

ಬೆಂಗಳೂರು: ನಟಿ ಪ್ರಣೀತಾ ಸುಭಾಷ್ ಕನ್ನಡದ ಜತೆಗೆ ಬಹುಭಾಷೆಗಳಲ್ಲಿಯೂ ಗೊತ್ತಿರುವ ಮುಖ. ತಮಿಳು, ತೆಲುಗು ಸಿನಿಮಾಗಳ ಜತೆಗೆ ಬಾಲಿವುಡ್ನಲ್ಲಿಯೂ ಖಾತೆ ತೆರೆದಿದ್ದಾರೆ. ವರ್ಷದ ಬಳಿಕ ಇದೀಗ ಮತ್ತೆ ತೆಲುಗಿನತ್ತ ಮುಖ ಮಾಡಿದ್ದಾರೆ. ಹಾಗಂತ ಹೊಸ ಸಿನಿಮಾ ಒಪ್ಪಿಕೊಂಡಿಲ್ಲ. ಬದಲಿಗೆ ಹಾಡೊಂದರಲ್ಲಿ ಹೆಜ್ಜೆ ಹಾಕಲಿದ್ದಾರೆ. ಇತ್ತೀಚೆಗಷ್ಟೇ ತೆಲುಗು ನಟ ರವಿತೇಜ, ‘ಕಿಲಾಡಿ’ ಎಂಬ ಚಿತ್ರದಲ್ಲಿ ನಟಿಸುವ ಸುದ್ದಿಯಾಗಿತ್ತು. ರವಿತೇಜಗೆ ನಾಯಕಿಯಾಗಿ ಶ್ರುತಿ ಹಾಸನ್ ನಟಿಸುವುದು ಅಧಿಕೃತವಾಗಿದ್ದು, ಇದೀಗ ಪ್ರಣೀತಾ ಸುಭಾಷ್ ಸಹ ಕಿಲಾಡಿ ಚಿತ್ರದ ಭಾಗವಾಗಲಿದ್ದಾರೆ. ಚಿತ್ರದಲ್ಲಿ ಮಾಸ್ ಹಾಡೊಂದಕ್ಕೆ ಅವರು ಹೆಜ್ಜೆ ಹಾಕಲಿದ್ದಾರಂತೆ. ಈಗಾಗಲೇ ಚಿತ್ರತಂಡ ಪ್ರಣೀತಾ ಜತೆ ಒಂದು ಹಂತದ ಮಾತುಕತೆಯನ್ನೂ ನಡೆಸಿದೆಯಂತೆೆ. ಇನ್ನೇನು ಶೀಘ್ರದಲ್ಲಿ ಈ ವಿಚಾರವನ್ನು ಅಧಿಕೃತವಾಗಿ ಘೋಷಣೆ ಮಾಡಲಿದೆಯಂತೆ.