More

  ತ್ರಿಷಾ ವಿರುದ್ಧ ಮದ್ರಾಸ್​ ಹೈಕೋರ್ಟ್​ ಮೆಟ್ಟಿಲೇರಿದ್ದ ಮನ್ಸೂರ್​ ಅಲಿ ಖಾನ್​ಗೆ ಬಿಗ್​ ಶಾಕ್​!

  ಚೆನ್ನೈ: ಬಹುಭಾಷಾ ನಟಿ ತ್ರಿಷಾ ಕುರಿತು ಅವಹೇಳನಾಕಾರಿಯಾಗಿ ಮಾತನಾಡಿದ ಬಳಿಕ ತೀವ್ರ ಆಕ್ರೋಶಕ್ಕೆ ಗುರಿಯಾಗಿ, ಎಲ್ಲರ ಮುಂದೆ ಕ್ಷಮೆಯಾಚಿಸಿದ ನಂತರವೂ ಮಾನನಷ್ಟ ಮೊಕದ್ದಮ್ಮೆ ಹೂಡುತ್ತೇನೆಂದು ತ್ರಿಷಾ ವಿರುದ್ಧ ಕೋರ್ಟ್​ ಮೆಟ್ಟಿಲೇರಿದ್ದ ನಟ ಮನ್ಸೂರ್​ ಅಲಿ ಖಾನ್​ಗೆ ಮತ್ತೊಮ್ಮೆ ಮುಖಭಂಗವಾಗಿದೆ.​

  ಮನ್ಸೂರ್​ ಅಲಿ ಖಾನ್​ ದಾಖಲಿಸಿದ್ದ ಮಾನಹಾನಿ ಪ್ರಕರಣವನ್ನು ರದ್ದು ಮಾಡಿದ ಮದ್ರಾಸ್​ ಹೈಕೋರ್ಟ್​, ತ್ರಿಷಾ ವಿರುದ್ಧ ನಾಲಿಗೆ ಹರಿಬಿಟ್ಟಿದ್ದಕ್ಕೆ 1 ಲಕ್ಷ ರೂ. ದಂಡ ವಿಧಿಸುವ ಮೂಲಕ ಮನ್ಸೂರ್​ಗೆ ಶಾಕ್​ ನೀಡಿದೆ. ದಂಡದ ಮೊತ್ತವನ್ನು 14 ದಿನಗಳ ಒಳಗೆ ಅಡಯಾರ್​ ಕ್ಯಾನ್ಸರ್​ ಸಂಸ್ಥೆಗೆ ನೀಡಬೇಕೆಂದು ಕೋರ್ಟ್ ನಿರ್ದೇಶನ ನೀಡಿದೆ.

  ತ್ರಿಷಾ ಮಾತ್ರವಲ್ಲದೆ, ತನ್ನ ವಿರುದ್ಧ ಮಾತನಾಡಿದ ತೆಲುಗು ಚಿತ್ರರಂಗದ ದಿಗ್ಗಜ ನಟ ಮೆಗಾಸ್ಟಾರ್​ ಚಿರಂಜೀವಿ, ನಟಿ ಹಾಗೂ ರಾಜಕಾರಣಿ ಖುಷ್ಬೂ ವಿರುದ್ಧವೂ ಮಾನಹಾನಿ ಪ್ರಕರಣ ದಾಖಲಿಸಿ, 1 ಕೋಟಿ ರೂಪಾಯಿ ಪರಿಹಾರ ಬೇಕೆಂದು ಮನ್ಸೂರ್​ ಆಗ್ರಹಿಸಿದ್ದರು. ಆದರೆ, ಅರ್ಜಿಯನ್ನು ವಜಾಗೊಳಿಸಿದ ನ್ಯಾಯಾಲಯ, ಮನ್ಸೂರ್​ ಉದ್ದೇಶವನ್ನು ಟೀಕಿಸಿತು. ಪ್ರಕರಣಕ್ಕೆ ಸಂಬಂಧಿಸಿದಂತೆ ಮನ್ಸೂರ್​ ಅವರು ನ್ಯಾಯವನ್ನು ಹುಡುಕುವ ಬದಲು ಪ್ರಚಾರವನ್ನು ಬಯಸುತ್ತಿದ್ದಾರೆ ಎಂದು ಹೈಕೋರ್ಟ್ ಪರಿಗಣಿಸಿದೆ.

