

ಹರಿಹರ: ತಂದೆಯಿಂದಲೇ ಅಪಹರಣಕ್ಕೀಡಾಗಿ ತಾಯಿಯ ಪ್ರೀತಿಯಿಂದ ದೂರವಿದ್ದ 16 ತಿಂಗಳ ಮಗು ಕೋರ್ಟ್ ಆದೇಶದಂತೆ ಮತ್ತೆ ತಾಯಿಯ ಮಡಿಲು ಸೇರಿದೆ. ಹರಿಹರದ ಮಹಿಳೆಯೊಬ್ಬರು ಉತ್ತರ ಪ್ರದೇಶದ ವ್ಯಕ್ತಿಯ ಜತೆ ವಿವಾಹ ಆಗಿದ್ದರು. ಅವರಿಗೆ ಗಂಡು ಮಗು ಜನಿಸಿತ್ತು. ಜ. 27ರಂದು ಮನೆಯಲ್ಲಿ ಯಾರು ಇಲ್ಲದಿದ್ದಾಗ ಪತಿ ಮಗುವನ್ನು ಅಪಹರಿಸಿ ಲಕ್ನೋ ಸಮೀಪದ ಕಾಕೋರಿಗೆ ಕರೆದೊಯ್ದಿದ್ದ. ಮಗು ಪಡೆಯಲು ಮಹಿಳೆ ಪೊಲೀಸರ ಮೊರೆ ಹೋದರು ಪ್ರಯೋಜನವಾಗಿರಲಿಲ್ಲ. ಈ ಮಧ್ಯೆ ಪತಿ ಮಗುವನ್ನು ತನ್ನ ತಾಯಿಯ ಬಳಿ ಬಿಟ್ಟು, ಸೌದಿ ಅರೇಬಿಯಾಕ್ಕೆ ತೆರಳಿದ್ದ. ನಿಮ್ಮ ತಂದೆಯೊಂದಿಗೆ ಕಾಕೋರಿಗೆ ಹೋಗಿ ವಿವಾಹ ವಿಚ್ಛೇದನ ಪತ್ರಕ್ಕೆ ಸಹಿ ಮಾಡಿದರೆ ಮಾತ್ರ ಮಗು ಸಿಗುತ್ತದೆ ಎಂದು ಪತ್ನಿಗೆ ಫೋನ್ ಮೂಲಕ ತಿಳಿಸಿದ್ದ. ಇದರಿಂದ ವಿಚಲಿತ ಮಹಿಳೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ಪತಿಯಿಂದ ಮಗು ವಾಪಸ್ ಕೊಡಿಸುವಂತೆ ಕೋರಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಜ್ಯೋತಿ ಅಶೋಕ್ ಪತ್ತಾರ್, ಜೂ.24ರಂದು ಏಕಪಕ್ಷೀಯ ಮಧ್ಯಂತರ ಆದೇಶ ನೀಡಿ ಮಗುವನ್ನು ಕೂಡಲೆ ತಾಯಿಗೆ ಹಸ್ತಾಂತರಿಸುವಂತೆ ಪತಿಯ ಕುಟುಂಬಸ್ಥರಿಗೆ ಆದೇಶಿಸಿದ್ದರು. ಮಗು ಕರೆತರಲು ನೆರವಾಗುವಂತೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗೆ ಹಾಗೂ ಪೊಲೀಸರಿಗೆ ಸೂಚಿಸಿದ್ದರು. ಇದೀಗ ಮಗು ತಾಯಿ ಮಡಿಲು ಸೇರಿದೆ.