

‘ತೇರಿ ಮೇರಿ ದೂರಿಯಾ’, ‘ಬಾಬರ್’ ಸೇರಿ ಹಲವು ಧಾರಾವಾಹಿಗಳಲ್ಲಿ ನಟಿಸಿರುವ ಖ್ಯಾತಿ ಹಿಂದಿ ಕಿರುತೆರೆ ನಟಿ ಹಿಮಾಂಶಿ ಪರಾಷರ್‌ಗೆ ಸಲ್ಲುತ್ತದೆ. ಇಂತಹ ನಟಿಗೂ ಹಿಂದೆ ಕಾಸ್ಟಿಂಗ್ ಕೌಚ್ ಕಾಡಿತ್ತಂತೆ.
ಈ ಬಗ್ಗೆ ಇತ್ತೀಚೆಗಷ್ಟೆ ಹೇಳಿಕೊಂಡಿರುವ ಹಿಮಾಂಶಿ, ‘ನಿಮಗೆ ದೊಡ್ಡ ಅವಕಾಶ ನೀಡುತ್ತೇನೆ. ಆದರೆ, ನೀವು ಅಡ್ಜಸ್ಟ್ ಮಾಡಿಕೊಳ್ಳಬೇಕಷ್ಟೇ ಎಂದು ನಿರ್ದೇಶಕರೊಬ್ಬರು ಹೇಳಿದ್ದರು. ಆ ಬಗ್ಗೆ ನಾನು ಮತ್ತೊಬ್ಬರ ಬಳಿ ಹೇಳಿದೆ. ಅದಕ್ಕೆ ಅವರು ಸಹ, ‘ಈ ಫೀಲ್ಡಲ್ಲಿ ಇದೆಲ್ಲಾ ಮಾಮೂಲಿ. ’ ಎಂದರು. ಹೀಗೆಲ್ಲಾ ಮಾಡಲೇಬೇಕು ಅಂದರೆ ನನಗೆ ಸಿನಿಮಾ ಕ್ಷೇತ್ರವೇ ಬೇಡ. ಇನ್ನಷ್ಟು ಓದಿಕೊಂಡು ಕೆಲಸಕ್ಕೆ ಸೇರುವುದೇ ಒಳ್ಳೆಯದು ಅಂತಂದುಕೊಂಡಿದ್ದೆ. ಆದರೆ, ಆ ಘಟನೆಯ ಬಳಿಕ ನನಗೆ ಮತ್ತೆ ಅಂತಹ ಪರಿಸ್ಥಿತಿ ಎದುರಾಗಲಿಲ್ಲ. ಹೀಗಾಗಿ ಇಲ್ಲಿಯೇ ಮುಂದುವರಿಯಲು ತೀರ್ಮಾನಿಸಿದೆ’ ಎಂದು ಮಾಹಿತಿ ನೀಡಿದ್ದಾರೆ.
ಜತೆಗೆ, ‘ಆಡಿಷನ್‌ಗಳ ಮೂಲಕ ನಟ, ನಟಿಯರ ಪ್ರತಿಭೆ ಗುರುತಿಸಿ ಅವಕಾಶ ನೀಡಬೇಕೇ ಹೊರತು, ಹೀಗೆಲ್ಲ ಏನೂ ತಿಳಿಯದ ಅಮಾಯಕ ಹೆಣ್ಣುಮಕ್ಕಳನ್ನು ಅಡ್ಡದಾರಿಗೆ ಎಳೆಯಬಾರದು’ ಎಂದು ಹಿಮಾಂಶಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.