  ಏನಿದು ವಿವಾದ?
  2023 ಅಕ್ಟೋಬರ್​ 19ರಂದು ಬಿಡುಗಡೆಯಾದ ಸ್ಟಾರ್​ ನಿರ್ದೇಶಕ ಲೋಕೇಶ್​ ಕನಗರಾಜು ನಿರ್ದೇಶನದ ಹಾಗೂ ಇಳಯದಳಪತಿ ವಿಜಯ್​ ನಟನೆಯ ಲಿಯೋ ಸಿನಿಮಾ ಭರ್ಜರಿ ಯಶಸ್ಸು ಸಾಧಿಸಿತು. ಈ ಸಿನಿಮಾದಲ್ಲಿ ತ್ರಿಷಾ ಸಹ ನಟಿಸಿದ್ದಾರೆ. ಮನ್ಸೂರ್​ ಅಲಿ ಖಾನ್​ ಕೂಡ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ತಿಂಗಳ ಹಿಂದೆ ಈ ಸಿನಿಮಾ ಬಗ್ಗೆ ಮಾತನಾಡುವಾಗ ನಾನು ಈ ಹಿಂದೆ ಹಲವು ಚಿತ್ರಗಳಲ್ಲಿ ನಾಯಕಿಯರಾದ ಖುಷ್ಬೂ, ರೋಜಾ ಸೇರಿದಂತೆ ಹಲವರೊಂದಿಗೆ ರೇಪ್ ಸೀಕ್ವೆನ್ಸ್ ಮಾಡಿದ್ದೇನೆ. ಆದರೆ ನನಗೆ ಲಿಯೋ ಪಾತ್ರದ ಆಫರ್ ಬಂದಾಗ, ನಾನು ತ್ರಿಷಾ ಜೊತೆ ರೇಪ್ ಸೀಕ್ವೆನ್ಸ್ ಮಾಡುತ್ತೇನೆ ಎಂದು ಭಾವಿಸಿದೆ. ದುರದೃಷ್ಟವಶಾತ್ ಸಿನಿಮಾದಲ್ಲಿ ಅಂತಹ ಸೀಕ್ವೆನ್ಸ್ ಇಲ್ಲ ಎಂದು ಮನ್ಸೂರ್​ ಹೇಳಿದ್ದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿ, ಮನ್ಸೂರ್​ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಯಿತು.

  ತ್ರಿಷಾ ಖಂಡನೆ
  ಮನ್ಸೂರ್​ ಅವರ ಆಕ್ಷೇಪಾರ್ಹ ಹೇಳಿಕೆಗಳನ್ನು ಗಮನಿಸಿದ ನಟಿ ತ್ರಿಷಾ, ಬೇಸರದ ಜತೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ತಮ್ಮ ಎಕ್ಸ್​ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿದ್ದ ತ್ರಿಷಾ, ಇತ್ತೀಚಿನ ವಿಡಿಯೋದಲ್ಲಿ ನನ್ನ ಬಗ್ಗೆ ಮನ್ಸೂರ್​ ಅಲಿ ಖಾನ್​ ಅವರು ಕೆಟ್ಟ ಮತ್ತು ಅಸಹ್ಯಕರ ರೀತಿಯಲ್ಲಿ ಮಾತನಾಡಿರುವುದು ನನ್ನ ಗಮನಕ್ಕೆ ಬಂದಿದೆ. ಇದನ್ನು ನಾನು ಬಲವಾಗಿ ಖಂಡಿಸುತ್ತೇನೆ. ಅವರು ಆಡಿರುವ ಮಾತುಗಳು ಲೈಂಗಿಕತೆ, ಅಗೌರವ, ಸ್ತ್ರೀದ್ವೇಷ ಮತ್ತು ಅವರ ಕೆಟ್ಟ ಅಭಿರುಚಿಯನ್ನು ತೋರುತ್ತದೆ. ಇನ್ನೆಂದಿಗೂ ಅವರೊಂದಿಗೆ ನಾನು ತೆರೆ ಹಂಚಿಕೊಳ್ಳುವುದಿಲ್ಲ. ಇವರಂತಹ ಜನರು ಮಾನವ ಕುಲಕ್ಕೆ ಕೆಟ್ಟ ಹೆಸರು ತರುತ್ತಿದ್ದಾರೆ ಎಂದು ಟೀಕಾ ಪ್ರಹಾರ ನಡೆಸಿದರು.

