಅದು ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ. ಒಂದು ಸಿನಿಮಾದ ಮೇಲೆ ಮತ್ತೊಂದು ಬೇರೆ ಬೇರೆ ಸಿನಿಮಾಗಳ ಆಫರ್​​ ಪಡೆಯುತ್ತಿರುವ ನಟಿ ರಶ್ಮಿಕಾ ಮಂದಣ್ಣ ನಾಲ್ಕು ಭಾಷೆಗಳಲ್ಲಿ ತಮ್ಮ ಬೇಡಿಕೆ ಹೆಚ್ಚಿಸಿಕೊಂಡು ಹೋಗುತ್ತಲೇ ಇದ್ದಾರೆ. ಜೊತೆಗೆ, ಎಲ್ಲ ಚಿತ್ರರಂಗಗಳಲ್ಲಿ ಒಳ್ಳೆಯ ಹೆಸರು ಉಳಿಸಿಕೊಂಡಿರುವ ನಟಿ ರಶ್ಮಿಕಾ ತಮ್ಮ ಒಟ್ಟಿಗೆ ಕೆಲಸ ಮಾಡುವ ಸಹ-ನಟರೊಂದಿಗೂ ಉತ್ತಮ ಬಂಧವನ್ನು ಹೊಂದಿದ್ದಾರೆ. ಸದಾ ಟ್ರೋಲ್ ಆಗುತ್ತ ಸುದ್ದಿಯಲ್ಲಿರುವ ರಶ್ಮಿಕಾ, ಸಹ-ನಟರಿಗೆ ಉಡುಗೊರೆಗಳನ್ನು ಕಳುಹಿಸುತ್ತ ಸಿಕ್ಕಾಪಟ್ಟೆ ಚರ್ಚೆಗೂ ಒಳಗಾಗಿದ್ದಾರೆ. ಇದೀಗ, ಮತ್ತೆ ಒಬ್ಬ ನಟನಿಗೆ ಉಡುಗೊರೆ ಕಳುಹಿಸಿದ್ದು, ಕೊಡಗಿನ ಕುವರಿ ನೆಟ್ಟಿಗರ ಮನೆಮಾತಾಗಿದ್ದಾರೆ.

ಅಂದಹಾಗೆ, 'ಪುಷ್ಟ' ಸಿನಿಮಾದಲ್ಲಿ ನಟ ಅಲ್ಲು ಅರ್ಜುನ್ ಜೊತೆ ನಟಿಸಿರುವ ರಶ್ಮಿಕಾ, ಅಲ್ಲು ಅರ್ಜುನ್​ಗೆ ಒಂದು ಉಡುಗೊರೆ ಕಳಿಸಿದ್ದಾರೆ. 'ಪುಷ್ಟ' ಸಿನಿಮಾದ ಮೊದಲ ಭಾಗ ಡಿ.17ಕ್ಕೆ ಬಿಡುಗಡೆಯಾಗಲಿದೆ. ಈ ಸಂರ್ದಭದಲ್ಲಿ ಅಲ್ಲುಗೆ ಮತ್ತು ಸಿನಿಮಾಗೆ ಶುಭ ಕೋರುವ ಮೂಲಕ ರಶ್ಮಿಕಾ, ಅಲ್ಲು ಅರ್ಜುನ್​ಗೆ ಒಂದಷ್ಟು ತಿಂಡಿ ತಿನಿಸುಗಳು ಮತ್ತು ಗಂಡಸರ ಅಲಂಕಾರಿಕ ವಸ್ತುಗಳನ್ನು ತಾವೇ ತಯಾರಿಸಿರುವ ಬಾಕ್ಸ್​​ನಲ್ಲಿಟ್ಟು ಕಳುಹಿಸಿದ್ದಾರೆ. ರಶ್ಮಿಕಾರಿಂದ ಬಂದ ಈ ಉಡುಗೊರೆಯ ಫೋಟೋವನ್ನು ನಟ ಅಲ್ಲು ಅರ್ಜುನ್ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋ ಈಗ ವೈರಲ್ ಆಗುತ್ತಿದೆ.



ಉಡುಗೊರೆಯೊಂದಿಗೆ ಸಣ್ಣ ಪತ್ರವನ್ನು ಬರೆದಿಟ್ಟಿರುವ ರಶ್ಮಿಕಾ, 'ಪುಷ್ಟ ಸಿನಿಮಾ ಬಿಡುಗಡೆಯಾಗಲಿದ್ದು ನಿಮಗೆ ಒಳ್ಳೆಯದಾಗಲಿ. ನಿಮಗೆ ಈ ಸಮಯದಲ್ಲಿ ಹೆಚ್ಚು ಪ್ರೀತಿ ಲಭಿಸಲಿ ಸರ್' ಎಂದು ಬರೆದಿದ್ದರು. ಇದಕ್ಕೆ ನಟ ಅಲ್ಲು ಅರ್ಜುನ್, 'ನಿನ್ನ ಪ್ರೀತಿಗೆ, ಉಡುಗೊರೆಗೆ ಧನ್ಯವಾದಗಳು ರಶ್ಮಿಕಾ ಮಂದಣ್ಣ' ಎಂದು ಪ್ರತಿಕ್ರಿಯಿಸಿದ್ದಾರೆ. 'ಪುಷ್ಪ' ಸಿನಿಮಾದಲ್ಲಿ ಹಳ್ಳಿ ಹುಡುಗಿಯ ಪಾತ್ರದಲ್ಲಿ ಅಭಿನಯಿಸಿರುವ ರಶ್ಮಿಕಾ ಅಭಿಮಾನಿಗಳನ್ನು ರಂಜಿಸಲಿದ್ದಾರೆ.

ಈಗಾಗಲೇ, ಬಿಡುಗಡೆಯಾದ ಈ ಪ್ಯಾನ್ ಇಂಡಿಯಾ ಸಿನಿಮಾದ 'ಸಾಮಿ ಸಾಮಿ' ಹಾಡಿನಲ್ಲಿ ರಶ್ಮಿಕಾ ಮ್ಯಾನರಿಸಮ್, ಲುಕ್, ಡ್ಯಾನ್ಸ್​​ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಇದಲ್ಲದೆ ಹಿಂದಿಯಲ್ಲಿ ರಶ್ಮಿಕಾ ಅವರ 'ಗುಡ್ ಬೈ', 'ಮಿಷನ್ ಮಜ್ನು' ಎಂಬ ಎರಡು ಸಿನಿಮಾಗಳು ಶೀಘ್ರದಲ್ಲೇ ತೆರೆಗೆ ಬರಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net