ತಾಯಿ ಹಾಲಿನ ಬ್ಯಾಂಕ್​ ಸ್ಥಾಪನೆ

human-milk-getty-1133216-1659649266
Published on

ಘೋಷಾ ಹೆರಿಗೆ ಆಸ್ಪತ್ರೆಯಲ್ಲಿ ಇನ್ನೊಂದು ವಾರದಲ್ಲಿ ಕಾರ್ಯಾಚರಣೆ

ಪಂಕಜ ಕೆ.ಎಂ. ಬೆಂಗಳೂರು

‘ಶ್ರೀ ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ’ (ಎಸ್​ಎಬಿವಿಎಂಸಿಆರ್​ಐ) ಅಡಿಯಲ್ಲಿ ಬರುವ ಶಿವಾಜಿನಗರದ ಘೋಷಾ ಹೆರಿಗೆ ಆಸ್ಪತ್ರೆಯಲ್ಲಿ ‘ಸಂಜೀವಿನಿ ಯೋಜನೆ’ಯಡಿ 24 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತ ‘ತಾಯಿ ಹಾಲಿನ ಬ್ಯಾಂಕ್’ ಸ್ಥಾಪಿಸಲಾಗಿದೆ. ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ (ಸಿಎಸ್​ಆರ್) ಅಡಿಯಲ್ಲಿ ಹಲವು ರೋಟರಿ ಕ್ಲಬ್​ಗಳ ಸಹಯೋಗದಲ್ಲಿ ತಾಯಿಹಾಲಿನ ಬ್ಯಾಂಕ್​ಗೆ ಅಗತ್ಯ ಉಪಕರಣಗಳನ್ನು ಒದಗಿಸಲಾಗಿದೆ. ಇನ್ನೊಂದು ವಾರದಲ್ಲಿ ಬ್ಯಾಂಕ್ ಆರಂಭವಾಗಲಿದೆ. ಇದರೊಂದಿಗೆ ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ತಾಯಿ ಹಾಲಿನ 2ನೇ ಬ್ಯಾಂಕ್ ಇದಾಗಿದ್ದು, ವಾಣಿವಿಲಾಸ ಆಸ್ಪತ್ರೆ ರಾಜ್ಯದ ಪ್ರಥಮ ಬ್ಯಾಂಕ್ ಎನಿಸಿದೆ. ಖಾಸಗಿಯಲ್ಲಿ ಈಗಾಗಲೇ ತಾಯಿಯ ಹಾಲಿನ ಬ್ಯಾಂಕ್​ಗಳಿವೆಯಾದರೂ ಬಡಮಕ್ಕಳಿಗೆ ಅದರ ಸೌಲಭ್ಯ ಪಡೆಯಲು ಸಾಧ್ಯವಿಲ್ಲ. ಹಾಗಾಗಿ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ಮನಗಂಡು ರಾಜ್ಯ ಸರ್ಕಾರ 6 ತಿಂಗಳ ಒಳಗಿನ ಮಕ್ಕಳಿಗೆ ಎದೆಹಾಲು ಕೊರತೆ ನೀಗಿಸುವ ನಿಟ್ಟಿನಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಈ ಬ್ಯಾಂಕ್​ಗಳನ್ನು ಸ್ಥಾಪಿಸಿದೆ.

ಯಾವ ಮಕ್ಕಳಿಗೆ ಉಪಯೋಗ?

