ಮಾದಕತೆ ಹಿಂದಿನ ಭಾವುಕತೆ; 'ಶಕೀಲಾ' ಸಿನಿಮಾ ವಿಮರ್ಶೆ

Film Review
Published on

| ಚೇತನ್ ನಾಡಿಗೇರ್ ಬೆಂಗಳೂರು

ಆಕೆಯ ಚಿತ್ರ ಬಿಡುಗಡೆಯಾದರೆ ದೊಡ್ಡದೊಡ್ಡ ಸ್ಟಾರ್​ಗಳೇ ಹೆದರುತ್ತಿದ್ದರು. ಆಕೆಯ ಚಿತ್ರಗಳಿಂದ ನಿರ್ಮಾಪಕರು, ವಿತರಕರು ಮತ್ತು ಪ್ರದರ್ಶಕರು ಲಕ್ಷ ಲಕ್ಷ ದುಡಿಯುತ್ತಿದ್ದರು. ಆಕೆಯ ಚಿತ್ರಗಳಿಗಾಗಿ ಪಡ್ಡೆಗಳು ತುದಿಗಾಲಲ್ಲಿ ನಿಂತು ಕಾಯುತ್ತಿದ್ದರು. ಆದರೆ, ಅದೊಂದು ದಿನ ಆಕೆ ತಾನು ಒಪ್ಪಿಕೊಂಡ ಎಲ್ಲ ಚಿತ್ರಗಳಿಂದ ಹೊರಬಂದು, ಇನ್ನೆಂದೂ ವಯಸ್ಕರ ಚಿತ್ರಗಳಲ್ಲಿ ನಟಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದರು.

ಇದು ದಕ್ಷಿಣ ಭಾರತದ ಜನಪ್ರಿಯ ನಟಿ ಮತ್ತು ಸಾಫ್ಟ್ ಪೋರ್ನ್ ನಟಿ ಎಂದೇ ಖ್ಯಾತರಾದ ಶಕೀಲಾ ಅವರ ಕಥೆ. ಈ ಕಥೆ ಹೊಸದೇನಲ್ಲ ಮತ್ತು ಬಹಳಷ್ಟು ಜನರಿಗೆ ಗೊತ್ತಿರಬಹುದು. ಆದರೆ, ಶಕೀಲಾ ಕಂಡರೆ ಯಾಕೆ ದೊಡ್ಡದೊಡ್ಡ ಸ್ಟಾರ್​ಗಳು ಹೆದರುತ್ತಿದ್ದರು, ಚಿತ್ರರಂಗದವರು ಆಕೆಯ ಚಿತ್ರಗಳಿಂದ ಹೇಗೆ ಲಕ್ಷಲಕ್ಷ ದುಡಿಯುತ್ತಿದ್ದರು ಮತ್ತು ಆಕೆಯ ಚಿತ್ರಗಳಿಗಾಗಿ ಪಡ್ಡೆಗಳು ಯಾಕೆ ತುದಿಗಾಲಲ್ಲಿ ನಿಂತು ಕಾಯುತ್ತಿದ್ದರು ಎಂಬ ವಿಷಯ ಬಹುಶಃ ಗೊತ್ತಿರಲಿಕ್ಕಿಲ್ಲ. ಇಂದ್ರಜಿತ್ ಲಂಕೇಶ್ ನಿರ್ದೇಶನದ ‘ಶಕೀಲಾ’ ಈ ಎಲ್ಲ ಪ್ರಶ್ನೆಗಳಿಗೂ ಉತ್ತರ ಕೊಡುತ್ತದೆ. ಶಕೀಲಾ ಕುರಿತಾದ ಚಿತ್ರ ಎಂದರೆ, ಅಲ್ಲಿ ಹಸಿಬಿಸಿ ದೃಶ್ಯಗಳಿರಬಹುದು, ಪಡ್ಡೆಗಳ ನಿದ್ದೆಗೆಡಿಸುವಂತಿರಬಹುದು ಎಂಬ ಕಲ್ಪನೆಯಿದ್ದರೆ ಅದು ತಪು್ಪ. ಇದು ಶಕೀಲಾ ಚಿತ್ರ ಎನ್ನುವುದಕ್ಕಿಂತ ಒಬ್ಬ ಹೆಣ್ಣಿನ ಚಿತ್ರ ಎನ್ನುವುದು ಹೆಚ್ಚು ಸೂಕ್ತ. ಒಬ್ಬ ಹೆಣ್ಣು ತನ್ನ ಕುಟುಂಬಕ್ಕಾಗಿ ಏನೆಲ್ಲ ತ್ಯಾಗ ಮಾಡುತ್ತಾಳೆ, ಹೇಗೆ ರಾಜಿ ಮಾಡಿಕೊಳ್ಳುತ್ತಾಳೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ತನ್ನವರಿಂದಲೇ ಹೇಗೆ ಶೋಷಿತಳಾಗುತ್ತಾಳೆ ಎನ್ನುವ ಕಥೆಯನ್ನು ಇಲ್ಲಿ ಇಂದ್ರಜಿತ್ ಹೇಳುವುದಕ್ಕೆ ಹೊರಟಿದ್ದಾರೆ.

