BCCI ಹೇಳಿದ ಮಾತಿಗೆ ಓಕೆ ಎಂದ ರೋಹಿತ್... ಹಾಗಾದ್ರೆ ಕೊಹ್ಲಿ ನಿಲುವೇನು? ವಿಶ್ವಕಪ್​ನಲ್ಲಿ ಆಡಲ್ವಾ ಕೊಹ್ಲಿ? Rohit Sharma

Rohit Sharma
Published on

ಮುಂಬೈ : ಇತ್ತೀಚೆಗಷ್ಟೇ ಮುಕ್ತಾಯಗೊಂಡ ಆಸ್ಟ್ರೇಲಿಯಾ ಪ್ರವಾಸದ ವೇಳೆ ಅದ್ಭುತ ಪ್ರದರ್ಶನ ನೀಡಿದ ಟೀಮ್ ಇಂಡಿಯಾದ ಸ್ಟಾರ್ ಓಪನರ್ ರೋಹಿತ್ ಶರ್ಮ ( Rohit Sharma ), ಇದೀಗ ತವರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ ಏಕದಿನ ಸರಣಿಗೆ ತಯಾರಿ ನಡೆಸುತ್ತಿದ್ದಾರೆ.

ಪ್ರಸ್ತುತ ರೋಹಿತ್ ಅವರು ಮುಂಬೈನ ಶರದ್ ಪವಾರ್ ಇಂಡೋರ್​ ಅಕಾಡೆಮಿಯಲ್ಲಿ ಕಠಿಣ ಪರಿಶ್ರಮ ಪಡುತ್ತಿದ್ದಾರೆ. 2027ರ ವಿಶ್ವಕಪ್‌ನಲ್ಲಿ ಆಡುವ ಗುರಿಯನ್ನು ಹೊಂದಿರುವ ಹಿಟ್‌ಮ್ಯಾನ್, ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲೂ ತಮ್ಮ ಸಾಮರ್ಥ್ಯ ತೋರಿಸಲು ತುಂಬಾ ಉತ್ಸುಕರಾಗಿದ್ದಾರೆ.

ಇದೇ ಸಂದರ್ಭದಲ್ಲಿ, ರೋಹಿತ್ ಅವರು ಒಂದು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆಂದು ವರದಿಯಾಗಿದೆ. ಅದೇನೆಂದರೆ, ಈ ವರ್ಷದ ಡಿಸೆಂಬರ್‌ನಲ್ಲಿ ಪ್ರಾರಂಭವಾಗುವ ದೇಶೀಯ ಏಕದಿನ ಪಂದ್ಯಾವಳಿಯಾದ ವಿಜಯ್ ಹಜಾರೆ ಟ್ರೋಫಿಯಲ್ಲಿ ರೋಹಿತ್ ಆಡಲಿದ್ದಾರಂತೆ. ಇದರ ಜೊತೆಗೆ, ಸೈಯದ್ ಮುಷ್ತಾಕ್ ಅಲಿ ಟಿ20 ಪಂದ್ಯಾವಳಿಯಲ್ಲೂ ರೋಹಿತ್​ ಆಡಲಿದ್ದಾರೆ ಎಂದು ವರದಿಯಾಗಿದೆ.

ರೋಹಿತ್ ಈಗಾಗಲೇ ಮುಂಬೈ ಕ್ರಿಕೆಟ್ ಅಸೋಸಿಯೇಷನ್ ​​(ಎಂಸಿಎ) ಗೆ ತಮ್ಮ ನಿರ್ಧಾರವನ್ನು ತಿಳಿಸಿದ್ದಾರೆ ಎಂದು ಹಲವು ವರದಿಗಳು ಸೂಚಿಸುತ್ತವೆ. ಆದಾಗ್ಯೂ, 50 ಓವರ್‌ಗಳ ವಿಶ್ವಕಪ್‌ಗೆ ಇನ್ನೂ ಎರಡು ವರ್ಷಗಳು ಬಾಕಿ ಇರುವಾಗ, ರೋಹಿತ್ ಮತ್ತು ವಿರಾಟ್ ಕೊಹ್ಲಿ ಆಯ್ಕೆಯ ಬಗ್ಗೆ ಬಿಸಿಸಿಐ ಯಾವುದೇ ಸ್ಪಷ್ಟನೆ ನೀಡಿಲ್ಲ. ಆದರೆ, ಬಿಸಿಸಿಐ ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್, ಏಕದಿನ ತಂಡಕ್ಕೆ ಆಯ್ಕೆಯಾಗಬೇಕಾದರೆ ಇಬ್ಬರೂ ದೇಶೀಯ ಕ್ರಿಕೆಟ್ ಆಡಬೇಕು ಎಂದು ಸ್ಪಷ್ಟಪಡಿಸಿದ್ದಾರೆ. ಈ ಪ್ರಕ್ರಿಯೆಯಲ್ಲಿ, ರೋಹಿತ್ ಶರ್ಮ ವಿಜಯ್ ಹಜಾರೆ ಟ್ರೋಫಿಯಲ್ಲಿ ಆಡಲು ನಿರ್ಧರಿಸಿದ್ದಾರೆ.

