

ಚೆನ್ನೈ: ಯೂಟ್ಯೂಬ್ ಚಾನೆಲ್ ಮೂಲಕ ಮಹಿಳೆಯ ಬಳಿ ಸಾರ್ವಜನಿಕ ಪ್ರದೇಶದಲ್ಲಿ ಸೆಕ್ಸ್ ಹಾಗೂ ಮದ್ಯಪಾನ ಕುರಿತು ಮುಕ್ತವಾಗಿ ಮಾತನಾಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬೆನ್ನಲ್ಲೇ ಯೂಟ್ಯೂಬ್ ಚಾನೆಲ್ ಹಿಂದಿರುವ ವ್ಯಕ್ತಿಗಳನ್ನು0 ಗ್ರೇಟರ್ ಚೆನ್ನೈ ಪೊಲೀಸರು ಬಂಧಿಸಿದ್ದಾರೆ.
"ಚೆನ್ನೈ ಟಾಕ್ಸ್" ಹೆಸರಿನ ಯೂಟ್ಯೂಬ್ ಚಾನೆಲ್ ಸುಮಾರು ಸುಮಾರು 200 ವಿಡಿಯೋಗಳನ್ನು ಹೊಂದಿದ್ದು, ಎಲ್ಲವು ಸಹ ವಾಕ್ಸ್-ಪಾಪ್ ಫಾರ್ಮ್ಯಾಟ್ನಿಂದ ಕೂಡಿದೆ. ವಿವಿಧ ವಿಷಯಗಳ ಮೇಲೆ, ಅನೇಕ ಪುರುಷರು ಮತ್ತು ಮಹಿಳೆಯರು ಮಾತನಾಡುವ ವಿಡಿಯೋವನ್ನು ಎಡಿಟ್ ಮಾಡಿ ಯೂಟ್ಯೂಬ್ನಲ್ಲಿ ಅಪ್ಲೋಡ್ ಮಾಡಲಾಗುತ್ತದೆ. ಅನೇಕ ಮಹಿಳೆಯರು ಮುಕ್ತವಾಗಿ ಸೆಕ್ಸ್, ಮದ್ಯಪಾನ ಮತ್ತು ಸಂಬಂಧದ ಬಗ್ಗೆ ಮಾತನಾಡಿರುವ ವಿಡಿಯೋಗಳು ಸಹ ಇವೆ.
ಚೆನ್ನೈ ಬೆಸಂತ್ ನಗರದ ಬೀಚ್ನಲ್ಲೇ ಬಹುತೇಕ ವಿಡಿಯೋಗಳನ್ನು ಮಾಡಲಾಗಿದೆ ಎಂದು ಶಾಸ್ತ್ರಿ ನಗರ ಪೊಲೀಸರು ತಿಳಿಸಿದ್ದಾರೆ. ಕ್ಯಾಮೆರಾ ಮತ್ತು ಮೈಕ್ರೋಫೋನ್ ಹಿಡಿದುಕೊಂಡು ಬೀಚ್ ಸಮೀಪ ನಿಲ್ಲುವ ಯೂಟ್ಯೂಬರ್ಗಳು, ಬೀಚ್ಗೆ ಆಗಮಿಸುವವರ ಬಳಿ ವಿವಿಧ ವಿಷಯಗಳ ಬಗ್ಗೆ ಮಾತನಾಡಿಸುತ್ತಾರೆ. ಇದೀದ ಸೆಕ್ಸ್ ಬಗ್ಗೆ ಮಾತನಾಡಿರುವ ವಿಡಿಯೋ ತುಂಬಾ ವೈರಲ್ ಆದ ಬೆನ್ನಲ್ಲೇ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಯೂಟ್ಯೂಬ್ ಚಾನೆಲ್ ಮಾಲೀಕ ದಿನೇಶ್ (31)ನನ್ನು ಬಂಧಿಸಿದ್ದಾರೆ. ಅಲ್ಲದೆ, ವಿಡಿಯೋ ಜಾಕಿ ಅಸೆನ್ ಬಾದ್ಷಾ (23) ಮತ್ತು ಕ್ಯಾಮೆರಾಮೆನ್ ಅಜಯ್ ಬಾಬು (24)ರನ್ನು ಕೆಲವರು ನೀಡಿದ ದೂರಿನ ಆಧಾರದ ಮೇಲೆ ಬಂಧಿಸಲಾಗಿದ್ದು, ಸಾರ್ವಜನಿಕ ಅಶ್ಲೀಲತೆ ಮತ್ತು ಲೈಂಗಿಕ ಕಿರುಕುಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಬೀಚ್ನಲ್ಲಿ ವಿಡಿಯೋ ಮಾಡಿ ಜನರಿಗೆ ಮುಜುಗರ ಆಗುವಂತಹ ಪ್ರಶ್ನೆಗಳನ್ನು ಕೇಳುತ್ತಾರೆ ಎಂದು ಮೀನುಗಾರ ಮಹಿಳೆಯೊಬ್ಬಳು ಪೊಲೀಸರಿಗೆ ನೀಡಿದ ಸೂಚನೆ ಮೇರೆಗೆ ಶಾಸ್ತ್ರಿ ನಗರ ಠಾಣೆಯ ಸಬ್ ಇನ್ಸ್ಪೆಕ್ಟರ್ ಮುರುಗನ್ ಮತ್ತು ಇನ್ಸ್ಪೆಕ್ಟರ್ ಷಣ್ಮುಗಸುಂದರಂ ಕಾರ್ಯಾಚರಣೆಗೆ ಇಳಿಯುತ್ತಾರೆ. ಬೀಚ್ ಬಳಿ ಹೋದಾಗ ಇಬ್ಬರು ಯುವಕರು ಕ್ಯಾಮೆರಾ ಮತ್ತು ಮೈಕ್ರೋಫೋನ್ ಹಿಡಿದುಕೊಂಡಿರುವುದನ್ನು ಗಮನಿಸಿದ್ದಾರೆ. ಇಬ್ಬರನ್ನು ಪ್ರಶ್ನಿಸಿದಾಗ ಇದೊಂದು ಫ್ರ್ಯಾಂಕ್ ಶೋ (ತಮಾಷೆಗಾಗಿ ಮಾಡುವ ಕಾರ್ಯಕ್ರಮ) ಎಂದು ಸಬೂಬು ನೀಡಿದ್ದಾರೆ. ಸದ್ಯ ಬಂಧಿತರಾಗಿರುವ ಅವರನ್ನು ವಿಚಾರಣೆ ನಡೆಸಲಾಗುತ್ತಿದೆ.
