

ಬೆಂಗಳೂರು: ಈಗಾಗಲೇ ಬಹುತೇಕ ಸಿನಿಮಾ ಕೆಲಸಗಳನ್ನು ಮುಗಿಸಿಕೊಂಡಿರುವ 777 ಚಾರ್ಲಿ ತಂಡ ಇದೀಗ ಸಿನಿಮಾಭಿಮಾನಿಗಳಿಗೆ ವಿಶೇಷ ಉಡುಗೊರೆ ಕೊಡಲು ನಿರ್ಧರಿಸಿದೆ. ಅದರಂತೆ ನ. 6ಕ್ಕೆ ಚಿತ್ರತಂಡ ದೊಡ್ಡ ಅನೌನ್ಸ್ಮೆಂಟ್ವೊಂದನ್ನು ಮಾಡಲಿದೆ.
ಈ ವಿಚಾರವನ್ನು ಚಿತ್ರದ ನಾಯಕ ರಕ್ಷಿತ್ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದು, ಶುಕ್ರವಾರ ಬೆಳಗ್ಗೆ 7.30ಕ್ಕೆ ನಿಮಗೆಲ್ಲ ಸರ್ಪ್ರೈಸ್ ಕಾದಿದೆ ಎಂದಿದ್ದಾರೆ.
ಪರಮ್ವಾ ಸ್ಟುಡಿಯೋಸ್ ಮತ್ತು ಪುಷ್ಕರ್ ಫಿಲಂಸ್ ಬ್ಯಾನರ್ನಲ್ಲಿ ಸಿದ್ಧವಾಗಿರುವ 777 ಚಾರ್ಲಿ ಚಿತ್ರವನ್ನು ರಕ್ಷಿತ್ ಶೆಟ್ಟಿ ಮತ್ತು ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣ ಮಾಡಿದ್ದಾರೆ. ನಿರ್ದೇಶಕ ಕಿರಣ್ ರಾಜ್ ಆ್ಯಕ್ಷನ್ ಕಟ್ ಹೇಳಿದ್ದು, ಚಿತ್ರದ ಶೇ. 90 ಭಾಗದ ಶೂಟಿಂಗ್ ಮುಗಿದಿದೆ.
ಈಗಾಗಲೇ ಲುಕ್ಗಳ ಮೂಲಕವೇ ಪ್ರೇಕ್ಷಕರೆದುರು ಬಂದಿದ್ದ ತಂಡ, ಈ ಬಾರಿ ಟೀಸರ್ ಅಥವಾ ಹಾಡಿನ ಮೂಲಕ ಆಗಮಿಸಲಿದೆ ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಆ ಎಲ್ಲ ಕೌತುಕಕ್ಕೆ ಶುಕ್ರವಾರ ಬೆಳಗ್ಗೆ 7.30ಕ್ಕೆ ಗೊತ್ತಾಗಲಿದೆ.