

ಬೆಂಗಳೂರು: ಡಿಸೆಂಬರ್ ಮೊದಲ ವಾರ ಏಳು ಕನ್ನಡ ಚಿತ್ರಗಳು ಬಿಡುಗಡೆಯಾಗಿದ್ದವು. ಎರಡನೆಯ ವಾರ ಬರೋಬ್ಬರಿ 10 ಚಿತ್ರಗಳು ಬಿಡುಗಡೆಯಾಗಿದ್ದವು. ಈಗ ಇನ್ನೊಂದು ಶುಕ್ರವಾರ ಎದುರಾಗಿದ್ದು, ಈ ವಾರ ಮತ್ತೆ ಎಂಟು ಕನ್ನಡ ಚಿತ್ರಗಳು ಬಿಡುಗಡೆಯಾಗುವುದಕ್ಕೆ ಸಜ್ಜಾಗಿವೆ.
ಹೌದು, ಈ ವಾರ ಮತ್ತೆ ಎಂಟು ಚಿತ್ರಗಳು ಬಿಡುಗಡೆಯಾಗುತ್ತಿವೆ. ವಿನಯ್ ರಾಜಕುಮಾರ್ ಅಭಿನಯದ '10', ಸಾಯಿಕುಮಾರ್ ಅಭಿನಯದ 'ರಾಕ್ಷರು' ಚಿತ್ರಗಳಲ್ಲದೆ, 'ಟೆಂಪರ್', 'ನೇಗಿಲ ಒಡೆಯ', 'ಯೂ ಟರ್ನ್ 2', 'ಶಂಭೋ ಶಿವ ಶಂಕರ', 'ಲಿಪ್ಸ್ಟಿಕ್ ಮರ್ಡರ್' ಮತ್ತು 'ನಿಂಗ' ಚಿತ್ರಗಳು ಸೇರಿವೆ.
ಈ ಪೈಕಿ '10' ಮತ್ತು 'ರಾಕ್ಷಸರು' ಚಿತ್ರಗಳನ್ನು ಬಿಟ್ಟರೆ, ಮಿಕ್ಕಂತೆ ಎಲ್ಲ ಚಿತ್ರಗಳೂ ಹೊಸಬರ ಚಿತ್ರಗಳೇ ಎಂಬುದು ವಿಶೇಷ. ಇದೆಲ್ಲದರ ಜತೆಗೆ ಜೇಮ್ಸ್ ಕ್ಯಾಮರಾನ್ ನಿರ್ದೇಶನದ ಬಹುನಿರೀಕ್ಷಿತ ಹಾಲಿವುಡ್ ಚಿತ್ರ 'ಅವತಾರ್ 2' ಬಿಡುಗಡಯಾಗುತ್ತಿದೆ. ಇದೊಂದೇ ಚಿತ್ರವು ರಾಜ್ಯಾದ್ಯಾಂತ 100ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ.
ಡಿಸೆಂಬರ್ನ ಮೊದಲ ಮೂರು ವಾರಗಳಲ್ಲಿ ಬಿಡುಗಡೆಯಾಗಿರುವ ಚಿತ್ರಗಳನ್ನು ಒಟ್ಟುಗೂಡಿಸಿದರೆ 25 ಚಿತ್ರಗಳಾಗುತ್ತವೆ. ಈಗಾಗಲೇ ಈ ವರ್ಷ ಬಿಡುಗಡೆಯಾಗಿರುವ ಕನ್ನಡ ಚಿತ್ರಗಳು 190 ಪ್ಲಸ್ ಆಗಿವೆ. ಇದರ ಜತೆಗೆ ಐದಾರು ತುಳು ಚಿತ್ರಗಳು ಬಿಡುಗಡೆಯಾಗಿರುವ ಸುದ್ದಿ ಇದೆ. ಇವೆಲ್ಲವನ್ನೂ ಸೇರಿಸಿದರೆ, 200ರ ಆಸುಪಾಸಿನಲ್ಲಿದೆ ಕನ್ನಡ ಚಿತ್ರರಂಗವಿದೆ. ವರ್ಷ ಮುಗಿಯುವುದಕ್ಕೆ ಇನ್ನೆರೆಡು ವಾರಗಳಿದ್ದು, ಸಂಖ್ಯೆ 200 ದಾಟುವುದು ನಿಶ್ಚಿತ.