ಯೂಟ್ಯೂಬರ್ಗಳು ತಮಗೆ ಗೊತ್ತಿರುವವರನ್ನೇ ಬೀಚ್ ಬಳಿ ಕರೆದುಕೊಂಡು ಹೋಗಿ ಮಾತನಾಡಿಸುತ್ತಾರೆ. ಬಳಿಕ ದಾರಿಹೋಕರನ್ನು ತಮ್ಮ ಯೂಟ್ಯೂಬ್ ಚಾನೆಲ್ಗೆ ಬೈಟ್ ನೀಡುವಂತೆ ಮನವಿ ಮಾಡುತ್ತಾರೆ. ಬಳಿಕ ನಿಧಾನವಾಗಿ ಅವರನ್ನು ಉತ್ತೇಜಿಸಿ ವೈಯಕ್ತಿಕ ಜೀವನದ ಬಗ್ಗೆ ಕೇಳುತ್ತಾರೆ. ಹೀಗೆ ಮಾತನಾಡುತ್ತಾ ಸೆಕ್ಸ್ ಲೈಫ್ ಬಗ್ಗೆ ಕೇಳುತ್ತಾರೆ ಎಂದು ಶಾಸ್ತ್ರಿ ನಗರ ಪೊಲೀಸರು ತಿಳಿಸಿದ್ದಾರೆ.
ಅದೇ ರೀತಿ ಇತ್ತೀಚೆಗೆ ವೈರಲ್ ಆದ ವಿಡಿಯೋದಲ್ಲಿ ಮಹಿಳೆ ಬೇಡವೆಂದರು ಮಾತನಾಡುವಂತೆ ಒತ್ತಾಯಿಸಿದ್ದಾರೆ. ಎಲ್ಲಿಯೂ ಬಹಿರಂಗವಾಗುವುದಿಲ್ಲ ಮತ್ತು 1200 ರೂ. ನೀಡುತ್ತೇವೆಂದು ಆಮಿಷವೊಡ್ಡಿ ಮಾತನಾಡಿಸಿದ್ದಾರೆ. ಯಾವಾಗ ವಿಡಿಯೋ ವೈರಲ್ ಆಯ್ತೋ ಮಹಿಳೆಯು ಸಹ ಠಾಣೆಯಲ್ಲಿ ದೂರು ನೀಡಿದ್ದಾರೆ. ಅಲ್ಲದೆ, ವಿಡಿಯೋವನ್ನು ಸ್ಕ್ರಿಪ್ಟ್ನಂತೆ ಮಾಡಲಾಗುತ್ತದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದೀಗ ಬಂಧಿಸಲಾಗಿರುವ ಯೂಟ್ಯೂಬರ್ಗಳ ವಿರುದ್ಧ ಭಾರತೀಯ ದಂಡಸಂಹಿತೆಯ ವಿವಿಧ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಯೂಟ್ಯೂಬರ್ಗಳ ಸಾಧನಗಳನ್ನು ವಶಕ್ಕೆ ಪಡೆಯಲಾಗಿದ್ದು, ಕೆಲವು ಅಶ್ಲೀಲ ವಿಡಿಯೋಗಳನ್ನು ತೆಗೆದುಹಾಕಲು ಸೂಚನೆ ನೀಡಲಾಗಿದೆ. ಅಂದಹಾಗೆ ಒಂದು ವಿಡಿಯೋ ಕೋಟ್ಯಾಂತರ ವೀಕ್ಷಣೆಗಳನ್ನು ಪಡೆದುಕೊಳ್ಳುತ್ತಿದ್ದವು. (ಏಜೆನ್ಸೀಸ್)