

ವಿಜಯವಾಣಿ ಸುದ್ದಿಜಾಲ ಬೆಂಗಳೂರು
ನಿಖಿಲ್ ಕುಮಾರಸ್ವಾಮಿ ಹೊಸ ಸಿನಿಮಾ ನಾಳೆ ಘೋಷಣೆಯಾಗಲಿದೆ. 2021ರಲ್ಲಿ ಬಿಡುಗಡೆಯಾದ "ರೈಡರ್' ಬಳಿಕ ನಿಖಿಲ್ ಮತ್ತೆ ತೆರೆಯ ಮೇಲೆ ಕಾಣಿಸಿಕೊಂಡಿಲ್ಲ. ಕೆವಿಎನ್ ಪ್ರೊಡಕ್ಷನ್ಸ್ನಲ್ಲಿ, ಮಂಜು ಅಥರ್ವ ನಿರ್ದೇಶನದಲ್ಲಿ "ಯದುವೀರ' ಸಿನಿಮಾ ಪ್ರಾರಂಭವಾಯಿತಾದರೂ, ಅದನ್ನು ಸದ್ಯಕ್ಕೆ ಮುಂದೂಡಲಾಗಿದೆ. ಜತೆಗೆ ಕಳೆದ ಒಂದು ವರ್ಷದಿಂದ ನಿಖಿಲ್ ವಿಧಾನಸಭಾ ಚುನಾವಣೆಯಲ್ಲಿ ಬಿಜಿಯಿದ್ದ ಕಾರಣ ಸಿನಿಮಾಗಳಿಂದ ದೂರ ಉಳಿದಿದ್ದರು.
ಚುನಾವಣೆ ಮುಗಿದ ಬಳಿಕ ಬ್ರೇಕ್ ಪಡೆದು ಕುಟುಂಬ ಸಮೇತ ಐಸ್ಲ್ಯಾಂಡ್, ಫಿನ್ಲ್ಯಾಂಡ್ ಸೇರಿ ಯೂರೋಪ್ ಪ್ರವಾಸಕ್ಕೆ ತೆರಳಿದ್ದರು. ಅಲ್ಲಿಂದ ವಾಪಸ್ಸಾದ ಬಳಿಕ ನಿಖಿಲ್ ಇದೀಗ ಮತ್ತೆ ಸಿನಿಮಾದತ್ತ ಮುಖ ಮಾಡಿದ್ದಾರೆ. ಈ ವರ್ಷದಂತ್ಯಕ್ಕೆ ಚಿತ್ರೀಕರಣ ಪೂರ್ಣಗೊಳಿಸಿ, ಮುಂದಿನ ವರ್ಷ ಮತ್ತೆ ಲೋಕಸಭಾ ಚುನಾವಣೆಯತ್ತ ಗಮನ ಹರಿಸುವ ಆಲೋಚನೆ ನಿಖಿಲ್ ಕುಮಾರಸ್ವಾಮಿ ಅವರದು ಎನ್ನಲಾಗಿದೆ.
ತಮಿಳಿನ ಖ್ಯಾತ ನಿರ್ದೇಶಕರೊಬ್ಬರು ಈ ಸಿನಿಮಾ ನಿರ್ದೇಶಿಸಲಿದ್ದಾರೆ ಎನ್ನಲಾಗಿದೆ. ಕಾಲಿವುಡ್ ಮೂಲದ ಲೈಕಾ ಪ್ರೊಡಕ್ಷನ್ಸ್ ಸಂಸ್ಥೆ ಸಿನಿಮಾ ನಿರ್ಮಿಸಲಿದ್ದು, ನಿಖಿಲ್ ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿ ನೀಡಲಿದೆ. ತಮಿಳಿನ "ಕತ್ತಿ', "2.0', "ಕಾಪ್ಪನ್', "ವಡಾ ಚೆನ್ನೈ', "ದರ್ಬಾರ್', "ಪೊನ್ನಿಯಿನ್ ಸೆಲ್ವನ್' ಸರಣಿ ಹಾಗೂ ತೆಲುಗಿನಲ್ಲಿ "ಕೈದಿ ನಂ. 150', ಹಿಂದಿಯಲ್ಲಿ "ರಾಮ್ಸೇತು', "ಗುಡ್ ಲಕ್ ಜೆರ್ರಿ' ಸೇರಿ ಕಳೆದ 10 ವರ್ಷಗಳಲ್ಲಿ 25ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ಮಿಸಿರುವ ಖ್ಯಾತಿ ಲೈಕಾ ಪ್ರೊಡಕ್ಷನ್ಸ್ಗೆ ಸಲ್ಲುತ್ತದೆ.
ಜತೆಗೆ "ಚಂದ್ರಮುಖಿ 2', "ಇಂಡಿಯನ್ 2', "ಲಾಲ್ ಸಲಾಮ್' ಸೇರಿ ಐದು ಚಿತ್ರಗಳು ನಿರ್ಮಾಣ ಹಂತದಲ್ಲಿವೆ. ಅವುಗಳ ಜತೆಗೆ ಇದೀಗ ಲೈಕಾ ನಿಖಿಲ್ ಐದನೇ ಸಿನಿಮಾ ನಿರ್ಮಿಸಲು ಮುಂದಾಗಿದೆ. ಬಹುಭಾಷೆಗಳಲ್ಲಿ, ದೊಡ್ಡ ಬಜೆಟ್ನಲ್ಲಿ, ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ಮೂಡಿಬರಲಿದೆ ಎನ್ನಲಾಗಿದೆ.