

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ( RCB ) ತಂಡದ ಅಭಿಮಾನಿಗಳೇ... ನಿಮಗಿದೋ ಒಂದು ಕಹಿ ಸುದ್ದಿ ಬಂದಿದೆ. ಸದ್ಯ ನಡೆಯುತ್ತಿರುವ ಬೆಳವಣಿಗೆ ನೋಡಿದರೆ ನಿಮ್ಮ ಆಸೆಗೆ ತಣ್ಣೀರು ಬೀಳುವುದು ಗ್ಯಾರಂಟಿ. ಮುಂದಿನ ಸೀಸನ್ಗೆ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದರೆ ಈಗಲೇ ಮರೆತುಬಿಡಿ. ಏಕೆಂದರೆ, ನೀವು ಅಂದುಕೊಂಡಿದ್ದು ನಡೆಯುವುದು ಡೌಟ್. ಅಷ್ಟಕ್ಕೂ ಯಾವುದು ಆ ಕಹಿ ಸುದ್ದಿ? ಅಂಥ ಬೆಳವಣಿಗೆ ಏನು ನಡೆಯುತ್ತಿದೆ? ಆರ್ಸಿಬಿಗೆ ಏನಾಯ್ತು? ಅನ್ನೋ ಪ್ರಶ್ನೆಗಳು ನಿಮ್ಮ ತಲೆಯಲ್ಲಿ ಮೂಡಿದ್ದರೆ, ಈ ಸುದ್ದಿಯನ್ನು ಕಂಪ್ಲೀಟ್ ಓದಿ.
ಕಳೆದ 17 ವರ್ಷಗಳ ಸುದೀರ್ಘ ಕಾಯುವಿಕೆಯ ಬಳಿಕ ಕಳೆದ ಸೀಸನ್ನಲ್ಲಿ ಚೊಚ್ಚಲ ಬಾರಿಗೆ ಆರ್‌ಸಿಬಿ ಐಪಿಎಲ್ ಕಪ್ ಗೆದ್ದಿದ್ದು ನಿಮಗೆಲ್ಲರಿಗೂ ಗೊತ್ತೇ ಇದೆ. ಆ ಕ್ಷಣ ಮರೆಯುವಂಥದ್ದೇ ಅಲ್ಲ. ಪ್ರತಿ ಬಾರಿ ಈ ಸಲ ಕಪ್ ನಮ್ದೆ ಅಂತಾ ಹೇಳಿ ಹೇಳಿ ಅಭಿಮಾನಿಗಳಿಗೆ ಬೇಸರವಾಗಿತ್ತು. ಆದರೆ, ಆ ಬೇಸರ ಕಳೆದ ವರ್ಷ ಕಳೆದು ಹೋಯಿತು. ಕಪ್ ಗೆದ್ದ ಖುಷಿಯಲ್ಲಿ ಅಭಿಮಾನಿಗಳು ಸಂಭ್ರಮಿಸಿದ್ದೋ ಸಂಭ್ರಮಿಸಿದ್ದು, ಸಿಕ್ಕಾಪಟ್ಟೆ ಪಟಾಕಿಗಳನ್ನು ಸಿಡಿಸಿದರು. ರಾತ್ರಿಯೆಲ್ಲ ಬೆಂಗಳೂರಿನ ಬೀದಿಗಳಲ್ಲಿ ಕ್ರೀಡಾಭಿಮಾನಿಗಳು ಕುಣಿದು ಕುಪ್ಪಳಿಸಿದರು. ಆದರೆ, ಆ ಖುಷಿ ಹೆಚ್ಚು ದಿನ ಉಳಿಯಲಿಲ್ಲ.
ಹೌದು, ಚೊಚ್ಚಲ ಬಾರಿಗೆ ಐಪಿಎಲ್ ಕಪ್ ಗೆದ್ದ ಖುಷಿಯಲ್ಲಿ ಆರ್‌ಸಿಬಿ ತಂಡ ವಿಜೋಯೋತ್ಸದ ಮೆರವಣಿಗೆ ನಡೆಸಲು ಆರಂಭದಲ್ಲಿ ಪ್ಲಾನ್ ಮಾಡಿತು. ಆದರೆ, ಏನಾಯಿತೋ ಕಾಣೆ, ದಿಢೀರನೇ ಪ್ಲಾನ್ ಬದಲಿಸಿ, ಎಲ್ಲರೂ ಕ್ರೀಡಾಂಗಣದಲ್ಲಿ ಸೇರೋಣ ಎಂದು ಕರೆ ನೀಡಿತು. ಹೀಗಾಗಿ, ಲಕ್ಷಾಂತರ ಕ್ರೀಡಾಭಿಮಾನಿಗಳು ಕ್ರೀಡಾಂಗಣಕ್ಕೆ ಜಮಾಯಿಸಿದರು. ಇತ್ತ ಗುಜರಾತಿನ ಅಹಮದಾಬಾದ್ನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಗೆದ್ದು, ಕಪ್ ಹಿಡಿದುಕೊಂಡು ಬೆಂಗಳೂರಿಗೆ ಬಂದ ಆರ್‌ಸಿಬಿ ಪಡೆ ನೇರವಾಗಿ ವಿಧಾನಸೌಧಕ್ಕೆ ತೆರಳಿತು. ಏಕೆಂದರೆ, ಅಲ್ಲಿ ಸರ್ಕಾರ ಅಭಿನಂದನಾ ಕಾರ್ಯಕ್ರಮವನ್ನು ಆಯೋಜನೆ ಮಾಡಿತ್ತು.
