ಬಿಗ್​ಬಾಸ್​ ಮನೆ ಪ್ರವೇಶಕ್ಕೂ ಮುನ್ನ ಈ ಒಂದು ಟೆಸ್ಟ್​ ಕಡ್ಡಾಯ: ನೋ ಅಂದವರಿಗೆ ಬಾಗಿಲು ಬಂದ್​!

BBK 10 Kannada
Published on

ಬೆಂಗಳೂರು: ಭರಪೂರ ಮನರಂಜನೆಯ ಜೊತೆಗೆ ವಿವಾದಗಳನ್ನು ಹುಟ್ಟು ಹಾಕುವ ಬಿಗ್​ಬಾಸ್​, ಕಿರುತೆರೆ ಲೋಕದ ಜನಪ್ರಿಯ ಶೋಗಳಲ್ಲಿ ಒಂದೆಂದರೆ ತಪ್ಪಾಗಲಾರದು. ಪ್ರೀತಿ, ಸ್ನೇಹ ಸಂಬಂಧಗಳಿಗೆ ಈ ಶೋ ಬೆಸುಗೆಯಾಗುತ್ತದೆ. ಇಲ್ಲಿ ನಗು, ಕಣ್ಣೀರು, ಕೋಪ, ಜಗಳ, ಮುನಿಸು ಮತ್ತು ಮನಸ್ತಾಪಗಳ ಮಿಶ್ರಣವು ಇದೆ. ಟಾಸ್ಕ್​ ನೀಡುವುದರ ಜೊತೆಗೆ ಜೀವನದ ಪಾಠವನ್ನು ಹೇಳಲಾಗುತ್ತದೆ. ಎಲ್ಲದಕ್ಕಿಂತ ಹೆಚ್ಚಾಗಿ ವಾರದ ಕೊನೆಯಲ್ಲಿ ಬಾದ್​ಷಾ ಕಿಚ್ಚ ಸುದೀಪರ ಪಂಚಾಯಿತಿಯಲ್ಲಿ ಸರಿ-ತಪ್ಪುಗಳ ತಿದ್ದುವಿಕೆ ಶೋಗೆ ಹೊಸ ಆಯಾಮವನ್ನು ತಂದುಕೊಡುತ್ತದೆ. ಈ ಎಲ್ಲ ಕಾರಣಗಳಿಂದ ಈ ಶೋ ವಿಶೇಷ ಎನಿಸಿಕೊಂಡಿದ್ದು, ಕಿರುತೆರೆ ಲೋಕದಲ್ಲಿ ಸಿಕ್ಕಾಪಟ್ಟೆ ಜನಪ್ರಿಯ ಪಡೆದುಕೊಂಡಿದೆ.

ಮನರಂಜನೆ, ಕ್ರೀಡೆ, ರಾಜಕೀಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಖ್ಯಾತರಾದ ಮತ್ತು ವಿವಾದಕ್ಕೆ ಗುರಿಯಾದ ವ್ಯಕ್ತಿಗಳನ್ನು ಬಿಗ್​ಬಾಸ್​ ಆಯೋಜಕರು ಆಯ್ಕೆ ಮಾಡಿ, ಬಿಗ್​ಬಾಸ್​ ಮನೆಯೊಳಗೆ ಕಳುಹಿಸುತ್ತಾರೆ. ಮನೆಗೆ ಎಂಟ್ರಿ ಕೊಡುವ ಮುನ್ನ ತಮಗೆ ಬೇಕಾದ ವಸ್ತುಗಳನ್ನು ಶಾಪಿಂಗ್​ ಮಾಡಿ ಅದ್ಧೂರಿಯಾಗಿ ಮನೆಗೆ ಎಂಟ್ರಿ ಕೊಡುತ್ತಾರೆ ಎಂಬುದು ನಮಗೆ ಮತ್ತು ನಿಮಗೆ ಗೊತ್ತಿರುವ ಸಂಗತಿ. ಆದರೆ, ತಿಳಿಯದ ಸಂಗತಿ ಮನೆಯೊಳಗೆ ಪ್ರವೇಶ ನೀಡುವ ಸ್ಪರ್ಧಿಗಳಿಗೆ ಮಾತ್ರ ಗೊತ್ತಿರುತ್ತದೆ. ಅದರಲ್ಲಿ ಒಂದು ಸಂಗತಿಯನ್ನು ಕಳೆದ ವಾರವಷ್ಟೇ ನಾಮಿನೇಟ್​ ಆಗಿ ಹೊರಬಂದಿರುವ ಪವಿ ಪೂವಪ್ಪ ವಿಜಯವಾಣಿ ಸಂದರ್ಶನದಲ್ಲಿ ಬಿಚ್ಚಿಟ್ಟಿದ್ದಾರೆ. ಅಂದಹಾಗೆ ಪವಿ ಪೂವಪ್ಪ ಅವರು ವೈಲ್ಡ್​ ಕಾರ್ಡ್​ ಮೂಲಕ ಬಿಗ್​ಬಾಸ್​ ಮನೆ ಪ್ರವೇಶ ಮಾಡಿದರು ಎಂಬುದು ನಿಮಗೆಲ್ಲ ತಿಳಿದಿದೆ.

