ಭಾಮಾ ದಾಂಪತ್ಯದಲ್ಲಿ ಬಿರುಗಾಳಿ! ಇನ್ಮುಂದೆ ಇದೇ ನನ್ನ ಏಕೈಕ ಆಯ್ಕೆ ಎಂದು ಡಿವೋರ್ಸ್​ ಖಚಿತಪಡಿಸಿದ ನಟಿ

Actress Bhama
Published on

ತಿರುವನಂತಪುರಂ: ರಾಕಿಂಗ್​ ಸ್ಟಾರ್​ ಯಶ್​ ಅಭಿನಯದ ಮೊದಲಾಸಲ ಚಿತ್ರದ ಮೂಲಕ ಸ್ಯಾಂಡಲ್​ವುಡ್​ಗೆ ಪ್ರವೇಶ ನೀಡಿ ಗೋಲ್ಡನ್​ ಸ್ಟಾರ್​ ಗಣೇಶ್​ ನಟನೆಯ ಶೈಲೂ ಚಿತ್ರದಲ್ಲಿ ಕನ್ನಡಿಗರ ಮನ ಗೆದ್ದಿರುವ ನಟಿ ಭಾಮಾ ಕುರಿತು ಸ್ಫೋಟಕ ಸುದ್ದಿಯೊಂದು ಹೊರಬಿದ್ದಿದೆ.

ಭಾಮಾ ಅವರು ತಮ್ಮ ಗಂಡನಿಂದ ಬೇರೆಯಾಗಿದ್ದಾರೆ ಎಂಬ ಸುದ್ದಿ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಆರಂಭದಲ್ಲಿ ಇದೆಲ್ಲ ಕೇವಲ ವದಂತಿ ಮಾತ್ರ ಎಂದು ಹೇಳಲಾಗಿತ್ತು. ಆದರೆ, ಕೊನೆಗೂ ಸ್ವತಃ ಭಾಮಾ ಅವರೇ ಡಿವೋರ್ಸ್​ ವಿಚಾರವನ್ನು ಖಚಿತಪಡಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಒಂದನ್ನು ಹಂಚಿಕೊಳ್ಳುವ ಮೂಲಕ ಡಿವೋರ್ಸ್​ ಖಚಿತಪಡಿಸಿದ್ದಾರೆ. ನಾನೀಗ ಸಿಂಗಲ್​ ಮದರ್ ಎಂದು ಹೇಳಿಕೊಂಡಿದ್ದಾರೆ​. ನಾನು ಎಷ್ಟು ಬಲಶಾಲಿ ಎಂಬುದು ನನಗೇ ತಿಳಿದಿರಲಿಲ್ಲ, ನಾನು ಒಂಟಿ ತಾಯಿಯಾಗಿ ಇರುವವರೆಗೂ ಬಲಶಾಲಿಯಾಗಿರುವುದು ನನ್ನ ಏಕೈಕ ಆಯ್ಕೆಯಾಗಿದೆ. ಇನ್ಮುಂದೆ ನಾನು ಮತ್ತು ನನ್ನ ಮಗಳು ಮಾತ್ರ ಎಂದು ಭಾಮಾ ಹೇಳಿದ್ದಾರೆ. ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಮಗಳೊಂದಿಗೆ ಇರುವ ಫೋಟೋವನ್ನು ಶೇರ್​ ಮಾಡಿಕೊಂಡು ಈ ಮೇಲಿನಂತೆ ಬರೆದುಕೊಂಡಿದ್ದಾರೆ.

ಅಂದಹಾಗೆ ಭಾಮಾ ಅವರು ಕೆಲ ದಿನಗಳಿಂದ ತಮ್ಮ ಪತಿ ಅರುಣ್ ಜಗದೀಶ್ ಅವರೊಂದಿಗಿರುವ ಯಾವುದೇ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿಲ್ಲ. ಇದನ್ನು ಗಮನಿಸಿದ ಅಭಿಮಾನಿಗಳು ಗಂಡ-ಹೆಂಡತಿ ಬೇರೆ ಬೇರೆಯಾಗಿದ್ದಾರೆಯೇ ಎಂದು ಕಾಮೆಂಟ್ ಬಾಕ್ಸ್ ಮೂಲಕ ಪ್ರಶ್ನಿಸಿದ್ದರು. ಆದರೆ, ಇದ್ಯಾವುದಕ್ಕೂ ಉತ್ತರಿಸಿದ ಭಾಮಾ, ತಮ್ಮ ಮಗಳ ಚೊಚ್ಚಲ ಫೋಟೋ ಸೇರಿದಂತೆ ಅರುಣ್ ಇರುವ ಎಲ್ಲ ಫೋಟೋಗಳನ್ನು ಡಿಲೀಟ್​ ಮಾಡಿದ್ದರು. ತಮ್ಮ ಮದುವೆ ಸಮಾರಂಭಕ್ಕೆ ಸಂಬಂಧಿಸಿದ ಫೋಟೋಗಳು ಸಹ ಇತ್ತು. ಅವುಗಳನ್ನೂ ಡಿಲೀಟ್​ ಮಾಡಲಾಗಿದೆ.