ಅವಧಿಗೂ ಮುನ್ನ ಜನಿಸಿದ 1,500 ಗ್ರಾಂಗಿಂತ ಕಡಿಮೆ ತೂಕ ಇರುವ ಶಿಶುಗಳಿಗೆ, ಜೀರ್ಣಾಂಗ ವ್ಯೂಹದ ನ್ಯೂನತೆಗಳ ಹಾಗೂ ಇತರೆ ಕಾಯಿಲೆ ಹೊಂದಿರುವ ನವಜಾತ ಶಿಶುಗಳಿಗೆ, ಹುಟ್ಟುತ್ತಲೇ ತಾಯಿಯನ್ನು ಮಗು ಕಳೆದುಕೊಂಡಾಗ, ತಾಯಿ ತೀವ್ರವಾದ ಕಾಯಿಲೆಗಳಿಂದ ಬಳಲುತ್ತಿದ್ದರೆ- ಅಂತಹ ಶಿಶುಗಳಿಗೆ ಈ ಹಾಲಿನ ಉಪಯೋಗವಾಗಲಿದೆ. ಸದ್ಯ ಆಸ್ಪತ್ರೆಯಲ್ಲಿ ನಿತ್ಯ 3-5 ಮಕ್ಕಳಿಗೆ ಇದರ ಅಗತ್ಯವಿದ್ದು, 10-12 ಮಕ್ಕಳು ಇದರ ಉಪಯೋಗ ಪಡೆದುಕೊಳ್ಳಬಹುದು ಎಂದು ವೈದ್ಯರು ತಿಳಿಸಿದ್ದಾರೆ. ನವಜಾತ ಶಿಶುಗಳಿಗೆ ಅಗತ್ಯ ಇರುವ ಹಾಲನ್ನು ಒದಗಿಸುವ ಮೂಲಕ ನವಜಾತ ಶಿಶುಗಳ ಮರಣ ಪ್ರಮಾಣ ಗಣನೀಯವಾಗಿ ತಗ್ಗಿಸಬಹುದಾಗಿದೆ. ಪ್ರಮುಖವಾಗಿ ಬಡ ಮಕ್ಕಳಿಗೆ ಉಚಿತವಾಗಿ ಈ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಬ್ಯಾಂಕ್ ಸ್ಥಾಪನೆಗೆ ಅಗತ್ಯ ಉಪಕರಣಗಳನ್ನು ಒದಗಿಸಲಾಗಿದೆ ಎಂದು ರೋಟರಿ ಕ್ಲಬ್​ಗಳ ಮುಖ್ಯಸ್ಥರು ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ್ಲ ರೋಟರಿ ಕ್ಲಬ್​ಗಳ ಸಹಕಾರಕ್ಕೆ ಆಸ್ಪತ್ರೆಯ ವೈದ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಿಬ್ಬಂದಿಗೆ ತರಬೇತಿ

ತಾಯಿಹಾಲಿನ ಬ್ಯಾಂಕ್ ನಿರ್ವಹಣೆ ಮಾಡುವ ಸಂಬಂಧ ಹಾಲಿನ ಶೇಖರಣೆ, ಅದನ್ನು ಯಾವ ರೀತಿಯಲ್ಲಿ ಸಂಗ್ರಹಣೆ ಮಾಡಬೇಕು. ಯಾವ ಪ್ರಮಾಣದಲ್ಲಿ ಶಿಶುಗಳಿಗೆ ನೀಡಬೇಕು ಇತ್ಯಾದಿ ಕುರಿತು ಅನುಭವ ಪಡೆಯಲು ಘೋಷಾ ಆಸ್ಪತ್ರೆಯ ಮೂವರು ಸಿಬ್ಬಂದಿಯನ್ನು ವಾಣಿವಿಲಾಸ ಆಸ್ಪತ್ರೆಗೆ ತರಬೇತಿಗಾಗಿ ಕಳುಹಿಸಲಾಗಿದೆ. ಅವರು ತರಬೇತಿ ಪಡೆದು ಬಂದಕೂಡಲೇ ಆಸ್ಪತ್ರೆಯಲ್ಲಿನ ಬ್ಯಾಂಕ್ ಕಾರ್ಯನಿರ್ವಹಣೆ ಮಾಡಲಿದೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