ವಿಜಯವಾಣಿ ಸಂದರ್ಶನದಲ್ಲಿ ಮನಬಿಚ್ಚಿ ಮಾತನಾಡಿದ ಪವಿ ಪೂವಪ್ಪ, ಬಿಗ್​ಬಾಸ್​ ಮನೆಯ ಕುರಿತ ಹಲವಾರು ವಿಷಯಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ದೊಡ್ಮನೆ ಒಳಗೆ ಹೋಗಬೇಕಾದರೆ ಕಡ್ಡಾಯವಾಗಿ ಒಂದು ಟೆಸ್ಟ್ ಮಾಡಿಸಲೇಬೇಕು ಎಂದಿದ್ದಾರೆ. ಆ ಪರೀಕ್ಷೆ ಯಾವುದೆಂದರೆ, ರಕ್ತಪರೀಕ್ಷೆ. ಇದರ ಹಿಂದೆ ಒಂದು ಉದ್ದೇಶವೂ ಇದೆ. ಮನೆಯೊಳಗೆ ಪ್ರವೇಶ ಪಡೆಯುವ ಮುನ್ನ ಸ್ಪರ್ಧಿಯ ಆರೋಗ್ಯ ಸ್ಥಿತಿಯನ್ನು ತಿಳಿದುಕೊಳ್ಳಲು ಈ ಟೆಸ್ಟ್​ ಮಾಡಿಸಲಾಗುತ್ತಿದೆ. ಒಂದು ವೇಳೆ ಮನೆಯ ಒಳಗೆ ಏನಾದರೂ ಹೆಚ್ಚು ಕಡಿಮೆಯಾದರೆ ಬಿಗ್​ಬಾಸ್​ ವಿರುದ್ಧ ಆರೋಪ ಕೇಳಿಬರುವ ಸಾಧ್ಯತೆ ಇರುತ್ತದೆ. ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ರಕ್ತ ಪರೀಕ್ಷೆ ಮಾಡಿ, ಸ್ಪರ್ಧಿಯ ಆರೋಗ್ಯ ಸ್ಥಿತಿಯ ಬಗ್ಗೆ ಬಿಗ್​ಬಾಸ್​ ಮೊದಲೇ ತಿಳಿದುಕೊಳ್ಳುವ ಉದ್ದೇಶ ರಕ್ತ ಪರೀಕ್ಷೆಯ ಹಿಂದಿದೆ ಎಂದು ಹೇಳಲಾಗಿದೆ.

ಬಿಗ್​ಬಾಸ್​ ಮನೆಗೆ ಕಂಟೆಸ್ಟೆಂಟ್​ ಆಗಿ ಹೋಗುವವರು ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸುವುದು ಕಡ್ಡಾಯವಾಗಿರುತ್ತದೆ. ಈ ಟೆಸ್ಟ್ ಅನ್ನು​ ನನ್ನ ಹಣದಿಂದಲೇ ಮಾಡಿಸಿದೆ. ಇದಕ್ಕೆ ಬಹಳ ಖರ್ಚಾಯಿತು ಅಂತಾನೂ ಪವಿ ಪೂವಪ್ಪ ಹೇಳಿಕೊಂಡಿದ್ದಾರೆ. ಇನ್ನು ಬಿಗ್​ಬಾಸ್​ ಮನೆಗೆ ಹೋಗುವ ಮುನ್ನ ಶಾಪಿಂಗ್ ಮಾಡಿದ​ರ ಬಗ್ಗೆಯೂ ಪವಿ ಪೂವಪ್ಪ ಮಾತನಾಡಿದ್ದು, ಈ ಎಲ್ಲ ಸಂಗತಿಗಳನ್ನು ತಿಳಿಯಲು ಕೆಳಗಿನ ಸಂದರ್ಶನದ ವಿಡಿಯೋ ವೀಕ್ಷಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net