ಇನ್​ಸ್ಟಾಗ್ರಾಂ ಪೇಜ್​ನ ಪ್ರೋಫೈಲ್​ನಲ್ಲಿ ಕಲಾವಿದೆ, ಗಾಯಕಿ ಹಾಗೂ ಗೌರಿಯ ತಾಯಿ ಎಂದು ಬರೆದುಕೊಂಡಿದ್ದಾರೆ. ಈ ಹಿಂದೆ ತಮ್ಮ ಖಾತೆಯಲ್ಲಿ ತನ್ನ ಹೆಸರಿನ ಜತೆಗೆ ಪತಿಯ ಹೆಸರು ಸಹ ಇತ್ತು. ಆದರೆ, ಇದೀಗ ಅರುಣ್ ಹೆಸರು ಸಹ ಕೈಬಿಡಲಾಗಿದೆ. ಭಾಮಾ ಅವರು ದುಬೈನಲ್ಲಿ ಗೋಲ್ಡನ್ ವೀಸಾ ಪಡೆಯುವ ಸಂದರ್ಭದಲ್ಲೂ ಫೋಟೋಗಳಲ್ಲಿ ಅರುಣ್ ಇರಲಿಲ್ಲ. ಹೀಗಾಗಿ ಭಾಮಾ ಅವರ ದಾಂಪತ್ಯ ಜೀವದಲ್ಲಿ ಬಿರುಕು ಮೂಡಿರುವುದು ಸ್ಪಷ್ಟವಾಗಿದೆ. ಡಿವೋರ್ಸ್​ಗೆ ಕಾರಣವೇನು? ಇಬ್ಬರ ನಡುವೆ ಏನಾಯಿತು? ಎಂಬ ಸಂಗತಿ ತಿಳಿದುಬರಬೇಕಿದೆ.

ಭಾಮಾ ಅವರು 2020ರ ಜನವರಿಯಲ್ಲಿ ಅರುಣ್​ ಎಂಬ ಉದ್ಯಮಿಯನ್ನು ಮದುವೆಯಾದರು. ಬಳಿಕ ಸಿನಿಮಾ ಕ್ಷೇತ್ರದಿಂದ ಅಂತರ ಕಾಯ್ದುಕೊಂಡರು. 2021ರಲ್ಲಿ ಭಾಮಾ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದರು.

ಅಂದಹಾಗೆ ಭಾಮಾ ಅವರು ನಟ ಯಶ್​ ಅಭಿನಯದ ಮೊದಲಾಸಲ ಚಿತ್ರದ ಮೂಲಕ ಸ್ಯಾಂಡಲ್​ವುಡ್​ಗೆ ಎಂಟ್ರಿ ನೀಡಿದರು. ಬಳಿಕ ಶೈಲೂ, ಆಟೊ ರಾಜ ಹಾಗೂ ರಾಗ ಸೇರಿದಂತೆ ಹಲವು ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡ ಮಾತ್ರವಲ್ಲದೇ ಕೇರಳ ಮೂಲದ ನಟಿಯಾಗಿರುವ ಭಾಮಾ ಮಲಯಾಳಂನಲ್ಲಿ ಬಹುತೇಕ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ತಮಿಳುನಲ್ಲಿಯು ಕೆಲ ಚಿತ್ರಗಳಲ್ಲಿ ನಟಿಸಿದ್ದಾರೆ. ಭಾಮಾ ಅವರು ಕೊನೆಯದಾಗಿ 2018 ರಲ್ಲಿ ಬಿಡುಗಡೆಯಾದ ಮಲಯಾಳಂ ಚಲನಚಿತ್ರ ‘ಖಿಲಾಫತ್’ ನಲ್ಲಿ ಕಾಣಿಸಿಕೊಂಡರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net