ಆಸ್ಪತ್ರೆಯಿಂದ ನಟ ಗೋವಿಂದ ಡಿಸ್ಚಾರ್ಜ್: ಅಭಿಮಾನಿಗಳಿಗೆ ಆರೋಗ್ಯ ಸಲಹೆ ಕೊಟ್ಟ​ ಹಿರಿಯ ನಟ! Actor Govinda

Actor Govinda ​
Published on

ಮುಂಬೈ: ತೀವ್ರ ಬಳಲಿಕೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಹಿರಿಯ ಬಾಲಿವುಡ್ ನಟ ಮತ್ತು ಶಿವಸೇನಾ ನಾಯಕ ಗೋವಿಂದ ( Actor Govinda ) ಇಂದು (ನ.12) ಸಂಜೆ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದಾರೆ.

ನಿನ್ನೆ (ನ.11) ರಾತ್ರಿ ಜುಹುವಿನಲ್ಲಿರುವ ತಮ್ಮ ನಿವಾಸದಲ್ಲಿ ತೀವ್ರ ಆಯಾಸದಿಂದ ಕುಸಿದು ಬಿದ್ದರು. ತಕ್ಷಣ ಅವರನ್ನು ಜುಹುವಿನ ಕ್ರಿಟಿಕೇರ್ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆ ಪಡೆದು ಚೇತರಿಸಿಕೊಂಡ ಹಿನ್ನೆಲೆಯಲ್ಲಿ ಗೋವಿಂದ ಅವರನ್ನು ಸಂಜೆ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಮಾಡಲಾಗಿದೆ.

ಆಸ್ಪತ್ರೆಯಿಂದ ಬಿಡುಗಡೆಯಾದ ಬೆನ್ನಲ್ಲೇ ಎನ್​ಡಿಟಿವಿ ಜತೆ ಮಾತನಾಡಿದ ಗೋವಿಂದ, ಅತಿಯಾದ ವ್ಯಾಯಾಮವೇ ಆಯಾಸಕ್ಕೆ ಕಾರಣ ಎಂದು ವೈದ್ಯರು ತಿಳಿಸಿದರು ಎಂದರು. ಇದೇ ಸಮಯದಲ್ಲಿ ತಮ್ಮ ಅಭಿಮಾನಿಗಳಿಗೆ ಆರೋಗ್ಯದ ಸಲಹೆ ನೀಡಿದರು. ಉತ್ತಮ ಆರೋಗ್ಯ ಮತ್ತು ಶಕ್ತಿಗಾಗಿ ಎಲ್ಲರು ತಮ್ಮ ದೈನಂದಿನ ದಿನಚರಿಯಲ್ಲಿ ಯೋಗ ಮತ್ತು ಪ್ರಾಣಾಯಾಮವನ್ನು ಅಳವಡಿಸಿಕೊಳ್ಳಬೇಕು ಎಂದರು.

ಆಸ್ಪತ್ರೆಗೆ ದಾಖಲಿಸಿದ ಬೆನ್ನಲ್ಲೇ ಅವರ ಸ್ನೇಹಿತ ಮತ್ತು ಕಾನೂನು ಸಲಹೆಗಾರ ಲಲಿತ್ ಬಿಂದಾಲ್ ಅವರು ಮಧ್ಯಮಗಳಿಗೆ ಹೇಳಿಕೆ ನೀಡಿದ್ದರು. ಗೋವಿಂದ ಅವರನ್ನು ಅವರ ನಿವಾಸದ ಬಳಿಯಿರುವ ಕ್ರಿಟಿಕಲ್ ಕೇರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಾವು ಹೆಚ್ಚಿನ ರಕ್ತ ಪರೀಕ್ಷೆಗಳನ್ನು ಮಾಡಿಸಿದ್ದೇವೆ. ಪ್ರಸ್ತುತ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಯಾವುದೇ ಅಭಿಮಾನಿಗಳು ಚಿಂತಿಸುವ ಅಗತ್ಯವಿಲ್ಲ ಎಂದಿದ್ದರು.

