

ಬೆಂಗಳೂರು: 'ಕಿರಿಕ್ ಹುಡುಗಿ' ಎಂದೇ ಖ್ಯಾತಿ ಪಡೆದಿರುವ ನಟಿ ರಶ್ಮಿಕಾ ಮಂದಣ್ಣ ಹಳೇದನ್ನೆಲ್ಲ ನೆನಪಿಸಿಕೊಂಡಿದ್ದಾರೆ. ಇದಕ್ಕಿದ್ದಂತೆ ನಾಲ್ಕು ವರ್ಷಗಳ ಹಿಂದಿನ ಫ್ಲ್ಯಾಷ್ಬ್ಯಾಕ್ಗೆ ಹೋಗಿರುವ ಅವರು ಮತ್ತೆ ಸಾನ್ವಿಯಾಗಿದ್ದಾರೆ. ಮಾತ್ರವಲ್ಲ, ಆ ಖುಷಿಯನ್ನು ಬಹಿರಂಗವಾಗಿ ಹೇಳಿಕೊಂಡಿದ್ದಾರೆ.
ಹೀಗೆ ರಶ್ಮಿಕಾ ಮಂದಣ್ಣ ಮತ್ತೆ ಹಳೇದನ್ನೆಲ್ಲ ನೆನಪಿಸಿಕೊಳ್ಳಲು ಕಾರಣ ಮತ್ತದೇ 'ಕಿರಿಕ್ ಪಾರ್ಟಿ'. ರಿಷಬ್ ಶೆಟ್ಟಿ ನಿರ್ದೇಶನದ 'ಕಿರಿಕ್ ಪಾರ್ಟಿ' ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿಗೆ ನಾಯಕಿಯಾಗಿ ಸಾನ್ವಿ ಎಂಬ ಪಾತ್ರದೊಂದಿಗೆ ರಶ್ಮಿಕಾ ಸ್ಯಾಂಡಲ್ವುಡ್ಗೆ ಪ್ರವೇಶ ಮಾಡಿದ್ದರು. ಆ ಚಿತ್ರ ಅವರಿಗೆ ದೊಡ್ಡ ಬ್ರೇಕ್ ಕೊಟ್ಟಿದ್ದು, ಸಾನ್ವಿಯ ಆ ಪಾತ್ರಕ್ಕೆ ಒಂದಷ್ಟು ಜನ ಫಿದಾ ಆಗಿದ್ದು, ಬಳಿಕ ಅವರಿಗೆ ಪರಭಾಷಾ ಸಿನಿಮಾಗಳಲ್ಲಿ ಅವಕಾಶ ಸಿಕ್ಕಿ ಅಲ್ಲೂ ಮಿಂಚಲಾರಂಭಿಸಿದ್ದೆಲ್ಲ ಸಿನಿಪ್ರಿಯರಿಗೆ ಗೊತ್ತಿರುವಂಥದ್ದೇ.
ನಾಲ್ಕು ವರ್ಷಗಳ ಹಿಂದೆ ಡಿಸೆಂಬರ್ನಲ್ಲಿ ಬಿಡುಗಡೆಯಾದ ಈ 'ಕಿರಿಕ್ ಪಾರ್ಟಿ' ಸಿನಿಮಾ ಭರ್ಜರಿ ಯಶಸ್ಸು ತಂದುಕೊಟ್ಟಿದ್ದಲ್ಲದೆ ಚಿತ್ರತಂಡದ ಹಲವರಿಗೆ ಬ್ರೇಕ್ ಕೊಟ್ಟಿತ್ತು. ಇಡೀ ಚಿತ್ರತಂಡಕ್ಕೆ ಇದೊಂದು ಮೆಮೊರೇಬಲ್ ಸಿನಿಮಾ. ಹೀಗಾಗಿ ರಶ್ಮಿಕಾ ಮತ್ತೊಮ್ಮೆ ಬೆಳಗೆದ್ದು ಹಳೇದೆಲ್ಲವನ್ನೂ ನೆನಪಿಸಿಕೊಂಡಿದ್ದಾರೆ. ಅರ್ಥಾತ್ ಅವರು ಹಳೇದನ್ನೆಲ್ಲ ನೆನಪಿಸಿಕೊಳ್ಳಲಿಕ್ಕೆ ಕಾರಣ 'ಕಿರಿಕ್ ಪಾರ್ಟಿ' ಚಿತ್ರದಲ್ಲಿನ 'ಬೆಳಗೆದ್ದು..' ಹಾಡು. ಹೌದು.. ಆ ಚಿತ್ರದ 'ಬೆಳಗೆದ್ದು ಯಾರ ಮುಖವ ನಾನು ನೋಡಿದೆ..' ಎಂಬ ಹಾಡು 10 ಕೋಟಿ ವೀಕ್ಷಣೆಯನ್ನು ಕಂಡಿದೆ.
ನನ್ನ ಪ್ರಪ್ರಥಮ ಹಾಡು 'ಬೆಳಗೆದ್ದು..' 100 ಮಿಲಿಯನ್ ವ್ಯೂಸ್ ಕಂಡಿದೆ ಎಂದು ಖುಷಿ ಪಟ್ಟಿರುವ ರಶ್ಮಿಕಾ, 'ನನಗೆ ಈ ಹಾಡಿನ ಮೇಕಿಂಗ್ ನೆನಪಾಗುತ್ತಿದೆ. ಅದರ ಆ ಎಡಿಟಿಂಗ್ ಕ್ಷಣಗಳನ್ನೆಲ್ಲ ಮತ್ತೆ ಜೀವಿಸುವ ಮೂಲಕ ನನ್ನೊಳಗೆ ಸಾನ್ವಿಯನ್ನು ಕಾಣುತ್ತಿದ್ದೇನೆ. ಆಹಾ ಅದೆಂಥ ಪ್ರಯಾಣ!' ಎಂಬುದಾಗಿ ಟ್ವೀಟ್ ಮೂಲಕ ಸಂಭ್ರಮ ಹಂಚಿಕೊಂಡಿದ್ದಾರೆ. ಈ ಹಾಡಿನ ಸಾಹಿತ್ಯವನ್ನು ಧನಂಜಯ್ ರಂಜನ್ ರಚಿಸಿದ್ದು, ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದು, ವಿಜಯ್ ಪ್ರಕಾಶ್ ಹಾಡಿದ್ದಾರೆ.