ನೀವು ಈ ರೀತಿ ಸೇಬು ತಿನ್ನುತ್ತಿದ್ದರೆ ಇಂದೇ ಬದಲಾಯಿಸಿಕೊಳ್ಳಿ: ಆರೋಗ್ಯ ತಜ್ಞರ ಮಹತ್ವದ ಸಲಹೆ ಇಲ್ಲಿದೆ… Apples

Apples
Published on

Apples : ಸೇಬು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು ಎಂಬುದು ಎಲ್ಲರಿಗೂ ಗೊತ್ತಿದೆ. ದಿನಕ್ಕೊಂದು ಸೇಬು ತಿನ್ನುವುದರಿಂದ ವೈದ್ಯರನ್ನು ದೂರವಿಡಬಹುದು ಎಂದೂ ಹೇಳಲಾಗುತ್ತದೆ. ಸೇಬುಗಳು ಪೌಷ್ಟಿಕಾಂಶದ ಕೇಂದ್ರವಾಗಿದ್ದು, ಕಡಿಮೆ ಕ್ಯಾಲೋರಿ ಮತ್ತು ಪೋಷಕಾಂಶಗಳಿಂದ ತುಂಬಿರುತ್ತವೆ.

ಅಂದಹಾಗೆ, ಸೇಬಿನಲ್ಲಿ ವಿಟಮಿನ್ ಸಿ, ವಿಟಮಿನ್ ಇ ಮತ್ತು ವಿಟಮಿನ್​ ಬಿ6, ಥೈಯಾಮಿನ್, ರೈಬೋಫ್ಲಾವಿನ್, ನಿಯಾಸಿನ್​, ಪೈರಿಡಾಕ್ಸಿನ್ ಮತ್ತು ಫೋಲೆಟ್​ ವಿಟಮಿನ್​ಗಳಿವೆ. ಖನಿಜಗಳ ವಿಚಾರಕ್ಕೆ ಬರುವುದಾದರೆ, ಕ್ಯಾಲ್ಸಿಯಂ, ಪೊಟ್ಯಾಶಿಯಂ ಮತ್ತು ಫಾಸ್ಫರಸ್​ ಸಮೃದ್ಧವಾಗಿದೆ. ಇದಿಷ್ಟೇ ಅಲ್ಲದೆ, ಸಿಟ್ರಿಕ್, ಮಾಲಿಕ್​ ಹಾಗೂ ಟಾರ್ಟರಿಕ್​ ಆ್ಯಸಿಡ್​ ಹೊಂದಿದೆ. ಸತು, ಕಬ್ಬಿಣ ಮತ್ತು ಮ್ಯಾಂಗನೀಸ್​ ಅಂಶಗಳನ್ನು ಹೊಂದಿದೆ. ಪ್ರಮುಖವಾಗಿ ಸೇಬಿನಲ್ಲಿ ಫೈಬರ್ ಅಂಶ ಹೇರಳವಾಗಿದೆ.

ಸೇಬುಗಳಲ್ಲಿರುವ ಪೊಟ್ಯಾಸಿಯಮ್ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಫೈಬರ್ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ಹೃದಯದ ಆರೋಗ್ಯಕ್ಕೆ ಪ್ರಯೋಜನವನ್ನು ನೀಡುತ್ತದೆ. ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಈ ಸೇಬಿನ ವಿಚಾರದಲ್ಲಿ ಜನ ಸಾಮಾನ್ಯರಲ್ಲಿ ಇಂದಿಗೂ ಒಂದು ಪ್ರಶ್ನೆ ಆಗಾಗ ಕಾಡುತ್ತಲೇ ಇರುತ್ತದೆ. ಅದೇನೆಂದರೆ, ಸೇಬನ್ನು ಸಿಪ್ಪೆ ಸಹಿತ ತಿನ್ನಬೇಕಾ? ಅಥವಾ ಸಿಪ್ಪೆ ಬಿಡಿಸಿಯೇ ತಿನ್ನಬೇಕಾ? ಅನ್ನೋದು.