ಇನ್ನಷ್ಟು ಸೌಕರ್ಯ

ಘೋಷಾ ಹೆರಿಗೆ ಆಸ್ಪತ್ರೆಯು 110 ಹಾಸಿಗೆಗಳನ್ನು ಹೊಂದಿದ್ದು, 10 ಹಾಸಿಗೆಗಳ ನವಜಾತ ಶಿಶುಗಳ ತುರ್ತು ನಿಗಾ ಘಟಕ (ಎಸ್​ಎನ್​ಸಿಯು) ವ್ಯವಸ್ಥೆ ಇದೆ. ಸುಸಜ್ಜಿತ ವಾರ್ಡ್​ಗಳು, ವಿಶೇಷ ವಾರ್ಡ್​ಗಳು, ತುರ್ತು ನಿಗಾ ಘಟಕಗಳು, ಶಸ್ತ್ರಚಿಕಿತ್ಸಾ ಕೊಠಡಿಗಳೊಂದಿಗೆ ಅಗತ್ಯ ವೈದ್ಯಕೀಯ ಉಪಕರಣಗಳನ್ನು ಹೊಂದಿದೆ. ಹೈ ರಿಸ್ಕ್ ಪ್ರಕರಣಗಳ ನಿರ್ವಹಣೆಗೆ ನಾಲ್ಕು ವೆಂಟಿಲೇಟರ್ ಹಾಸಿಗೆಗಳಿವೆ. ಆಸ್ಪತ್ರೆಗೆ ಅಗತ್ಯವಾದ ವೈದ್ಯಕೀಯ ಉಪಕರಣಗಳು ಸೇರಿ ಸುಸಜ್ಜಿತ ಬೆಡ್ ಅಳವಡಿಸಲಾಗಿದೆ. ಶೀಘ್ರದಲ್ಲೇ ಶಾಸಕರ ಅನುದಾನದಲ್ಲಿ ಆಸ್ಪತ್ರೆಗೆ ಬಣ್ಣ ಬಳಿಯುವ ಹಾಗೂ ಸಂಸದರ ನಿಧಿಯಲ್ಲಿ ರೋಗಿಗಳ ಕುಟುಂಬದವರಿಗೆ ವಿಶ್ರಾಂತಿ ಪಡೆಯಲು ಅಗತ್ಯ ವ್ಯವಸ್ಥೆ ಮಾಡಲಾಗುವುದು ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.

ಬ್ಯಾಂಕ್​ನ ಕಾರ್ಯನಿರ್ವಹಣೆ

ದಾನಿಗಳಿಂದ ತಾಯಿಯ ಹಾಲನ್ನು ಸರಿಯಾದ ರೀತಿಯಲ್ಲಿ ಪಡೆದು ಶೇಖರಿಸಲಾಗುತ್ತದೆ. ಹಾಲನ್ನು ಪಡೆಯುವ ಮುನ್ನ ತಾಯಿಯ ಅನುಮತಿ ಪಡೆಯಬೇಕಾಗುತ್ತದೆ. ಅಲ್ಲದೆ ತಾಯಿಗೆ ಕೆಲ ರಕ್ತ ಪರೀಕ್ಷೆಗಳನ್ನು ನಡೆಸಿ ಹೆಪಟೈಟಿಸ್ ‘ಬಿ’, ‘ಸಿ’, ಎಚ್​ಐವಿ, ಎಚ್​ಟಿಎಲ್​ವಿ-1,2, ಸಿಫಿಲಿಸ್ ಮುಂತಾದ ಸೋಂಕು ಇಲ್ಲದಿರುವುದನ್ನು ಖಚಿತಪಡಿಸಿಕೊಂಡು ನಂತರ ಹಾಲು ಪಡೆಯಲಾಗುತ್ತದೆ. ಹೀಗೆ ಪಡೆದ ತಾಯಿಯ ಹಾಲನ್ನು ವೈಜ್ಞಾನಿಕವಾಗಿ ಶೇಖರಿಸಿ ಅಗತ್ಯ ಇರುವ ಶಿಶುಗಳಿಗೆ ನೀಡಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net