ಹಾಗಾಗಿ ಇಲ್ಲಿ ಭಾವನಾತ್ಮಕ ಅಂಶಗಳಿಗೆ ಹೆಚ್ಚು ಒತ್ತು ಕೊಡಲಾಗಿದೆ. ವಿಶೇಷ ಎಂದರೆ ಇಲ್ಲಿ ಯಾವುದೇ ವಿಷಯದಲ್ಲೂ ಹೆಚ್ಚು ವೈಭವೀಕರಣವಿಲ್ಲ. ಶಕೀಲಾ ಅವರ ಪಾತ್ರಕ್ಕೆ ರಿಚಾ ಚಡ್ಡಾ ಜೀವ ತುಂಬುವ ಪ್ರಯತ್ನ ಮಾಡಿದ್ದಾರೆ. ಚಿತ್ರದ ಹೈಲೈಟ್ ಎಂದರೆ ಅದು ಪಂಕಜ್ ತ್ರಿಪಾಠಿ. ಸೂಪರ್​ಸ್ಟಾರ್ ಸಲೀಮ್ ಆಗಿ ಪಂಕಜ್ ಬಹಳ ಚೆನ್ನಾಗಿ ನಟಿಸಿದ್ದಾರೆ. ಇನ್ನು ಎಸ್ತರ್ ನರೋನ್ಹಾ, ರಾಜೀವ್ ಪಿಳ್ಳೈ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಚಿತ್ರ ವಿಶೇಷವಾಗುವುದು ಸಂತೋಷ್ ರೈ ಪಾತಾಜೆ ಛಾಯಾಗ್ರಹಣದಲ್ಲಿ. ಮಲೆನಾಡಿನ ಸೌಂದರ್ಯವನ್ನು ಸಂತೋಷ್ ಬಹಳ ಚೆನ್ನಾಗಿ ಹಿಡಿದಿಟ್ಟಿದ್ದಾರೆ. ವೀರ್ ಸಮರ್ಥ್ ಸಂಗೀತ ನಿರ್ದೇಶನದ ಮೆಲೋಡಿ ಹಾಡು ಬಹಳ ಕಾಲ ಗುನುಗುವಂತಿದೆ. ಒಂದು ಕಾಲಕ್ಕೆ ಸ್ಟಾರ್ ನಟರಿಗೆ ದುಃಸ್ವಪ್ನವಾಗಿದ್ದ ಶಕೀಲಾ ಜೀವನದಲ್ಲಿ ಏನೆಲ್ಲ ನಡೆಯಿತು ಎಂಬ ಕುತೂಹಲವಿದ್ದರೆ ‘ಶಕೀಲಾ’ ನೋಡಲಡ್ಡಿ ಇಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net