

ಮುಂಬೈ: ಮಹಿಳೆಯೊಬ್ಬಳು ಮಾಡಿರುವ ಅತ್ಯಾಚಾರ ಆರೋಪವನ್ನು ತಳ್ಳಿಹಾಕಿರುವ ಮಹಾರಾಷ್ಟ್ರದ ಸಾಮಾಜಿಕ ಮತ್ತು ನ್ಯಾಯ ಸಚಿವ ಧನಂಜಯ್ ಮುಂಡೆ, ಆರೋಪ ಮಾಡಿರುವ ಮಹಿಳೆಯ ಸಹೋದರಿ ಜತೆ 2003ರಿಂದಲೂ ಸಂಬಂಧ ಹೊಂದಿರುವುದಾಗಿ ಮಂಗಳವಾರ ಒಪ್ಪಿಕೊಂಡಿದ್ದಾರೆ.
ಫೇಸ್ಬುಕ್ನಲ್ಲಿ ಬರೆದುಕೊಂಡಿರುವ ಎನ್ಸಿಪಿ ನಾಯಕ ಧನಂಜಯ್, 38 ವರ್ಷದ ಮಹಿಳೆ ಮತ್ತು ಆಕೆಯ ಸಹೋದರಿ ಬ್ಲ್ಯಾಕ್ಮೇಲ್ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ ಮತ್ತು ನನ್ನಿಂದ ಹಣವನ್ನು ಸುಲಿಗೆ ಮಾಡಿದ್ದಾರೆಂದು ಪ್ರತ್ಯಾರೋಪ ಮಾಡಿದ್ದಾರೆ. ತಾನು ಸಹ 2020ರ ನವೆಂಬರ್ನಲ್ಲಿ ಪೊಲೀಸ್ ದೂರು ದಾಖಲಿಸಿರುವುದಾಗಿ ಹೇಳಿದ್ದಾರೆ.
ಮಹಿಳೆಯೊಂದಿಗೆ 2003ರಿಂದಲೂ ಸಂಬಂಧದಲ್ಲಿದ್ದು, ಇಬ್ಬರು ಮಕ್ಕಳನ್ನು ಹೊಂದಿದ್ದೇವೆ. ನಮ್ಮ ಸಂಬಂಧವನ್ನು ಅವರ ಕುಟುಂಬ ಸಹ ಒಪ್ಪಿಕೊಂಡಿದೆ ಎಂದು ತಿಳಿಸಿದ್ದಾರೆ. ಇತ್ತ ಮಹಿಳೆಯೊಂದಿಗೆ ಸಂಬಂಧ ಇರುವುದನ್ನು ಧನಂಜಯ್ ಮುಂಡೆ ಒಪ್ಪಿಕೊಂಡ ಬೆನ್ನಲ್ಲೇ ಮಹಾರಾಷ್ಟ್ರ ಬಿಜೆಪಿ ಮಹಿಳಾ ವಿಭಾಗ ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ಪತ್ರ ಬರೆದು ಸಂಪುಟದಿಂದ ಧನಂಜಯ್ರನ್ನು ತೆಗೆದು ಹಾಕಲು ಒತ್ತಾಯಿಸಿದೆ.
ಘಟನೆಯ ಹಿನ್ನೆಲೆಗೆ ಬರುವುದಾದರೆ, ಜನವರಿ 11ರಂದು ಗಾಯಕಿ ರೇಣು ಶರ್ಮಾ ತನ್ನ ವಕೀಲರೊಂದಿಗೆ ಅಂಧೇರಿಯ ಒಶಿವರಾ ಪೊಲೀಸ್ ಠಾಣೆಗೆ ಆಗಮಿಸಿ ಧನಂಜಯ್ ಮುಂಡೆ ವಿರುದ್ಧ ರೇಪ್ ದೂರು ದಾಖಲಿಸಿದ್ದರು. 1997ರಿಂದಲೂ ನನಗೆ ಧನಂಜಯ್ ಪರಿಚಯವಿದೆ. ಮದುವೆಯಾಗುವುದಾಗಿ ಮತ್ತು ಬಾಲಿವುಡ್ನಲ್ಲಿ ಗಾಯಕಿಯಾಗಲು ಸಹಾಯ ಮಾಡುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ವಂಚಿಸಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಿದ್ದರು.
