

ವಿಜಯವಾಣಿ ಸುದ್ದಿಜಾಲ ಬೆಂಗಳೂರು:
ಅಶ್ವಿನಿ ಪುನೀತ್ ರಾಜಕುಮಾರ್ ನಿರ್ಮಾಣದ, ಸಿಂಧು ಶ್ರೀನಿವಾಸಮೂರ್ತಿ ಚೊಚ್ಚಲ ಬಾರಿಗೆ ನಿರ್ದೇಶಿಸಿರುವ ಚಿತ್ರ 'ಆಚಾರ್ & ಕೋ'. ಕಳೆದ ಜು. 28ರಂದು ರಾಜ್ಯಾದ್ಯಂತ ರಿಲೀಸ್ ಸಿನಿಮಾ ರಿಲೀಸ್ ಆಗಿತ್ತು. ಇದೀಗ ಚಿತ್ರ 25 ದಿನಗಳನ್ನು ಪೂರೈಸಿದ್ದು, ಅದರ ನಡುವೆಯೇ ಒಟಿಟಿಯಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ.
ಹೌದು, 'ಆಚಾರ್ & ಕೋ' ನಾಳೆ (ಆ.23) ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ರಿಲೀಸ್ ಆಗಲಿದೆ. ಸಿಂಧು ಶ್ರೀನಿವಾಸಮೂರ್ತಿ ನಿರ್ದೇಶನದ ಜತೆ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ಅನಿರುದ್ಧ್ ಆಚಾರ್ಯ, ಹರ್ಷಿಲ್ ಕೌಶಿಕ್, ಸುಧಾಲ ಬೆಳವಾಡಿ, ಅಶೋಕ್ ಪ್ರಮುಖ ತಾರಾಗಣದಲ್ಲಿ ನಟಿಸಿದ್ದಾರೆ.
ಈ ಚಿತ್ರದ ಮೂಲಕ ಸಿಂಧು 1960ರ ದಶಕದ ಬೆಂಗಳೂರನ್ನು ಮತ್ತೆ ಅನಾವರಣಗೊಳಿಸಿದ್ದಾರೆ. ಸಿವಿಲ್ ಇಂಜಿನಿಯರ್ ಮಧುಸೂಧನ್ ಆಚಾರ್ ಮತ್ತು ಅವರ ಪತ್ನಿ ಸಾವಿತ್ರಿ ಅವರ ಸಾಂಪ್ರದಾಯಿಕ ಕುಟುಂಬ ಮತ್ತು ಅವರ ಪರಂಪರೆಯನ್ನು ಎತ್ತಿಹಿಡಿಯುವಾಗ ಆಧುನೀಕರಣದೊಂದಿಗೆ ಸೆಣೆಸಾಡುವ ಪ್ರಸಂಗದ ಸುತ್ತ 'ಆಚಾರ್ & ಕೋ' ಕಥೆ ಸುತ್ತುತ್ತದೆ. ಮಹಿಳಾ ಸಬಲೀಕರಣ, ಸ್ವಾವಲಂಬನೆ, ಮತ್ತು ಕೌಟುಂಬಿಕ ಬಂಧಗಳನ್ನು ಮೌಲ್ಯೀಕರಿಸುವ ವಿಷಯಗಳ ಮೇಲೆ ಸಿಂಧು ಈ ಕಥೆಯಲ್ಲಿ ಬೆಳಕು ಚೆಲ್ಲಿದ್ದಾರೆ.