ಕೆಲವರು ಸಿಪ್ಪೆ ಬಿಡಿಸಿ ತಿನ್ನಿ ಎಂದು ಹೇಳುತ್ತಾರೆ. ಇನ್ನು ಕೆಲವರು ಸಿಪ್ಪೆ ಬಿಡಿಸದೇ ತಿಂದರೆ ಒಳ್ಳೆಯದು ಎನ್ನುತ್ತಾರೆ. ಹೀಗಾಗಿ ಜನರಲ್ಲಿ ಯಾವು ಸರಿ ಎಂಬ ಗೊಂದಲ ಹಾಗೇ ಮುಂದುವರಿದಿದೆ. ಕೆಲವರು ಸಿಪ್ಪೆಯನ್ನು ತೆಗೆದು ತಿಂದರೆ, ಇನ್ನು ಕೆಲವರು ಸಿಪ್ಪೆಯನ್ನು ಸುಲಿಯದೇ ತಿನ್ನುತ್ತಾರೆ. ಹಾಗಾದರೆ, ಸರಿಯಾದ ವಿಧಾನ ಯಾವುದು? ಈ ಪ್ರಶ್ನೆಗೆ ಬಹುತೇಕ ತಜ್ಞರು ನೀಡಿರುವ ಉತ್ತರ ಸಿಪ್ಪೆಯನ್ನು ತೆಗೆದು ತಿನ್ನುವುದು ಉತ್ತಮ ಅನ್ನೋದು.

ಸಿಪ್ಪೆಯು ಒಂದು ರಕ್ಷಣಾತ್ಮಕ ಪದರ. ಇದು ಹಾನಿಕಾರಕ ಅಂಶಗಳು, ಹಣ್ಣಿನ ಅಥವಾ ಬೀಜಗಳ ಒಳಭಾಗ ತಲುಪುವುದನ್ನು ತಡೆಯುತ್ತದೆ. ಸೇಬಿನ ಸಿಪ್ಪೆಯಲ್ಲಿ ಸಾಕಷ್ಟು ಪೋಷಕಾಂಶಗಳಿವೆ ಎಂದು ಕೇಲವರು ಹೇಳುತ್ತಾರೆ. ಹಾಗಾದರೆ, ಮಾವು ಅಥವಾ ಬಾಳೆಹಣ್ಣನ್ನು ಕೂಡ ಸಿಪ್ಪೆ ಸುಲಿದ ನಂತರ ತಿನ್ನುವುದು ಉತ್ತಮ ಎಂದು ಏಕೆ ಹೇಳುವುದಿಲ್ಲ ಎಂಬ ಪ್ರಶ್ನೆಯೂ ಇಲ್ಲಿ ಮೂಡುತ್ತದೆ.

ಅಂದಹಾಗೆ, ಸೇಬಿನ ಸಿಪ್ಪೆಯು ಆರೋಗ್ಯ ಪ್ರಯೋಜನಗಳನ್ನು ಹೊಂದಿದ್ದರು ಕೂಡ ಸೇಬುಗಳು ಕೀಟನಾಶಕಗಳು, ಮೇಣ ಅಥವಾ ವ್ಯಾಕ್ಸ್​ ಮತ್ತು ಕೆಮಿಕಲ್​ ವಾಶಿಂಗ್​ ಪ್ರಕ್ರಿಯೆಗೆ ಒಳಗಾಗುತ್ತವೆ. ಆದ್ದರಿಂದ, ಸಿಪ್ಪೆಯೊಂದಿಗೆ ಸೇಬುಗಳನ್ನು ತಿನ್ನುವುದರಿಂದ ಅವು ದೇಹವನ್ನು ಪ್ರವೇಶಿಸಬಹುದು. ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಅದರಲ್ಲೂ ಜೀರ್ಣಕಾರಿ ಸಮಸ್ಯೆಗಳಿರುವ ಜನರು ಸೇಬಿನ ಸಿಪ್ಪೆ ಸುಲಿದು ತಿನ್ನುವುದು ಉತ್ತಮ ಎಂದು ತಜ್ಞರು ಹೇಳುತ್ತಾರೆ.

ಇಲ್ಲಿ ಗಮನಿಸಬೇಕಾದ ಮುಖ್ಯ ಸಂಗತಿ ಏನೆಂದರೆ, ಸಿಪ್ಪೆ ತೆಗೆದರೂ ಸಹ, ಸೇಬಿನ ಪೌಷ್ಟಿಕಾಂಶದ ಪ್ರಯೋಜನಗಳು ಬದಲಾಗುವುದಿಲ್ಲ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net