ಇನ್ನು ರೇಣು ಪರ ವಕೀಲ ರಮೇಶ್ ತ್ರಿಪಾಠಿ ಎಂಬುವರು ಮಾತನಾಡಿ ದೂರು ದಾಖಲಾದ ದಿನದಿಂದ ಈವರೆಗೂ ಎಫ್ಐಆರ್ ದಾಖಲು ಮಾಡಿಲ್ಲ ಎಂದು ಆರೋಪಿಸಿದ್ದಾರೆ.
2008ರಲ್ಲಿ ಮೊದಲ ಬಾರಿಗೆ ಧನಂಜಯ್ ಮುಂಡೆ ರೇಪ್ ಮಾಡಿದ್ದಾರೆ. ಮನೆಯಲ್ಲಿ ರೇಣು ಒಂಟಿಯಾಗಿರುವಾಗ ರೇಪ್ ಮಾಡಿ, ವಿಡಿಯೋ ಮಾಡಿಕೊಂಡಿದ್ದಾರೆ. ಅಲ್ಲಿಂದಾಚೆಗೆ ಅನೇಕ ಬಾರಿ ಕೃತ್ಯವೆಸಗಿದ್ದಾರೆ. 2019ರಲ್ಲಿ ಮದುವೆಯಾಗಲು ನಿರಾಕರಿಸಿದರು. ಏನಾದರೂ ಬಹಿರಂಗಪಡಿಸಿದರೆ, ವಿಡಿಯೋ ಸೋರಿಕೆ ಮಾಡುವುದಾಗಿ ಹೆದರಿಸುತ್ತಿದ್ದರು. ದೂರು ದಾಖಲಿಸಲಾಗಿದ್ದು, ಎಫ್ಐಆರ್ ದಾಖಲು ಮಾಡಿಕೊಳ್ಳಲು ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ. ಒಂದು ವೇಳೆ ರೇಣುಗೆ ಏನಾದರೂ ಆದರೆ ನ್ಯಾಯಾಲಯ ಮೆಟ್ಟಿಲೇರುತ್ತೇವೆ. ಮುಂದಾಗುವುದಕ್ಕೆಲ್ಲ ಧನಂಜಯ್ ಅವರೇ ನೇರ ಹೊಣೆ ಎಂದು ವಕೀಲ ರಮೇಶ್ ತ್ರಿಪಾಠಿ ಹೇಳಿದ್ದಾರೆ.
ಜ. 11ರಂದು ದೂರಿನ ಪ್ರತಿಯನ್ನು ಶೇರ್ ಮಾಡಿ ಟ್ವೀಟ್ ಮಾಡಿರುವ ರೇಣು ಶರ್ಮಾ, ನಾನು ಸಚಿವ ಧನಂಜಯ್ ವಿರುದ್ಧ ಅತ್ಯಾಚಾರ ಮತ್ತು ಬೆದರಿಕೆ ಪ್ರಕರಣ ದಾಖಲಿಸಿದ್ದೇನೆ. ಈವರೆಗೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಮಹಾರಾಷ್ಟ್ರ ಪೊಲೀಸರು ನನ್ನ ದೂರಿನ ಬಗ್ಗೆ ನಿರಾಸಕ್ತಿ ತೋರಿದ್ದಾರೆ ಎಂದು ಆರೋಪಿಸಿ ನನ್ನ ಜೀವ ಅಪಾಯದಲ್ಲಿದೆ ಸಹಾಯ ಮಾಡಿ ಎಂದು ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಪತ್ನಿ ಮಮತಾರಿಗೆ ಮನವಿ ಮಾಡಿದ್ದಾರೆ. ಅಲ್ಲದೆ, ಪ್ರಧಾನಿ ಮೋದಿ ಅವರಿಗೂ ಟ್ಯಾಗ್ ಮಾಡಿದ್ದಾರೆ. (ಏಜೆನ್ಸೀಸ್)