ಅಂದಹಾಗೆ, ಕಳೆದ ವರ್ಷ, ಗೋವಿಂದ ಅವರು ತಮ್ಮ ಪರವಾನಗಿ ಪಡೆದ ರಿವಾಲ್ವರ್‌ನಿಂದ ಆಕಸ್ಮಿಕವಾಗಿ ಗುಂಡು ಹಾರಿಸಿಕೊಂಡು ಕಾಲಿಗೆ ಗುಂಡು ತಗುಲಿ ಗಾಯಗೊಂಡಿದ್ದರು. ಮೊಣಕಾಲಿನ ಕೆಳಗೆ ಗಾಯವಾಗಿದ್ದರಿಂದ ಅವರನ್ನು ಜುಹುವಿನಲ್ಲಿರುವ ಅವರ ಮನೆಯ ಬಳಿಯ ಕ್ರಿಟಿಕೇರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸುಮಾರು ಒಂದು ಗಂಟೆಯ ಶಸ್ತ್ರಚಿಕಿತ್ಸೆಯ ನಂತರ ವೈದ್ಯರು ಗುಂಡನ್ನು ಹೊರತೆಗೆದರು. ಆ ಸಮಯದಲ್ಲಿ ಅವರ ಮ್ಯಾನೇಜರ್​​ ಪ್ರಕಾರ, ಗೋವಿಂದ ತಮ್ಮ ಪರವಾನಗಿ ಪಡೆದ ರಿವಾಲ್ವರ್ ಅನ್ನು ಕಪಾಟಿನಲ್ಲಿ ಇಡುತ್ತಿದ್ದಾಗ ಆಕಸ್ಮಿಕವಾಗಿ ಸ್ಫೋಟಗೊಂಡು ಗಾಯಗಳಾಗಿದ್ದವು.

ಗೋವಿಂದ ಅವರು 1963, ಡಿಸೆಂಬರ್ 21ರಂದು ಮುಂಬೈನಲ್ಲಿ ಜನಿಸಿದರು. ಇವರು ಬಾಲಿವುಡ್‌ನ ಪ್ರಸಿದ್ಧ ನಟ, ನೃತ್ಯಕಾರ ಮತ್ತು ಕಾಮೆಡಿಯನ್. 1986ರಲ್ಲಿ 'ಇಲ್ಜಾಮ್' ಚಿತ್ರದೊಂದಿಗೆ ಚಿತ್ರರಂಗಕ್ಕೆ ಪ್ರವೇಶಿಸಿ 120ಕ್ಕೂ ಹೆಚ್ಚು ಹಿಂದಿ ಚಿತ್ರಗಳಲ್ಲಿ ಅಭಿನಯಿಸಿ 1990ರ ದಶಕದಲ್ಲಿ 'ಕೂಲಿ ನಂ.1', 'ಹೀರೋ ನಂ.1', 'ಧೀರ್ ಧೀರ್' ಮುಂತಾದ ಕಾಮೆಡಿ ಹಿಟ್‌ಗಳ ಮೂಲಕ 'ಮಿಸ್ಟರ್ ಬೀನ್ ಆಫ್ ಬಾಲಿವುಡ್' ಎಂದು ಕರೆಯಲ್ಪಟ್ಟು ಜನಪ್ರಿಯತೆ ಸಾಧಿಸಿದರು. ಇವರು ಚಿತ್ರರಂಗ ಕುಟುಂಬದಿಂದ ಬಂದವರು. ಇವರ ತಂದೆ ಅರುಣ್ ಕುಮಾರ್ ಅಹುಜಾ ಕೂಡ ನಟರಾಗಿದ್ದರು. ತಾಯಿ ನಿರ್ಮಲಾ ದೇವಿ ಗಾಯಕಿ ಹಾಗೂ ನಟಿಯಾಗಿದ್ದರು. 2004ರಲ್ಲಿ ಕಾಂಗ್ರೆಸ್ ಪಕ್ಷದಿಂದ ಲೋಕಸಭಾ ಸದಸ್ಯರಾಗಿ ರಾಜಕೀಯಕ್ಕೂ ತೊಡಗಿ ಮರಳಿ ಚಿತ್ರರಂಗಕ್ಕೆ ಬಂದು 'ರಂಗೀಲಾ ರಾಸ್ತಾ' ಮುಂತಾದ ಚಿತ್ರಗಳಲ್ಲಿ ಗಮನ ಸೆಳೆದರು. ಅವರ ಆಕರ್ಷಕ ನೃತ್ಯ ಮತ್ತು ಹಾಸ್ಯ ನಟನೆ ಇಂದಿಗೂ ಚಿತ್ರರಸಿಕರ ಹೃದಯ ಗೆಲ್ಲುತ್ತದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net