ಆದರೆ, ವಿರಾಟ್ ಕೊಹ್ಲಿ ಅವರು ವಿಜಯ್ ಹಜಾರೆ ಟ್ರೋಫಿಗೆ ಲಭ್ಯರಿರುತ್ತಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಕೊಹ್ಲಿ ಪ್ರಸ್ತುತ ಲಂಡನ್‌ನಲ್ಲಿದ್ದಾರೆ. ಈ ತಿಂಗಳ ಕೊನೆಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗಾಗಿ ಅವರು ತವರಿಗೆ ಮರಳಲಿದ್ದಾರೆ. ರೋಹಿತ್ ದೇಶಿಯ ಟೂರ್ನಿಯಲ್ಲಿ ಭಾಗಿಯಾಗುವುದು ಬಹುತೇಕ ಖಚಿತವಾಗಿದೆ. ಆದರೆ, ಕೊಹ್ಲಿ ನಿರ್ಧಾರ ಮಾತ್ರ ಇನ್ನೂ ನಿಗೂಢವಾಗಿಯೇ ಉಳಿದಿದೆ. ದೇಶಿ ಟೂರ್ನಿಯಲ್ಲಿ ಭಾಗಿಯಾಗದಿದ್ದರೆ ವಿಶ್ವಕಪ್​ ತಂಡಕ್ಕೆ ಆಯ್ಕೆಯಾಗುವುದು ಕೊಂಚ ಕಷ್ಟವಾಗಲಿದೆ.

ಈಗಾಗಲೇ ಟೆಸ್ಟ್ ಮತ್ತು ಏಕದಿನ ಪಂದ್ಯಗಳಿಂದ ನಿವೃತ್ತಿ ಘೋಷಿಸಿರುವ ರೋಹಿತ್ ಮತ್ತು ಕೊಹ್ಲಿ, ಪ್ರಸ್ತುತ ಏಕದಿನ ಪಂದ್ಯಗಳನ್ನು ಮಾತ್ರ ಆಡುತ್ತಿದ್ದಾರೆ. ಈ ಇಬ್ಬರೂ ದಿಗ್ಗಜ ಕ್ರಿಕೆಟಿಗರು ಕ್ರಮವಾಗಿ ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ವಿರುದ್ಧದ ಮೂರು ಏಕದಿನ ಸರಣಿಗಳಲ್ಲಿ ಆಡಲಿದ್ದಾರೆ. ಇದಾದ ನಂತರ, ಮುಂದಿನ ವರ್ಷ ಜೂನ್​ವರೆಗೆ ಭಾರತಕ್ಕೆ ಯಾವುದೇ ಏಕದಿನ ಸರಣಿ ಇರುವುದಿಲ್ಲ. ಈ ಸಮಯದಲ್ಲಿ ರೋ-ಕೊ ಜೋಡಿ, ಫಿಟ್ನೆಸ್ ಕಳೆದುಕೊಳ್ಳುವುದನ್ನು ತಪ್ಪಿಸಲು ದೇಶೀಯ ಕ್ರಿಕೆಟ್ ಆಡಬೇಕೆಂದು ಬಿಸಿಸಿಐ ಸೂಚಿಸಿದೆ.

ವಿಜಯ್ ಹಜಾರೆ ಟ್ರೋಫಿ, ಡಿಸೆಂಬರ್ 24 ರಿಂದ ಆರಂಭವಾಗಲಿದೆ. ರೋಹಿತ್ ಶರ್ಮ ಕೊನೆಯ ಬಾರಿಗೆ 2018 ರಲ್ಲಿ ವಿಜಯ್ ಹಜಾರೆ ಟ್ರೋಫಿಯಲ್ಲಿ ಆಡಿದ್ದರು. ಈ ಟೂರ್ನಿಯಲ್ಲಿ ಮುಂಬೈ ಪರ ಎರಡು ಪಂದ್ಯಗಳನ್ನು ಆಡಿದ್ದ ಹಿಟ್‌ಮ್ಯಾನ್ 50 ರನ್ ಗಳಿಸಿದ್ದರು. ಮತ್ತೊಂದೆಡೆ, ಕೊಹ್ಲಿ ಕೊನೆಯ ಬಾರಿಗೆ 2010 ರಲ್ಲಿ ಈ ದೇಶೀಯ ಏಕದಿನ ಟೂರ್ನಿಯಲ್ಲಿ ದೆಹಲಿ ಪರ ಆಡಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net