

ಮುಂಬೈ: ಶಾರುಖ್ ಖಾನ್ ಅಭಿನಯದ 'ಪಠಾಣ್' ಚಿತ್ರವು ಜನವರಿಯಲ್ಲಿ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಈ ಮಧ್ಯೆ, ಚಿತ್ರದ ಹಾಡೊಂದರಲ್ಲಿ ನಟಿ ದೀಪಿಕಾ ಪಡುಕೋಣೆ ಕೇಸರಿ ಬಿಕಿನಿ ತೊಟ್ಟಿದ್ದು ವಿವಾದಕ್ಕೆ ಸಾಕಷ್ಟು ಕಾರಣವಾಗಿದೆ. ಈ ಹಾಡಿಗೆ ಬಹುಭಾಷಾ ನಟ ಪ್ರಕಾಶ್ ರೈ ಬೆಂಬಲ ಸೂಚಿಸುವುದರ ಜತೆಗೆ, ಇದನ್ನೆಲ್ಲ ಎಷ್ಟು ದಿನ ಸಹಿಸಿಕೊಳ್ಳಬೇಕು ಎಂದು ಪ್ರಶ್ನಿಸಿದ್ದಾರೆ.
'ಪಠಾಣ್' ಚಿತ್ರದ 'ಬೇಷರಮ್ ರಂಗ್' ಎಂಬ ಹಾಡು ಬಿಡುಗಡೆಯಾಗಿದ್ದು ಸಾಕಷ್ಟು ವೈರಲ್ ಆಗಿದೆ. ಈ ಹಾಡಿನಲ್ಲಿ ಕೇಸರಿ ಬಿಕಿನಿ ತೊಟ್ಟು ದೀಪಿಕಾ ಪಡುಕೋಣೆ ಮೈಮಾಟ ತೋರಿಸಿದ್ದಾರೆ. ಈ ಹಾಡು ಅಸಭ್ಯ ಮತ್ತು ಅಶ್ಲೀಲವಾಗಿದೆ ಎನ್ನುಚವ ಟೀಕೆ ವ್ಯಕ್ತವಾಗಿದೆ. ಈ ಚಿತ್ರವನ್ನು ನಿಷೇಧಿಸಬೇಕು ಎನ್ನುವ ಕೂಗು ಎದ್ದಿದ್ದು, ಟ್ವಿಟರ್ನಲ್ಲಿ ‘Boycott Pathaan’ ಎನ್ನುವ ಅಭಿಯಾನ ಸಹ ಶುರುವಾಗಿದೆ.
ಪ್ರಕಾಶ್ ರೈ ಇದರ ವಿರುದ್ಧ ಸಿಡಿದೆದ್ದಿದ್ದಾರೆ. ಈ ಕುರಿತು ಸರಣಿ ಟ್ವೀಟ್ಗಳನ್ನು ಮಾಡಿರುವ ಅವರು. 'ಈ ಚಿತ್ರವನ್ನು ಮಧ್ಯಪ್ರದೇಶದ ಗೃಹ ಸಚಿವ ಬಿಡುಗಡೆ ಮಾಡಲು ಬಿಡುವುದಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು. ಅವರ ನಿರ್ಧಾರ ಅಸಹ್ಯಕರ. ಇದನ್ನೆಲ್ಲ ಎಷ್ಟು ದಿನ ಸಹಿಸಿಕೊಳ್ಳಬೇಕು' ಎಂದು ಅವರು ಪ್ರಶ್ನಿಸಿದ್ದಾರೆ.
ಈ ಹಾಡಿನ ಕುರಿತು ಆಕ್ಷೇಪ ವ್ಯಕ್ತಪಡಿಸುತ್ತಿರುವವರಿಗೆ ಮತ್ತು ಶಾರೂಖ್ ಖಾನ್ ಅವರ ಪ್ರತಿಕೃತಿಯನ್ನು ದಹಿಸವವರನ್ನು ನಾಚಿಕೆ ಇಲ್ಲದ ಮತಾಂಧರು ಎಂದಿರುವ ಪ್ರಕಾಶ್ ರೈ, 'ಕೇಸರಿ ಬಣ್ಣದವರು ರೇಪಿಸ್ಟ್ಗಳಿಗೆ ಮಾಲೆ ಹಾಕುತ್ತಾರೆ. ದ್ವೇಷದ ಮಾತುಗಳನ್ನಾಡುತ್ತಾರೆ. ಕೇಸರಿ ಬಣ್ಣ ತೊಟ್ಟವರು ಮೈನರ್ಗಳನ್ನು ರೇಪ್ ಮಾಡುತ್ತಾರೆ. ಆದರೆ, ಚಿತ್ರದಲ್ಲಿ ಕೇಸರಿ ಬಟ್ಟೆ ತೊಟ್ಟರೆ ಸಹಿಸುವುದಿಲ್ಲ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.