

ಸ್ಯಾಂಡಲ್ವುಡ್ ನಟಿ ಮಾನ್ವಿತಾ ಸದ್ಯ ಲಾಕ್ಡೌನ್ ಹಿನ್ನೆಲೆಯಲ್ಲಿ ಮನೆಯಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಕರೊನಾ ಎಫೆಕ್ಟ್ನಿಂದಾಗಿ, ಸಿನಿಮಾ ಕೆಲಸಗಳನ್ನು ಪಕ್ಕಕ್ಕೆ ಸರಿಸಿ, ಬೇರೆ ಬೇರೆ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇದೆಲ್ಲದರ ನಡುವೆ ಬಹುದಿನಗಳ ಕನಸೊಂದನ್ನು ನನಸು ಮಾಡಿಕೊಂಡಿದ್ದಾರೆ.
ಚಿಕ್ಕಂದಿನಲ್ಲಿಯೇ ಮಾನ್ವಿತಾ ತಮ್ಮ ತಂದೆಯನ್ನು ಕಳೆದುಕೊಂಡಿದ್ದರು. ಹಾಗಾಗಿ ಅಪ್ಪನ ಜತೆಗಿರುವ ಒಂದೇ ಒಂದು ಫೋಟೋ ಸಹ ಮಾನ್ವಿತಾ ಬಳಿ ಇಲ್ಲ. ಇದೀಗ ಅಪ್ಪನೊಂದಿಗೆ ಇರುವ ರೀತಿಯ ಫೋಟೋವನ್ನು ಚಿತ್ರದ ಮೂಲಕ ಚಿತ್ರಿಸಿಕೊಂಡಿದ್ದಾರೆ. ಆ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು, ಸಂಭ್ರಮಿಸಿದ್ದಾರೆ.
ಇದನ್ನೂ ಓದಿ: ವೈದ್ಯರಿಗೆ ಸಂಗೀತ ನಮನ ಸಲ್ಲಿಸಿದ ಸ್ಟೀಫನ್ ಪ್ರಯೋಗ್
‘ಪ್ರತಿ ವರ್ಷ ಅಪ್ಪಂದಿರ ದಿನ ಬಂದರೆ, ಎಲ್ಲರಂತೆ ಅಪ್ಪನ ಜತೆಗನ ಫೋಟೋ ಹಾಕಲು ನನ್ನ ಬಳಿ ಅಪ್ಪನ ಜತೆಗಿದ್ದ ಒಂದೇ ಒಂದು ಫೋಟೋ ಇರುತ್ತಿರಲಿಲ್ಲ. ಹೀಗಿರುವಾಗಲೇ ಪೇಂಟಿಂಗ್ ಮೂಲಕವಾದರೂ ಅಪ್ಪನ ಜತೆಗೆ ಇರಬೇಕೆಂಬುದು ನನ್ನ ಆಸೆಯಾಗಿತ್ತು. ನನ್ನ ಆಪ್ತರೊಬ್ಬರಿಂದ ಸಾಲಿಯನ್ ಸಿಕ್ಕರು. ಅಪ್ಪ ಮತ್ತು ನನ್ನ ಫೋಟೋವನ್ನೇ ಹೋಲುವ ರೀತಿಯಲ್ಲಿ ಚಿತ್ರ ಬಿಡಿಸಿಕೊಟ್ಟರು’ ಎಂದಿದ್ದಾರೆ ಮಾನ್ವಿತಾ.
ಅಂದಹಾಗೆ, ಅಪ್ಪಂದಿರ ದಿನದ ನಿಮಿತ್ತ ಅಪ್ಪನ ಬಗ್ಗೆಯೂ ಮಾನ್ವಿತಾ ತುಂಬ ವಿಚಾರಗಳನ್ನು ಶೇರ್ ಮಾಡಿಕೊಂಡಿದ್ದರು. ಅವರು ಹೇಳಿದ ಮಾತುಗಳು ಇಲ್ಲಿವೆ.
