

ಮುಂಬೈ: ಲಾಕ್ಡೌನ್ ಸಡಿಲಿಕೆ ಆಗುತ್ತಿದ್ದಂತೆ ವಿದೇಶಕ್ಕೆ ತೆರಳಿ ಬೆಲ್ಬಾಟಂ ಸಿನಿಮಾ ಶೂಟಿಂಗ್ ಮುಗಿಸಿದ ಬಾಲಿವುಡ್ ನಟ ಅಕ್ಷಯ್ ಕುಮಾರ್, ಇನ್ನೇನು ಶೀಘ್ರದಲ್ಲಿ ಓಟಿಟಿಯಲ್ಲಿ ಲಕ್ಷ್ಮೀ ಬಾಂಬ್ ಮೂಲಕ ಎಂಟ್ರಿಕೊಡಲಿದ್ದಾರೆ. ಈಗಾಗಲೇ ಆ ಚಿತ್ರದ ಪ್ರಚಾರ ಕೆಲಸದಲ್ಲಿಯೂ ಅಕ್ಷಯ್ ನಿರತರಾಗಿದ್ದಾರೆ. ಅದು ಮುಗಿಯುತ್ತಿದ್ದಂತೆ ಮತ್ತೆರಡು ಸಿನಿಮಾ ಶೂಟಿಂಗ್ನಲ್ಲಿ ಅಕ್ಷಯ್ ಭಾಗವಹಿಸಲಿದ್ದಾರೆ.
ಬಚ್ಚನ್ ಪಾಂಡೆ ಮತ್ತು ಪೃಥ್ವಿರಾಜ್ ಚಿತ್ರದ ಚಿತ್ರೀಕರಣ ಪೂರ್ವ ಕೆಲಸಗಳು ಮುಕ್ತಾಯವಾಗಿವೆ. ಇನ್ನೇನಿದ್ದರೂ, ಶೂಟಿಂಗ್ಗೆ ತೆರಳುವುದಕ್ಕೆ ಎರಡು ತಂಡಗಳು ಸಿದ್ಧತೆಯಲ್ಲಿ ತೊಡಗಿಸಿಕೊಂಡಿವೆ. ಈ ಎರಡು ಸಿನಿಮಾಗಳ ಪೈಕಿ ಡಿಸೆಂಬರ್ನಲ್ಲಿ ಐತಿಹಾಸಿಕ ಪೃಥ್ವಿರಾಜ್ ಚಿತ್ರದ ಶೂಟಿಂಗ್ನಲ್ಲಿ ಅಕ್ಷಯ್ ಭಾಗವಹಿಸಲಿದ್ದಾರೆ. ಅದಾದ ಬಳಿಕ ಜನವರಿಯಲ್ಲಿ ಬಚ್ಚನ್ ಪಾಂಡೆ ಅವತಾರ ತಾಳಲಿದ್ದಾರೆ.
ಪೃಥ್ವಿರಾಜ್ ಸಿನಿಮಾದ ಶೂಟಿಂಗ್ ಸಲುವಾಗಿ ಮುಂಬೈನಲ್ಲಿ ಬೃಹತ್ ಸೆಟ್ ನಿರ್ಮಾಣ ಕಾರ್ಯ ಶುರುವಾಗಿದ್ದು, ಬಹುತೇಕ ಕೊನೇ ಹಂತದಲ್ಲಿದೆ. ಈಗಾಗಲೇ ಒಂದಷ್ಟು ಭಾಗದ ಚಿತ್ರೀಕರಣ ಮುಗಿದಿರುವುದಿರಿಂದ ಬಾಕಿ ಕೆಲಸಗಳನ್ನು ಮುಗಿಸಿಕೊಳ್ಳಲಿದೆ ತಂಡ. ಇನ್ನು ಜನವರಿಯಲ್ಲಿ ಪರ್ಹಾದ್ ಸಮ್ಜಿ ನಿರ್ದೇಶನದ , ಸಾಜಿದ್ ನಾಡಿಯಾಡ್ವಾಲಾ ನಿರ್ಮಾಣದ ಬಚ್ಚನ್ ಪಾಂಡೆ ಶುರುವಾಗಲಿದೆ. ಇಲ್ಲಿ ಅಕ್ಷಯ್ಗೆ ಕೃತಿ ಸನೋನ್ ನಾಯಕಿ. (ಏಜೆನ್ಸೀಸ್)