ಇತ್ತ ಕ್ರೀಡಾಂಗಣದಲ್ಲಿ ಆರ್‌ಸಿಬಿ ಅಭಿಮಾನಿಗಳು ಕ್ಕಿಕ್ಕಿರಿದು ತುಂಬಿದ್ದರು. ಇದರ ನಡುವೆ ಉಚಿತ ಟಿಕೆಟ್ ವಿತರಣೆಯ ವದಂತಿ ಹಬ್ಬಿತು. ಫ್ರೀ ಟಿಕೆಟ್ಗಾಗಿ ಅಭಿಮಾನಿಗಳೆಲ್ಲ ಮುಗಿಬಿದ್ದರು. ಇದರಿಂದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ ಸಂಭವಿಸಿ, 11 ಮಂದಿ ದುರಂತ ಸಾವಿಗೀಡಾದರು. ಅಲ್ಲದೆ, 52 ಮಂದಿ ಈ ಘಟನೆಯಲ್ಲಿ ಗಾಯಗೊಂಡರು ಕೂಡ. ಕ್ರೀಡಾಂಗಣದ ಸಾಮರ್ಥ್ಯಕ್ಕಿಂತ ಹೆಚ್ಚಿನ ಜನಸಂದಣಿ ಇದ್ದ ಕಾರಣ ಈ ಘಟನೆ ಸಂಭವಿಸಿತು. ಈ ಘಟನೆ ಬಹುದೊಡ್ಡ ವಿವಾದವಾಯಿತು. ರಾಷ್ಟ್ರವಲ್ಲದೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರಿ ಚರ್ಚೆಯಾಯಿತು. ಇದರ ನಡುವೆ ಈ ಘಟನೆ ರಾಜಕೀಯ ಸ್ವರೂಪ ಪಡೆದುಕೊಂಡು ಆರೋಪ-ಪ್ರತ್ಯಾರೋಪಕ್ಕೂ ಕಾರಣವಾಯಿತು. ಅಂತಿಮವಾಗಿ ಒಂದಿಷ್ಟು ಮಂದಿಯ ತಲೆದಂಡವು ಆಯಿತು.
ತಾಜಾ ಸಂಗತಿ ಏನೆಂದರೆ, ಈ ಒಂದು ಘಟನೆ ಮುಂದಿನ ವರ್ಷ ಅಂದರೆ 2026ರ ಐಪಿಎಲ್ ಮೇಲೆ ಪರಿಣಾಮ ಬೀರಲಿದೆ ಎಂಬ ವರದಿ ಇದೆ. ಹೇಗೆಂದರೆ, ಮುಂಬರುವ 19ನೇ ಸೀಸನ್ನಲ್ಲಿ ಐಪಿಎಲ್ನ ಐಕಾನಿಕ್ ಸ್ಥಳ ಎಂದೇ ಖ್ಯಾತಿಯಾಗಿರುವ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಯಾವುದೇ ಪಂದ್ಯಗಳನ್ನು ಆಯೋಜಿಸುವುದಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಹೀಗಾಗಿ ಮುಂದಿನ ಸೀಸನ್ನಲ್ಲಿ ಆರ್‌ಸಿಬಿ ತನ್ನ ತವರು ನೆಲದಲ್ಲಿ ಪಂದ್ಯಗಳನ್ನು ಆಡಲು ಸಾಧ್ಯವಿಲ್ಲ. ಚಿನ್ನಸ್ವಾಮಿ ಕ್ರೀಡಾಂಗಣ ಬದಲಿಗೆ ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಆರ್‌ಸಿಬಿ ತನ್ನ ತವರು ಪಂದ್ಯಗಳನ್ನು ಆಡಲಿದೆ ಎಂಬ ಮಾತಿದೆ. ಈ ಬಗ್ಗೆ ಆರ್‌ಸಿಬಿ ಆಗಲಿ, ಬಿಸಿಸಿಐ ಆಗಲಿ ಅಥವಾ ಐಪಿಎಲ್ ಆಯೋಜಕರಾಗಲಿ ಖಚಿತಪಡಿಸಿಲ್ಲ. ಆದರೆ, ಮೂಲಗಳ ಪ್ರಕಾರ, ಇಂಥದ್ದೊಂದು ಮಾತುಕತೆ ನಡೆಯುತ್ತಿದೆ ಎಂದು ಡಿಎನ್ಎ ನ್ಯೂಸ್ ವರದಿ ಮಾಡಿದೆ.