‘ಅಪ್ಪ ನನ್ನ ಪಾಲಿನ ಸ್ಪೂರ್ತಿ. ಚಿಕ್ಕಂದಿನಲ್ಲಿ ಅವರೊಂದಿಗೆ ನೂರಾರು ಸಿನಿಮಾಗಳನ್ನು ನೋಡಿದ್ದೆ. ರಾಜಕುಮಾರ್, ಕಮಲ್ ಹಾಸನ್ ನಟನೆಯ, ಮಣಿರತ್ನಂ ನಿರ್ದೇಶನದ ಕ್ಲಾಸಿಕ್ ಸಿನಿಮಾಗಳನ್ನು ತೋರಿಸುತ್ತಿದ್ದರು. ಆವತ್ತು ಅಪ್ಪ ಸಿನಿಮಾ ತೋರಿಸಿದ್ದಕ್ಕೇ ನಾನಿವತ್ತು ಸಿನಿಮಾಕ್ಷೇತ್ರದಲ್ಲಿದ್ದೇನೆ. ಆದರೆ, ಅದೆಲ್ಲವನ್ನು ನೋಡಲು ಅಪ್ಪ ಇಲ್ಲ. ನನಗೆ ಬುದ್ಧಿ ಬಂದ ಮೇಲೆ ತಂದೆ ದೂರವಾದರು. ಆದರೆ, ಆ ಕಿರು ಅವಧಿಯಲ್ಲಿಯೇ ನಾನು ಅಪ್ಪನನ್ನು ಹೆಚ್ಚು ಅರಿತಿದ್ದೆ. ನಿಜಕ್ಕೂ ಹೆಮ್ಮೆ ಅನಿಸುತ್ತದೆ. ಅವರು ಬರೆಯುತ್ತಿದ್ದ ಕವಿತೆಗಳು, ನನ್ನ ಭಾಷಣ ಸ್ಪರ್ಧೆಗೆ ಅವರು ಬರೆದುಕೊಡುತ್ತಿದ್ದ ಬರಹ, ಅವರ ಶಬ್ಧ ಭಂಡಾರ ಇಂದಿಗೂ ಖುಷಿಕೊಡುತ್ತದೆ. ಶಾಲೆಗೆ ಹೆಗಲ ಮೇಲೆ ಕೂರಿಸಿಕೊಂಡು ಹೋಗುತ್ತಿದ್ದದ್ದು ಈಗಲೂ ನನಗೆ ನೆನಪಿದೆ.
ಅವರು ಕಲಿಸಿಕೊಟ್ಟ ಜೀವನ ಇಂದಿಗೂ ಕೈ ಹಿಡಿದು ನಡೆಸುತ್ತಿದೆ. ಅವರಿಂದ ಸಾಕಷ್ಟು ವಿಚಾರಗಳು ನನಗೆ ಬಳುವಳಿಯಾಗಿ ಸಿಕ್ಕಿವೆ. ಮೊದಲನೆಯದು ಅವರದೇ ರೂಪ ನನಗೆ ಸಿಕ್ಕಿದೆ. ನೀರಿನಲ್ಲಿ ಕಾಲಿಟ್ಟು ಮನೆಯಲ್ಲಿ ಓಡಾಡಿದರೆ, ಅಪ್ಪನೇ ಓಡಾಡಿದ ರೀತಿ ಕಾಣಿಸುತ್ತೆ ಎಂದು ಅಮ್ಮ ಹೇಳಿದ್ದುಂಟು. ಆದರೆ, ಬೇಸರದ ಸಂಗತಿ ಎಂದರೆ, ಅಪ್ಪನ ಜತೆಗಿನ ಫೋಟೋಗಳ ಕೊರತೆ ನನಗೆ ಕಾಡುತ್ತಿದೆ. ಹಳೆಯ ಫೋಟೋಗಳಷ್ಟೇ ಉಳಿದಿವೆ. ಅವುಗಳಿಗೆ ಇದೀಗ ಆಧುನಿಕ ಸ್ಪರ್ಶ ಕೊಡಬೇಕೆಂದುಕೊಂಡಿದ್ದೇನೆ’ ಎಂದಿದ್ದರು ಮಾನ್ವಿತಾ ಹರೀಶ್ ಕಾಮತ್.