ನಾನು ನನ್ನ ಸ್ವಾರ್ಥಕ್ಕಾಗಿ... 36 ವರ್ಷಗಳ ಬಳಿಕ ಬಾಲ ಕಲಾವಿದೆಗೆ ಕ್ಷಮೆಯಾಚಿಸಿದ ಆರ್​ಜಿವಿ! Ram Gopal Varma

Ram Gopal Varma
Published on

ಹೈದರಾಬಾದ್​: ಟಾಲಿವುಡ್​ನಲ್ಲಿ ಹೊಸ ಯುಗದ ಆರಂಭಕ್ಕೆ ನಾಂದಿಯಾಡಿದ ಸೂಪರ್​ ಹಿಟ್​ ಸಿನಿಮಾ ಅಂದರೆ ಅದು ಶಿವ. ರಾಮ್ ಗೋಪಾಲ್ ವರ್ಮ ( Ram Gopal Varma ) ತಮ್ಮ ಮೊದಲ ಚಿತ್ರದಲ್ಲೇ ಭರ್ಜರಿ ಯಶಸ್ಸನ್ನು ಗಳಿಸಿದರು.

ಸೂಪರ್​ ಸ್ಟಾರ್​ ನಾಗಾರ್ಜುನ, ಅಮಲಾ ಮತ್ತು ಜೆಡಿ ಚಕ್ರವರ್ತಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಚಿತ್ರವು 1989, ಅಕ್ಟೋಬರ್ 5ರಂದು ಬಿಡುಗಡೆಯಾಯಿತು. ಬರೋಬ್ಬರಿ 36 ವರ್ಷಗಳ ನಂತರ, ಶಿವ ಚಿತ್ರವನ್ನು ನವೆಂಬರ್ 14 ರಂದು ಮರು ಬಿಡುಗಡೆ ಮಾಡಲಾಗುತ್ತಿದೆ.

ಈ ವಿಶೇಷ ಸಂದರ್ಭದಲ್ಲಿ ನಿರ್ದೇಶಕ ಆರ್‌ಜಿವಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹುಡುಗಿಯೊಬ್ಬಳ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಆ ಫೋಟೋದಲ್ಲಿರುವ ಯುವತಿ ಬೇರೆ ಯಾರೂ ಅಲ್ಲ, ಆಕೆ ಶಿವ ಚಿತ್ರದ ಬಾಲ ಕಲಾವಿದೆ.

ಅಂದಹಾಗೆ, ಶಿವ ಚಿತ್ರದ ದೃಶ್ಯವೊಂದರಲ್ಲಿ ಭವಾನಿ ಗ್ಯಾಂಗ್ ಹೀರೋ ನಾಗಾರ್ಜುನರನ್ನು ಕಾರಿನಲ್ಲಿ ಬೆನ್ನಟ್ಟುತ್ತದೆ. ಈ ವೇಳೆ ನಾಗಾರ್ಜುನ್​ ಅವರು ತಮ್ಮ ಸೈಕಲ್​ನ ಮುಂದೆ ಒಂದು ಪುಟ್ಟ ಬಾಲಕಿಯನ್ನು ಕೂರಿಸಿಕೊಂಡು ವೇಗವಾಗಿ ಸವಾರಿ ಮಾಡಿ, ಗೂಂಡಾಗಳಿಂದ ಎಸ್ಕೇಪ್​ ಆಗಲು ಪ್ರಯತ್ನಿಸುತ್ತಾರೆ. ಅಷ್ಟರಲ್ಲಿ, ಅವರಿಗೆ ಅಪಘಾತವಾಗುತ್ತದೆ ಮತ್ತು ಇಬ್ಬರೂ ಕೆಳಗೆ ಬೀಳುತ್ತಾರೆ. ಇದಾದ ನಂತರ ಹೀರೋ ನಾಗಾರ್ಜುನ್​ ಮಗುವನ್ನು ಮೇಲಕ್ಕೆ ಎತ್ತಿಕೊಂಡು ಗೂಂಡಾಗಳೊಂದಿಗೆ ಫೈಟ್​ ಮಾಡುತ್ತಾರೆ.

ಆ ದೃಶ್ಯದಲ್ಲಿರುವ ಮಗುವಿನ ಹೆಸರು ಸುಷ್ಮಾ. ಆಕೆ ಈಗ ಹೇಗಿದ್ದಾಳೆ? ಎಲ್ಲಿದ್ದಾಳೆ? ಎಂಬ ಮಾಹಿತಿಯನ್ನು ರಾಮ್​ ಗೋಪಾಲ್​ ವರ್ಮ ವಿವರಿಸಿದ್ದಾರೆ. ತಮ್ಮ ಎಕ್ಸ್​ ಖಾತೆಯಲ್ಲಿ ಈಗಿನ ಫೋಟೋ ಹಂಚಿಕೊಂಡಿರುವ ಆರ್​ಜಿವಿ, ಸೈಕಲ್ ಚೇಸ್ ದೃಶ್ಯದಲ್ಲಿರುವ ಮಗು ಸುಷ್ಮಾ, ಪ್ರಸ್ತುತ ಅಮೆರಿಕದಲ್ಲಿ AI ಮತ್ತು ಅರಿವಿನ ವಿಜ್ಞಾನದಲ್ಲಿ ಸಂಶೋಧನೆ ಮಾಡುತ್ತಿದ್ದಾಳೆ ಎಂದು ತಿಳಿಸಿದ್ದಾರೆ.

ಮತ್ತೊಂದು ಟ್ವೀಟ್‌ ಮಾಡಿರುವ ಆರ್​ಜಿವಿ, ಸುಷ್ಮಾ ನೀವು ತುಂಬಾ ಭಯಾನಕ ದೃಶ್ಯಗಳಲ್ಲಿ ನಟನೆ ಮಾಡಿದ್ದೀರಿ. ಆ ಸಮಯದಲ್ಲಿ, ಆ ದೃಶ್ಯ ಎಷ್ಟು ಅಪಾಯಕಾರಿ ಎಂದು ನನಗೆ ಅರ್ಥವಾಗಲಿಲ್ಲ. ನಿರ್ದೇಶಕನಾಗಿ, ನಾನು ನನ್ನ ಸ್ವಾರ್ಥಕ್ಕಾಗಿ ಮಾತ್ರ ಅಂತಹ ಅಪಾಯಕಾರಿ ದೃಶ್ಯಗಳನ್ನು ಸೆರೆಹಿಡಿದೆ. ಅದಕ್ಕಾಗಿ, "ನನ್ನನ್ನು ಕ್ಷಮಿಸಿ" ಎಂದು 36 ವರ್ಷಗಳ ನಂತರ ಯುವತಿ ಬಳಿ ಆರ್​ಸಿಬಿ ಕ್ಷಮೆಯಾಚಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net