ಅಂದಹಾಗೆ, ಕಾಲ್ತುಳಿತದ ನಂತರ, ಎಂ ಚಿನ್ನಸ್ವಾಮಿ ಕ್ರೀಡಾಂಗಣವನ್ನು ಯಾವುದೇ ಕಾರ್ಯಕ್ರಮಗಳನ್ನು ಆಯೋಜಿಸಲು ಅನರ್ಹವೆಂದು ಘೋಷಿಸಲಾಗಿದೆ. ಇದರಿಂದಾಗಿ, ಪಂದ್ಯಗಳನ್ನು ಬೇರೆ ಕ್ರೀಡಾಂಗಣಕ್ಕೆ ಸ್ಥಳಾಂತರಿಸಲಾಗುತ್ತಿದೆ ಎಂಬ ವರದಿಗಳಿವೆ. ಆದಾಗ್ಯೂ, ಈ ವಿಷಯದಲ್ಲಿ ಬಿಸಿಸಿಐ ಇನ್ನೂ ಯಾವುದೇ ಸ್ಪಷ್ಟನೆ ನೀಡಿಲ್ಲ. ಈ ಬಗ್ಗೆ ಚರ್ಚೆಗಳು ನಡೆಯುತ್ತಿರುವುದಂತೂ ನಿಜ ಎಂದು ಹೇಳಲಾಗುತ್ತಿದೆ.
ಮತ್ತೊಂದೆಡೆ, ಆರ್‌ಸಿಬಿ ಅಥವಾ ಯಾವುದೇ ತಂಡವು ತಮ್ಮ ತವರು ಪಂದ್ಯಗಳನ್ನು ಬೇರೆ ಮೈದಾನಗಳಲ್ಲಿ ಈವರೆಗೂ ಆಡಿಲ್ಲ. ಈಗ, ಆರ್‌ಸಿಬಿ ಪುಣೆ ಮೈದಾನದಲ್ಲಿ ಆಡಿದರೆ, ತಮ್ಮ ತವರು ಮೈದಾನವನ್ನು ಹೊರತುಪಡಿಸಿ ಬೇರೆ ಸ್ಥಳದಲ್ಲಿ ಆಡಿದ ಮೊದಲ ತಂಡ ಎಂಬ ಹೆಸರಿಗೆ ಪಾತ್ರವಾಗುತ್ತದೆ. ಇನ್ನು 2009 ರಲ್ಲಿಯೂ ಸಹ, ಆರ್‌ಸಿಬಿ ಬೆಂಗಳೂರಿನಲ್ಲಿ ತನ್ನ ಪಂದ್ಯಗಳನ್ನು ಆಡಲಿಲ್ಲ. ಏಕೆಂದರೆ, ಆ ಸಮಯದಲ್ಲಿ ಇಡೀ ಪಂದ್ಯಾವಳಿಯನ್ನು ದಕ್ಷಿಣ ಆಫ್ರಿಕಾಕ್ಕೆ ಸ್ಥಳಾಂತರಿಸಲಾಯಿತು. ಇದು ಮಾತ್ರವಲ್ಲದೆ, ಕೋವಿಡ್ ಸಮಯದಲ್ಲಿಯೂ ಸಹ ಆರ್‌ಸಿಬಿ ಬೆಂಗಳೂರಿನಲ್ಲಿ ಆಡಲಿಲ್ಲ. ಮಹಾಮಾರಿ ಕೋವಿಡ್ ಕಾರಣದಿಂದಾಗಿ ದುಬೈನಲ್ಲಿ ಆಡಿಸಲಾಯಿತು. ಇಡೀ ಟೂರ್ನಿ ಬೇರೆ ನಡೆದಿದ್ದರಿಂದ ಈ ಎರಡೂ ಲೆಕ್ಕಕ್ಕೆ ಬರುವುದಿಲ್ಲ. (ಏಜೆನ್ಸೀಸ್)