  ಲೋಕೇಶ್​ ರಿಯಾಕ್ಷನ್
  ನಾವೆಲ್ಲರೂ ಒಂದೇ ತಂಡದಲ್ಲಿ ಕೆಲಸ ಮಾಡಿದ್ದೇವೆ. ಹೀಗಿರುವಾಗ ಮನ್ಸೂರ್, ಮಹಿಳೆಯರ ಬಗ್ಗೆ ಮಾಡಿರುವ ಅಶ್ಲೀಲ, ದ್ವೇಷಪೂರಿತ ಕಾಮೆಂಟ್‌ಗಳನ್ನು ನೋಡಿ ತುಂಬಾ ಬೇಸರದ ಜತೆಗೆ ತುಂಬಾ ಕೋಪವಿದೆ. ಇಂತಹ ವರ್ತನೆಯನ್ನು ನಾನು ಬಲವಾಗಿ ಖಂಡಿಸುತ್ತೇನೆ. ನಾವು ಮಹಿಳೆಯರು ಮತ್ತು ಸಹ ಕಲಾವಿದರನ್ನು ಗೌರವದಿಂದ ಕಾಣಬೇಕು. ಯಾವುದೇ ಇಂಡಸ್ಟ್ರಿಯಲ್ಲಿ ಎಲ್ಲರನ್ನೂ ಗೌರವದಿಂದ ಕಾಣಬೇಕು ಎಂದು ನಿರ್ದೇಶಕ ಲೋಕೇಶ್​ ಕನಗರಾಜ್​ ಖಂಡಿಸಿದ್ದರು.

  ಕ್ಷಮೆಯಾಚನೆ
  ನಟಿ ತ್ರಿಷಾ ಬಗ್ಗೆ ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಮನ್ಸೂರ್​ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಚೆನ್ನೈ ಪೊಲೀಸರು ಮನ್ಸೂರ್ ಅವರನ್ನು ಅರೆಸ್ಟ್ ಮಾಡಿ ವಿಚಾರಣೆ ನಡೆಸಿದ್ದರು. ಈ ಬೆನ್ನಲ್ಲೇ ಮನ್ಸೂರ್ ಅಲಿ ಖಾನ್ ಅವರು ಕ್ಷಮೆಯಾಚಿಸಿದರು. ಮಹಿಳೆಯರ ಪಾತ್ರ ಸಮಾಜದಲ್ಲಿ ಪ್ರಮುಖವಾಗಿದ್ದು, ಇದು ಶ್ಲಾಘನೀಯ ವಿಚಾರವಾಗಿದೆ. ನಾನು ತ್ರಿಷಾ ಅವರ ಮದುವೆಯಲ್ಲಿ ಮುಂದೆ ನಿಂತು ಆರ್ಶೀವದಿಸುವ ಅವಕಾಶ ಕೊಡುವಂತೆ ಆ ದೇವರಲ್ಲಿ ಕೇಳಿಕೊಂಡಿದ್ದೇನೆ. ದಯವಿಟ್ಟು ನನ್ನನ್ನು ಕ್ಷಮಿಸಿ ಎಂದು ನಟ ಮನ್ಸೂರ್​ ಅಲಿ ಖಾನ್​ ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದರು. (ಏಜೆನ್ಸೀಸ್​)

  ಬಿಗ್​ಬಾಸ್​ ಮನೆ ಪ್ರವೇಶಕ್ಕೂ ಮುನ್ನ ಈ ಒಂದು ಟೆಸ್ಟ್​ ಕಡ್ಡಾಯ: ನೋ ಅಂದವರಿಗೆ ಬಾಗಿಲು ಬಂದ್​!

  ಅಯೋಧ್ಯೆಗೆ ವಂದೇ ಭಾರತ್ ರೈಲು: ದರ್ಭಾಂಗ್​ನಿಂದಲೇ ಸಂಚರಿಸುವುದರ ವಿಶೇಷತೆ ಏನು? ವಿವರ ಇಲ್ಲಿದೆ..

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts