ದಯವಿಟ್ಟು ಸಿಕ್ಕಿಹಾಕೋಬೇಡಿ, ನಿಮ್ಮ ಹೆಸ್ರು ಗೊತ್ತಾದ್ರೆ ಮುಂದಾಗೋದ್ನ ಯಾರೂ ತಡೆಯೋಕಾಗಲ್ಲ; ವಿಷ್ಣು ಪುತ್ಥಳಿ ಧ್ವಂಸ ಮಾಡಿದವರಿಗೆ ಕಿಚ್ಚ ಸುದೀಪ್​ ವಾರ್ನಿಂಗ್

Untitled-1
Published on

ಬೆಂಗಳೂರು: ಸಾಹಸಸಿಂಹ ವಿಷ್ಣುವರ್ಧನ್​ ಪುತ್ಥಳಿ ಧ್ವಂಸ ಮಾಡಿದ ಕಿಡಿಗೇಡಿಗಳ ವಿರುದ್ಧ ಇದೀಗ ಕಿಚ್ಚ ಸುದೀಪ್​ ಕೂಡ ಸಿಡಿದೆದ್ದಿದ್ದು, ಪ್ರತಿಮೆ ಧ್ವಂಸ ಮಾಡಿದವರಿಗೆ ಖಡಕ್​ ವಾರ್ನಿಂಗ್ ಕೊಟ್ಟಿದ್ದಾರೆ. ವಿಷ್ಣು ಸರ್ ಅವರ ಪುತ್ಥಳಿ ಧ್ವಂಸ ಮಾಡಿರುವ ವಿಷಯ ನನಗೆ ಈಗಷ್ಟೇ ಗಮನಕ್ಕೆ ಬಂತು ಎಂದು ಮಾತು ಆರಂಭಿಸಿರುವ ಅವರು, ಪ್ರತಿಮೆ ಒಡೆದು ಹಾಕಿರುವ ಮಹಾನುಭಾವರಿಗೆ ಒಂದಷ್ಟು ವಿಷಯ ಹೇಳಲು ಬಯಸುತ್ತೇನೆ ಎಂದು ಹೀಗೆ ಹೇಳಿದ್ದಾರೆ.

'ಪ್ರತಿಮೆ ಒಡೆದು ಹಾಕಿದ ಕಿಡಿಗೇಡಿಗಳು ದಯವಿಟ್ಟು ಸಿಕ್ಕಿಹಾಕಿಕೊಳ್ಳಬೇಡಿ, ಸಿಕ್ಕಿಹಾಕಿಕೊಂಡರೆ.. ನೀವು ಯಾರು ಅಂತ ಗೊತ್ತಾದರೆ ವಿಷ್ಣುವರ್ಧನ್​ ಅವರು ಸಂಪಾದಿಸಿರುವ ಅಷ್ಟೂ ಜನ ಅಭಿಮಾನಿಗಳು ಸೇರಿ ನೀವು ಪ್ರತಿಮೆ ಒಡೆದು ಹಾಕಿದ್ದಕ್ಕಿಂತ ಹೀನಾಯವಾಗಿ ಹೊಡೆದು ಹಾಕುತ್ತಾರೆ. ನಿಮ್ಮ ಉದ್ದೇಶ ಅರ್ಥ ಆಗಲು ಸಾಧ್ಯವಿಲ್ಲ, ಮನುಷ್ಯರಾದವರಿಗೆ ಅದು ಅರ್ಥವೂ ಆಗಲ್ಲ. ಆದರೆ ದಯವಿಟ್ಟು ಸಿಕ್ಕಿಹಾಕಿಕೊಳ್ಳದ ಹಾಗೆ ನೋಡಿಕೊಳ್ಳಿ. ನಿಮ್ಮ ಹೆಸರು ಹೊರಗೆ ಬಂದರೆ ಮುಂದೆ ನಡೆಯುವುದನ್ನು ಖಂಡಿತವಾಗಿ ಯಾರೂ ತಡೆಯಲು ಆಗಲ್ಲ. ಆ ಮೂರ್ತಿ ಏನು ಬಿಡಿ, ಅದರ ಅಪ್ಪನ ಹಾಗಿದ್ದು ಮೂರ್ತಿ ಕಟ್ಟುತ್ತೇವೆ. ಅದು ಬೇರೆ ವಿಷಯ.. ದಯವಿಟ್ಟು ಸಿಕ್ಕಿಹಾಕಿಕೊಳ್ಳಬೇಡಿ..' ಎಂದು ಖಡಕ್​ ವಾರ್ನಿಂಗ್ ಕೊಟ್ಟಿದ್ದಾರೆ.

ಬೆಂಗಳೂರಿನಲ್ಲಿ ಮಾಗಡಿ ರಸ್ತೆಯಲ್ಲಿನ ವಿಷ್ಣುವರ್ಧನ್​ ಪುತ್ಥಳಿಯನ್ನು ರಾತ್ರೋರಾತ್ರಿ ಯಾರೋ ಒಡೆದು ಹಾಕಿದ್ದ ವಿಷಯ ಶನಿವಾರ ಬೆಳಗ್ಗೆ ಬೆಳಕಿಗೆ ಬಂದಿತ್ತು. ಅದರ ಬೆನ್ನಿಗೆ ಮೈಸೂರಿನಲ್ಲಿ ವಿಷ್ಣು ಅಭಿಮಾನಿಗಳು ಬೀದಿಗಿಳಿದು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದರು. ಬಳಿಕ ವಿಷ್ಣು ಅವರ ಅಳಿಯ ಅನಿರುದ್ಧ್​ ಕೂಡ ಪ್ರತಿಮೆ ಒಡೆದ ಘಟನೆಯನ್ನು ಖಂಡಿಸಿ ಕಾನೂನುಕ್ರಮಕ್ಕೆ ಆಗ್ರಹಿಸಿದ್ದರು. ನಂತರ ಚಾಲೆಂಜಿಂಗ್ ಸ್ಟಾರ್ ದರ್ಶನ್​ ಕೂಡ ಕಿಡಿಗೇಡಿಗಳ ವಿರುದ್ಧ ಕಿಡಿಕಾರಿದ್ದರು. ಚಿತ್ರಸಾಹಿತಿ ವಿ. ನಾಗೇಂದ್ರಪ್ರಸಾದ್ ಅವರೂ ಘಟನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಈಗ ಕಿಚ್ಚ ಸುದೀಪ್ ಕೂಡ ದನಿಗೂಡಿಸಿರುವುದರಿಂದ ಈ ವಿಷಯ ಇನ್ನಷ್ಟು ಗಂಭೀರತೆ ಪಡೆಯುವ ಲಕ್ಷಣಗಳು ಗೋಚರಿಸುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net