

ಬಾಲಿವುಡ್ನ ಜನಪ್ರಿಯ ಜೋಡಿಗಳ ಪೈಕಿ ಶಾರೂಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅವರ ಜೋಡಿ ಸಹ ಒಂದು. ಅವರಿಬ್ಬರೂ ಜತೆಯಾಗಿ 'ಓಂ ಶಾಂತಿ ಓಂ', 'ಚೆನ್ನೈ ಎಕ್ಸ್ಪ್ರೆಸ್' ಮತ್ತು 'ಹ್ಯಾಪಿ ನ್ಯೂ ಇಯರ್' ಚಿತ್ರಗಳಲ್ಲಿ ನಟಿಸಿದ್ದರು.
ಈಗ ಐದು ವರ್ಷಗಳ ನಂತರ ಅವರಿಬ್ಬರೂ ಮತ್ತೊಮ್ಮೆ ನಾಯಕ-ನಾಯಕಿಯಾಗಿ ನಟಿಸುತ್ತಿರುವುದಾಗಿ ಸುದ್ದಿಯಾಗಿದೆ. ಚಿತ್ರ ಯಾವುದು ಗೊತ್ತಾ? 'ಪಠಾಣ್' .
ಇದನ್ನೂ ಓದಿ: ವೈದ್ಯರಿಗೆ ಸಂಗೀತ ನಮನ ಸಲ್ಲಿಸಿದ ಸ್ಟೀಫನ್ ಪ್ರಯೋಗ್
ಯಶ್ರಾಜ್ ಫಿಲಂಸ್ ಸಂಸ್ಥೆಯು ಇದೀಗ 50 ವರ್ಷಗಳನ್ನು ಪೂರೈಸಿದ್ದು, ಈ ಹಿನ್ನೆಲೆಯಲ್ಲಿ ಒಂದಿಷ್ಟು ಚಿತ್ರಗಳನ್ನು ಘೋಷಿಸುತ್ತಿದೆ. ಈ ಪೈಕಿ ಸಲ್ಮಾನ್ ಖಾನ್ ಅಭಿನಯದ 'ಟೈಗರ್-3' ಚಿತ್ರ ಸಹ ಒಂದು. ಇದಲ್ಲದೆ, ಶಾರೂಖ್ ಖಾನ್ ಅಭಿನಯದಲ್ಲಿ ಒಂದು ಹೈವೋಲ್ಟೇಜ್ ಆಕ್ಷನ್ ಚಿತ್ರ ನಿರ್ಮಿಸುತ್ತಿದ್ದು, ಅದಕ್ಕೆ 'ಪಠಾಣ್' ಎಂಬ ಹೆಸರನ್ನು ಇಡಲಾಗಿದೆ.
ಈ ಹಿಂದೆ ಹೃತಿಕ್ ರೋಶನ್ ಮತ್ತು ಟೈಗರ್ ಶ್ರಾಫ್ ಅಭಿನಯದ 'ವಾರ್' ಚಿತ್ರವನ್ನು ನಿರ್ದೇಶಿಸಿದ್ದ ಸಿದ್ಧಾರ್ಥ್ ಆನಂದ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಒಂದು ಪಕ್ಕಾ ಆಕ್ಷನ್ ಚಿತ್ರವನ್ನು ಮಾಡದೆ, ಶಾರೂಖ್ ಖಾನ್ ಬಹಳ ಕಾಲವೇ ಆಗಿದೆ. ಒಂದೊಳ್ಳೆಯ ಕಥೆಗಾಗಿ ಅವರು ಹುಡುಕಾಟ ನಡೆಸುತ್ತಿದ್ದರಂತೆ. ಇನ್ನೊಂದು ಕಡೆ, ಸಿದ್ಧಾರ್ಥ್ ಆನಂದ್ ಸಹ ಒಂದು ಹೈವೋಲ್ಟೇಜ್ ಆಕ್ಷನ್ ಕಥೆ ಮಾಡಿಟ್ಟುಕೊಂಡು ಶಾರೂಖ್ ಖಾನ್ಗೆ ಕೇಳಿದ್ದಾರೆ. ಕಥೆ ಕೇಳಿ ಇಷ್ಟವಾದ ಶಾರೂಖ್ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎನ್ನಲಾಗಿದೆ.
ಈ ಚಿತ್ರಕ್ಕೆ ನಾಯಕಿ ಯಾರು ಎಂದು ಯೋಚಿಸುತ್ತಿದ್ದಾಗ, ಸಿಕ್ಕ ಹೆಸರು ದೀಪಿಕಾ ಪಡುಕೋಣೆ ಅವರದ್ದು. ದೀಪಿಕಾ ಅವರನ್ನು 'ಓಂ ಶಾಂತಿ ಓಂ' ಮೂಲಕ ಚಿತ್ರರಂಗಕ್ಕೆ ಪರಿಚಯಿಸಿದ್ದು ಅದೇ ಶಾರೂಖ್. ಆ ನಂತರವೂ ಅವರಿಬ್ಬರು ಇನ್ನೂ ಎರಡು ಚಿತ್ರಗಳಲ್ಲಿ ಜತೆಯಾಗಿ ನಟಿಸಿದ್ದರು. ಇನ್ನು ಇಬ್ಬರ ನಡುವಿನ ಕೆಮಿಸ್ಟ್ರಿ ಬಗ್ಗೆ ಮಾತಾಡುವ ಹಾಗೇ ಇಲ್ಲ. ಹಾಗಾಗಿ ಶಾರೂಖ್ ಮತ್ತು ದೀಪಿಕಾ ಅಭಿನಯದಲ್ಲಿ ಈ ಚಿತ್ರ ಮಾಡಲಾಗುತ್ತಿದೆ.
ಸದ್ಯಕ್ಕೆ ಕರೊನಾ ಹಾವಳಿ ಹೆಚ್ಚಾಗಿರುವುದರಿಂದ, ಸ್ವಲ್ಪ ತಗ್ಗಲಿ ಎಂಬ ಕಾರಣಕ್ಕೆ ಚಿತ್ರತಂಡದವರು ಚಿತ್ರದ ಬಗ್ಗೆ ಹೆಚ್ಚು ಗುಟ್ಟು ಬಿಟ್ಟುಕೊಡುತ್ತಿಲ್ಲ. ನವೆಂಬರ್ ಹೊತ್ತಿಗೆ ಚಿತ್ರ ಪ್ರಾರಂಭವಾಗಲಿದ್ದು, ಆಗ ಚಿತ್ರದ ಬಗ್ಗೆ ಇನ್ನಷ್ಟು ಮಾಹಿತಿ ಸಿಗುವ ಸಾಧ್ಯತೆ ಇದೆ.